ಹಾರ್ಮುಝ್ ಜಂಟಿ ಸಮಿತಿಯ ಸಭೆ ನಡೆಸಿದ ಇರಾನ್, ಒಮಾನ್

Photo Credit : X
ಟೆಹರಾನ್, ಜೂ. 29: ಹಾರ್ಮುಝ್ ಜಲಸಂಧಿಯ ನಿರ್ವಹಣೆ ಕುರಿತು ಇರಾನ್ ಮತ್ತು ಒಮಾನ್ ತಮ್ಮ ಮೊದಲ ಸಭೆಯನ್ನು ನಡೆಸಿವೆ ಎಂದು ಇರಾನ್ ನ ವಿದೇಶಾಂಗ ಸಚಿವಾಲಯ ಸೋಮವಾರ ತಿಳಿಸಿದೆ.
ಮಧ್ಯಪ್ರಾಚ್ಯದಲ್ಲಿನ ಸಂಘರ್ಷವನ್ನು ಕೊನೆಗೊಳಿಸುವ ಉದ್ದೇಶದಿಂದ ಇರಾನ್ ಮತ್ತು ಅಮೆರಿಕ ನಡುವೆ ಪ್ರಾಥಮಿಕ ಒಪ್ಪಂದ ಏರ್ಪಟ್ಟ ನಂತರ, ಇರಾನ್ ಮತ್ತು ಒಮಾನ್ ನಡುವೆ ನಡೆದ ಮೊದಲ ಸಭೆ ಇದಾಗಿದ್ದು, ಮಸ್ಕತ್ ನಲ್ಲಿ 'ಜಂಟಿ ಹಾರ್ಮುಝ್ ಸಮಿತಿ'ಯ ಅಡಿಯಲ್ಲಿ ಈ ಸಭೆಯನ್ನು ಆಯೋಜಿಸಲಾಗಿತ್ತು.
"ಮಸ್ಕತ್ ಪ್ರವಾಸದ ಸಂದರ್ಭದಲ್ಲಿ, ಒಮಾನ್ ನ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಅಬ್ದುಲಜೀಜ್ ಅಲ್-ಹಿನೈ ಅವರೊಂದಿಗೆ ಹಾರ್ಮುಝ್ ಜಂಟಿ ಸಮಿತಿಯ ಮೊದಲ ಸಭೆಯನ್ನು ನಡೆಸಲಾಯಿತು. ಜಲಸಂಧಿಗೆ ಸಂಬಂಧಿಸಿದ ಪ್ರಸ್ತುತ ವಿಷಯಗಳನ್ನು ಪರಾಮರ್ಶಿಸಿದ್ದು, ಇಸ್ಲಾಮಾಬಾದ್ ತಿಳುವಳಿಕಾ ಒಪ್ಪಂದದ ಐದನೇ ಪ್ಯಾರಾಗ್ರಾಫ್ ಹಾಗೂ ಕರಾವಳಿ ರಾಷ್ಟ್ರಗಳ ಸಾರ್ವಭೌಮ ಹಕ್ಕುಗಳ ಚೌಕಟ್ಟಿನೊಳಗೆ ಜಲಸಂಧಿಯ ಭವಿಷ್ಯದ ನಿರ್ವಹಣೆ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದೇವೆ" ಎಂದು ಇರಾನ್ ನ ಉಪ ವಿದೇಶಾಂಗ ಸಚಿವ ಕಾಜೆಮ್ ಘರಿಬಾಬಾದಿ ಅವರು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.




