ಪರ್ಷಿಯನ್ ಕೊಲ್ಲಿಯಲ್ಲಿ ನೂತನ ನಿರ್ಬಂಧಿತ ವಲಯ ಘೋಷಣೆಗೆ ಇರಾನ್ ಸಿದ್ಧತೆ

Photo Credit : AP
ಟೆಹರಾನ್, ಸೆ. 7: ಮುಂಬರುವ ದಿನಗಳಲ್ಲಿ ಪರ್ಷಿಯನ್ ಕೊಲ್ಲಿಯಲ್ಲಿ ನೂತನ ನಿರ್ಬಂಧಿತ ವಲಯವನ್ನು ಘೋಷಿಸುವುದಾಗಿ ಮತ್ತು ಹಾರ್ಮುಝ್ ಜಲಸಂಧಿಯ ಮೂಲಕ ಹೊಸ ಹಡಗು ಸಾರಿಗೆ ಕಾರಿಡಾರ್ ನ ನಕ್ಷೆಗಳನ್ನು ಬಿಡುಗಡೆ ಮಾಡುವುದಾಗಿ ಇರಾನ್ ಹೇಳಿದೆ.
ಅಮೆರಿಕದ ನೌಕಾ ದಿಗ್ಬಂಧನದ ರೇಖೆಯಿಂದ ಈ ಹೊಸ ನಿರ್ಬಂಧಿತ ವಲಯವು ಪ್ರಾರಂಭವಾಗಲಿದ್ದು, ಅದು ಕೊಲ್ಲಿಯ ಇತರ ಪ್ರದೇಶಗಳಿಗೂ ವಿಸ್ತರಿಸಲಿದೆ ಎಂದು ಇರಾನ್ ನ ರಾಷ್ಟ್ರೀಯ ಭದ್ರತಾ ಸಮಿತಿಯ ಕಾರ್ಯದರ್ಶಿ ಮೊಹ್ಸೆನ್ ರೆಜಾಯಿ ತಿಳಿಸಿದ್ದಾರೆ.
ಹೊಸ ವಲಯಕ್ಕೆ ಪ್ರವೇಶಿಸುವ ಯಾವುದೇ ಹಡಗನ್ನು ನಿರ್ಬಂಧಗಳ ಪಟ್ಟಿಗೆ ಸೇರಿಸಲಾಗುವುದು. ಇದರ ಜೊತೆಗೆ, ಹಾರ್ಮುಝ್ ಜಲಸಂಧಿಯ ಮೂಲಕ ಹಾದುಹೋಗುವ ಮಾರ್ಗಗಳನ್ನು ವಿವರವಾಗಿ ತೋರಿಸುವ ನಕ್ಷೆಗಳನ್ನು ಶೀಘ್ರದಲ್ಲೇ ಅನುಮೋದಿಸಲಾಗುವುದು ಎಂದು ರೆಜಾಯಿ ಹೇಳಿದ್ದಾರೆ.
ಇರಾನ್ ಮತ್ತು ಒಮಾನ್ ಜಲ ಗಡಿಯಲ್ಲಿ ಬರುವ ಹಾಗೂ ಇರಾನ್ ನಿರ್ವಹಣೆ ಮಾಡಲಿರುವ ನೂತನ ಅಂತರರಾಷ್ಟ್ರೀಯ ಕಾರಿಡಾರ್ ನ ನಕ್ಷೆಗಳಿಗೆ ಒಪ್ಪಿಗೆ ಸಿಕ್ಕಿದ್ದು, ಮುಂಬರುವ ದಿನಗಳಲ್ಲಿ ಅದಕ್ಕೆ ಸಹಿ ಹಾಕಲಾಗುವುದು. ಅಮೆರಿಕನ್ನರು ಇರಾನ್ ವಿರುದ್ಧದ ವಿಧ್ವಂಸಕ ಕೃತ್ಯಗಳು, ಬೆದರಿಕೆಗಳು ಮತ್ತು ದಾಳಿಗಳನ್ನು ನಿಲ್ಲಿಸಿದಾಗ ಮಾತ್ರ ನಾವು ಹಾರ್ಮುಝ್ ಜಲಸಂಧಿಯನ್ನು ಮುಕ್ತವಾಗಿಡಲು ಬದ್ಧರಾಗಿರುತ್ತೇವೆ ಎಂದು ಅವರು ಹೇಳಿದ್ದಾರೆ.




