ಅಮೆರಿಕದ ಜೊತೆ ಪರಮಾಣು ಮಾತುಕತೆಗೆ ಇರಾನ್ ನಕಾರ
ಟ್ರಂಪ್ ಒತ್ತಡಕ್ಕೆ ಬಗ್ಗುವುದಿಲ್ಲ: ಇರಾನ್ ವಿದೇಶಾಂಗ ಸಚಿವ

PC | REUTERS
ಟೆಹ್ರಾನ್: ಇರಾನ್ ಮೇಲೆ ಮಿಲಿಟರಿ ಕ್ರಮದ ಬಗ್ಗೆ ಎರಡು ವಾರದಲ್ಲಿ ನಿರ್ಧರಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಯ ಬೆನ್ನಲ್ಲೇ, ಅಮೆರಿಕದ ಜೊತೆ ಪರಮಾಣು ಮಾತುಕತೆ ನಡೆಸುವುದನ್ನು ಇರಾನ್ ಸ್ಪಷ್ಟವಾಗಿ ನಿರಾಕರಿಸಿದೆ.
ಮಾತುಕತೆಗೆ ಮುಂದಾಗುವಂತೆ ಅಮೆರಿಕ ಕೇಳಿದೆ. ಆದರೆ ನಾವು `ಇಲ್ಲ' ಎಂದು ಉತ್ತರಿಸಿದ್ದೇವೆ. ಟ್ರಂಪ್ ಬಳಸುವ ಭಾಷೆಯನ್ನು ಗಮನಿಸಿದರೆ ಇಸ್ರೇಲ್ ದಾಳಿಯಲ್ಲಿ ಅಮೆರಿಕ ಈಗಾಗಲೇ ಭಾಗಿಯಾಗಿರುವುದು ಸ್ಪಷ್ಟವಾಗಿದೆ ಎಂದು ಇರಾನ್ ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಹೇಳಿದ್ದಾರೆ. ಮಾತುಕತೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಅಮೆರಿಕನ್ನರು ಪದೇ ಪದೇ ಸಂದೇಶ ರವಾನಿಸುತ್ತಿದ್ದಾರೆ. ಆದರೆ ಆಕ್ರಮಣ ನಿಲ್ಲುವವರೆಗೆ ರಾಜತಾಂತ್ರಿಕತೆ ಮತ್ತು ಮಾತುಕತೆಗೆ ಜಾಗವಿಲ್ಲ ಎಂದು ನಾವು ಸ್ಪಷ್ಟಪಡಿಸಿದ್ದೇವೆ.
ಇರಾನ್ ಮತ್ತು ಇಸ್ರೇಲ್ ನಡುವೆ ಮುಂದುವರಿದಿರುವ ಸಂಘರ್ಷವನ್ನು ಕೊನೆಗೊಳಿಸುವ ಒತ್ತಾಯ ಈಗಾಗಲೇ ಆರಂಭವಾಗಿದೆ ಮತ್ತು ಇನ್ನಷ್ಟು ಹೆಚ್ಚಲಿದೆ. ನಾವು ಕಾನೂನುಬದ್ಧ ಆತ್ಮರಕ್ಷಣೆಯಲ್ಲಿ ತೊಡಗಿದ್ದೇವೆ ಮತ್ತು ಇದು ಮುಂದುವರಿಯಲಿದೆ. ಇಸ್ರೇಲ್ ನ ಆಕ್ರಮಣ ಮುಂದುವರಿಯುತ್ತಿರುವಾಗ ಯಾವುದೇ ಮಾತುಕತೆಗೆ ಇರಾನ್ ಸಿದ್ಧವಿಲ್ಲ ಎಂದವರು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಇರಾನ್ ನೊಂದಿಗೆ ಮಾತುಕತೆ ನಡೆಯುವ ಅಥವಾ ನಡೆಯದಿರುವ ಸಾಕಷ್ಟು ಸಾಧ್ಯತೆಯಿದೆ ಎಂಬ ಅಂಶವನ್ನು ಆಧಾರವಾಗಿಟ್ಟುಕೊಂಡು ಇರಾನ್ ಮೇಲೆ ಅಮೆರಿಕ ದಾಳಿ ನಡೆಸಬೇಕೇ ಎಂಬ ಬಗ್ಗೆ ಮುಂದಿನ 2 ವಾರಗಳೊಳಗೆ ನಿರ್ಧರಿಸುವುದಾಗಿ ಟ್ರಂಪ್ ಹೇಳಿದ್ದರು. ದಾಳಿಯ ಯೋಜನೆಯನ್ನು ಟ್ರಂಪ್ ಅನುಮೋದಿಸಿದ್ದಾರೆ. ಆದರೆ ಇರಾನ್ ಪರಮಾಣು ಕಾರ್ಯಕ್ರಮದ ಬಗ್ಗೆ ಮಾತುಕತೆಗೆ ಮುಂದಾಗುತ್ತದೆಯೇ ಎಂಬುದನ್ನು ಕಾದು ನೋಡಲು ಅವರು ಬಯಸಿದ್ದಾರೆ ಎಂದು `ದಿ ವಾಲ್ಸ್ಟ್ರೀಟ್ ಜರ್ನಲ್' ವರದಿ ಮಾಡಿದೆ. ಅಮೆರಿಕದ ಮಿಲಿಟರಿ ಕ್ರಮವು ಅತ್ಯಂತ ಅಪಾಯಕಾರಿ ಹೆಜ್ಜೆಯಾಗಿದೆ ಎಂದು ಇರಾನ್ ನ ಮಿತ್ರರಾಷ್ಟ್ರ ರಶ್ಯ ಹೇಳಿದೆ.
ಈ ಮಧ್ಯೆ, ಇಸ್ರೇಲ್ ಆಕ್ರಮಣವನ್ನು ಬೇಷರತ್ತಾಗಿ ನಿಲ್ಲಿಸುವುದು ಯುದ್ಧವನ್ನು ಕೊನೆಗೊಳಿಸುವ ಏಕೈಕ ಮಾರ್ಗವಾಗಿದೆ. ಶತ್ರುವಿನ ದಾಳಿ ಮುಂದುವರಿದರೆ ನಮ್ಮ ಪ್ರತಿಕ್ರಿಯೆ ಇನ್ನಷ್ಟು ಕಠಿಣವಾಗಿರಲಿದೆ. ಇರಾನ್ ಯಾವತ್ತೂ ಶಾಂತಿಯನ್ನು ಬಯಸುತ್ತದೆ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಝೆಷ್ಕಿಯಾನ್ ಹೇಳಿದ್ದಾರೆ.







