ತಾತ್ಕಾಲಿಕ ಕದನವಿರಾಮ ತಿರಸ್ಕರಿಸಿದ ಇರಾನ್: 45 ದಿನಗಳ ಕದನ ವಿರಾಮ ಪ್ರಸ್ತಾವನೆ ಮುಂದಿಟ್ಟ ಅಮೆರಿಕ

ಡೊನಾಲ್ಡ್ ಟ್ರಂಪ್(AP) , ಮೊಜ್ತಬಾ ಖಾಮಿನೈ( X/@MKhamenei_ir)
ದುಬೈ, ಎ. 6: ಹಾರ್ಮುಝ್ ಜಲಸಂಧಿಯನ್ನು ತೆರೆಯಲು ಅಮೆರಿಕ ನೀಡಿರುವ ಗಡುವು ಮುಕ್ತಾಯಗೊಳ್ಳಲು ಒಂದು ದಿನ ಬಾಕಿಯಿರುವಂತೆಯೇ, ಅಮೆರಿಕ ಮತ್ತು ಇರಾನ್ ಸೋಮವಾರ ತಮ್ಮ ಐದು ವಾರಗಳ ಸಶಸ್ತ್ರ ಸಂಘರ್ಷವನ್ನು ಕೊನೆಗೊಳಿಸುವ ಒಪ್ಪಂದದ ರೂಪುರೇಷೆಗಳನ್ನು ಪರಿಶೀಲಿಸಿವೆ. ಆದರೆ, ಜಲಸಂಧಿಯನ್ನು ಕ್ಷಿಪ್ರವಾಗಿ ತೆರೆಯಬೇಕೆಂಬ ಅಮೆರಿಕದ ಒತ್ತಡಕ್ಕೆ ಮಣಿಯಲು ಇರಾನ್ ನಿರಾಕರಿಸಿದೆ. ಯುದ್ಧವನ್ನು ಕೊನೆಗೊಳಿಸುವ ಕುರಿತ ಅಮೆರಿಕದ ಪ್ರಸ್ತಾವನೆಗೆ ಸಂಬಂಧಿಸಿ ತನ್ನ 10 ಅಂಶಗಳ ಉತ್ತರವನ್ನು ಪಾಕಿಸ್ತಾನದ ಮೂಲಕ ವಾಶಿಂಗ್ಟನ್ಗೆ ಕಳುಹಿಸಿರುವುದಾಗಿ ಇರಾನ್ ತಿಳಿಸಿದೆ. ಈ ಉತ್ತರದಲ್ಲಿ ಇರಾನ್ ತಾತ್ಕಾಲಿಕ ಕದನವಿರಾಮವೇರ್ಪಡುವುದನ್ನು ತಳ್ಳಿಹಾಕಿದೆ ಮತ್ತು ತನ್ನದೇ ನಿಬಂಧನೆಗಳಿಗೆ ಅನುಗುಣವಾಗಿ ಯುದ್ಧ ಕೊನೆಗೊಳ್ಳಬೇಕೆಂದು ಶರತ್ತು ಹಾಕಿದೆ.
ಅಮೆರಿಕ ಹಾಗೂ ಇರಾನ್ ನಡುವೆ 45 ದಿನಗಳ ಕದನವಿರಾಮವನ್ನು ಏರ್ಪಡಿಸುವ ಕರಡು ಪ್ರಸ್ತಾವನೆಯನ್ನು ರಚಿಸಲಾಗಿದೆ. ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅದಕ್ಕೆ ಇನ್ನಷ್ಟೇ ಅನುಮೋದನೆ ನೀಡಬೇಕಾಗಿದೆ. ಅಲ್ಲಿಯವರೆಗೆ ಇರಾನ್ ವಿರುದ್ಧ ಸೇನಾಕ್ರಮಣ ‘ಅಪರೇಶನ್ ಎಪಿಕ್ ಫ್ಯೂರಿ’ ಮುಂದುವರಿಯಲಿದೆ ಎಂದು ಶ್ವೇತಭವನ ತಿಳಿಸಿದೆ.
ಇರಾನ್ ಜೊತೆ ಕದನ ವಿರಾಮವನ್ನು ಏರ್ಪಡಿಸುವ ಪ್ರಸ್ತಾವದ ಕುರಿತು ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೇಳಲಾದ ಪ್ರಶ್ನೆಗೆ ಶ್ವೇತಭವನದ ಅಧಿಕಾರಿಯೊಬ್ಬರು ಹೀಗೆ ಉತ್ತರಿಸಿದ್ದಾರೆ.
ಇಂಧನ ಹೊತ್ತ ಹಡಗುಗಳು ಹಾರ್ಮುಝ್ ಜಲಸಂಧಿಯ ಮೂಲಕ ಹಾದು ಹೋಗಲು ಅವಕಾಶ ನೀಡುವ ಒಪ್ಪಂದಕ್ಕೆ ಮಂಗಳವಾರ ಸಂಜೆಯ ಒಳಗೆ ಇರಾನ್ ಸಹಿ ಹಾಕದಿದ್ದರೆ ಟೆಹ್ರಾನ್ಗೆ ‘‘ನರಕ ದರ್ಶನ’’ ಮಾಡಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದರು.
ರವಿವಾರ ರಾತ್ರಿ ನಿರಂತರ ಮಾತುಕತೆಗಳ ಮೂಲಕ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಈ ಒಪ್ಪಂದ ರೂಪುಗೊಂಡಿದೆ. ಈ ಒಪ್ಪಂದವು ತಕ್ಷಣ ಯುದ್ಧವಿರಾಮ ಜಾರಿಗೆ ಬರಬೇಕೆಂಬ ಪ್ರಸ್ತಾವವನ್ನು ಹೊಂದಿದೆ. ಯುದ್ಧವಿರಾಮದ ಬಳಿಕ, ಶಾಂತಿ ಒಪ್ಪಂದವೊಂದರ ಬಗ್ಗೆ ಮಾತುಕತೆಗಳು ನಡೆಯಬೇಕು ಹಾಗೂ ಈ ಮಾತುಕತೆಗಳು ಮುಂದಿನ 15- 20 ದಿನಗಳಲ್ಲಿ ಕೊನೆಗೊಳ್ಳಬೇಕು ಎಂಬುದಾಗಿಯೂ ಹಾಲಿ ಕರಡು ಒಪ್ಪಂದ ಹೇಳುತ್ತದೆ ಎಂದು ಮೂಲವೊಂದು ತಿಳಿಸಿದೆ ಎಂದು ‘ರಾಯ್ಟರ್ಸ್’ ಸುದ್ದಿಸಂಸ್ಥೆ ವರದಿ ಮಾಡಿದೆ.
ಪಾಕಿಸ್ತಾನಿ ಸೇನೆಯ ಮುಖ್ಯಸ್ಥ ಫೀಲ್ಡ್ ಮಾರ್ಶಲ್ ಅಸೀಮ್ ಮುನೀರ್ ರಾತ್ರಿಯಿಡೀ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವಾನ್ಸ್, ವಿಶೇಷ ಪ್ರತಿನಿಧಿ ಸ್ಟೀವ್ ವಿಟ್ಕಾಫ್ ಮತ್ತು ಇರಾನ್ ವಿದೇಶ ಸಚಿವ ಅಬ್ಬಾಸ್ ಅರಾಕ್ಚಿ ಜೊತೆ ಸಂಪರ್ಕದಲ್ಲಿದ್ದರು ಎಂದು ಮೂಲ ಹೇಳಿದೆ.
ಹಾರ್ಮುಝ್ ಜಲಸಂಧಿಯನ್ನು ಮಂಗಳವಾರದ ಒಳಗೆ ತೆರೆಯುವ ಒಪ್ಪಂದವೊಂದಕ್ಕೆ ಇರಾನ್ ಸಹಿ ಹಾಕದಿದ್ದರೆ ಆ ದೇಶದ ಇಂಧನ ಮತ್ತು ಸಾರಿಗೆ ಮೂಲಸೌಕರ್ಯಗಳ ಮೇಲೆ ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸಲಾಗುವುದು ಎಂಬುದಾಗಿ ‘ಟ್ರುತ್ ಸೋಶಿಯಲ್’ನಲ್ಲಿ ರವಿವಾರ ಹಾಕಿದ ಸಂದೇಶವೊಂದರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದರು. ತಡ ರವಿವಾರ ಹಾಕಿದ ಇನ್ನೊಂದು ಸಂದೇಶದಲ್ಲಿ ಟ್ರಂಪ್ ನಿಖರವಾದ ಗಡುವು ನೀಡಿದ್ದರು- ‘‘ಮಂಗಳವಾರ ರಾತ್ರಿ 8 ಗಂಟೆ ಈಸ್ಟರ್ನ್ ಟೈಮ್! (ಬುಧವಾರ 0000 ಜಿಎಮ್ಟಿ)- (ಭಾರತೀಯ ಕಾಲಮಾನ ಬುಧವಾರ ಮುಂಜಾನೆ 5:30)’’.
ಇರಾನ್ ಹಿತಾಸಕ್ತಿಗೆ ಪೂರಕವಾದ ಶರತ್ತುಗಳು: ವಿದೇಶಾಂಗ ಸಚಿವಾಲಯ
ಯುದ್ಧವಿರಾಮ ಒಪ್ಪಂದದ ಬಗ್ಗೆ ಇರಾನ್ ತನ್ನ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ತನ್ನ ನಿಲುವುಗಳನ್ನು ಸಿದ್ಧಪಡಿಸಿದೆ ಹಾಗೂ ಅವುಗಳನ್ನು ಮಧ್ಯವರ್ತಿಗಳ ಮೂಲಕ ಕಳುಹಿಸಿಕೊಡಲಾಗಿದೆ ಎಂದು ಇರಾನ್ ವಿದೇಶಾಂಗ ಸಚಿವಾಲಯ ಸೋಮವಾರ ತಿಳಿಸಿದೆ.
ಒಪ್ಪಂದಕ್ಕಾಗಿ ತಾನು ಸಿದ್ಧಪಡಿಸಿರುವ ಷರತ್ತುಗಳ ವಿವರಗಳನ್ನು ಸೂಕ್ತ ಸಮಯದಲ್ಲಿ ಘೋಷಿಸಲಾಗುವುದು ಎಂದು ಸಚಿವಾಲಯದ ವಕ್ತಾರ ಇಸ್ಮಾಯೀಲ್ ಬಾಗೇಯಿ ತಿಳಿಸಿದರು. ಆದರೆ, ತಾನು ಕಳುಹಿಸಿರುವ ಯುದ್ಧವಿರಾಮ ಅಂಶಗಳಿಗೂ, ಗಡುವುಗಳು ಮತ್ತು ಯುದ್ಧಾಪರಾಧಗಳನ್ನು ನಡೆಸುವ ಬೆದರಿಕೆಗಳಿಗೂ ಸಂಬಂಧವಿಲ್ಲ’’ ಎಂದು ಅವರು ನುಡಿದರು.
‘‘ನ್ಯಾಯಸಮ್ಮತ ಎಂಬುದಾಗಿ ತಾನು ಭಾವಿಸುವ ಬೇಡಿಕೆಗಳನ್ನು ಸ್ಪಷ್ಟವಾಗಿ ಮುಂದಿಡಲು ಇರಾನ್ ಹಿಂಜರಿಯುವುದಿಲ್ಲ ಹಾಗೂ ಹಾಗೆ ಮಾಡುವುದನ್ನು ರಾಜಿಯ ಲಕ್ಷಣ ಎಂಬುದಾಗಿ ವ್ಯಾಖ್ಯಾನಿಸಬಾರದು. ಬದಲಾಗಿ, ತನ್ನ ನಿಲುವುಗಳ ಬಗ್ಗೆ ಅದು ಹೊಂದಿರುವ ಆತ್ಮವಿಶ್ವಾಸದ ಅಭಿವ್ಯಕ್ತಿ ಅದು ಎಂಬುದಾಗಿ ಭಾವಿಸಬೇಕು’’ ಎಂದು ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡಿದ ವಕ್ತಾರರು ತಿಳಿಸಿದರು.
15 ಅಂಶಗಳ ಯೋಜನೆ ಮುಂತಾದ ಅಮೆರಿಕದ ಮೊದಲಿನ ಬೇಡಿಕೆಗಳನ್ನು ತಿರಿಸ್ಕರಿಸಲಾಗಿದೆ ಎಂದು ಅವರು ಹೇಳಿದರು.







