ಅಮೆರಿಕ ಅಧ್ಯಕ್ಷರ ಜೊತೆಗಿನ ಮಾತುಕತೆ ತಳ್ಳಿಹಾಕಿದ ಇರಾನ್ : ಟ್ರಂಪ್ ಅಧಿಕಾರಾವಧಿ ಮುಗಿಯುವವರೆಗೆ ಕಾಯಲು ನಿರ್ಧಾರ

ಡೊನಾಲ್ಡ್ ಟ್ರಂಪ್ | Photo Credit : PTI
ಟೆಹರಾನ್, ಆ.11: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆಯನ್ನು ಶಮನಗೊಳಿಸುವ ಮತ್ತು ಹಾರ್ಮುಝ್ ಜಲಸಂಧಿಯನ್ನು ಮರುತೆರೆಯುವ ಪ್ರಯತ್ನಗಳಿಗೆ ದೊಡ್ಡ ಹಿನ್ನಡೆಯಾಗಿದ್ದು ಡೊನಾಲ್ಡ್ ಟ್ರಂಪ್ ಆಡಳಿತದೊಂದಿಗೆ ಯಾವುದೇ ಭವಿಷ್ಯದ ಮಾತುಕತೆಗಳನ್ನು ಇರಾನ್ ತಳ್ಳಿಹಾಕಿದೆ.
ಅಮೆರಿಕ ಅಧ್ಯಕ್ಷರ ಅಧಿಕಾರಾವಧಿ 2029ರ ಜನವರಿ 20 ರಂದು ಮುಗಿಯುವವರೆಗೆ ಕಾಯುವುದಾಗಿ ಪಾರ್ಲಿಮೆಂಟ್ ಸ್ಪೀಕರ್ ಗಾಲಿಬಾಫ್ ಅವರ ಸಲಹೆಗಾರರನ್ನು ಉಲ್ಲೇಖಿಸಿ ಇರಾನ್ ಮಾಧ್ಯಮಗಳು ವರದಿ ಮಾಡಿವೆ. ` ಟ್ರಂಪ್ ನಮ್ಮೊಂದಿಗೆ ಯಾವುದೇ ಒಪ್ಪಂದಕ್ಕೆ ತಲುಪುವುದಿಲ್ಲ. ಅವರ ಅಧಿಕಾರಾವಧಿ ಮುಗಿಯುವವರೆಗೆ ನಾವು ಅವರನ್ನು ಹೀಗೆಯೇ ನಿಭಾಯಿಸುತ್ತೇವೆ. ಟ್ರಂಪ್ ಅವರ ಅಧಿಕಾರಾವಧಿ ಮುಗಿಯುವವರೆಗೆ ಇರಾನ್ ತನ್ನ ಪ್ರಸ್ತುತ ನಿಲುವನ್ನೇ ಮುಂದುವರಿಸಲಿದೆ ಎಂದು ಗಾಲಿಬಾಫ್ ಅವರ ಸಲಹೆಗಾರ ಮಜೀದ್ ಶೇಕರಿ ಹೇಳಿದ್ದಾರೆ.
ವಿಜಯದ ಹಾದಿಯು ಹೋರಾಟವೂ ಅಲ್ಲ ಅಥವಾ ಒಪ್ಪಂದವೂ ಅಲ್ಲ. ಇದು ಗೆಲುವು ಸಿಗುವವರೆಗೂ ಯುದ್ಧವೂ ಇಲ್ಲ, ಶಾಂತಿಯೂ ಇಲ್ಲ ಎಂಬ ಸ್ಥಿತಿಯನ್ನು ನಿರ್ವಹಿಸುವುದಾಗಿದೆ. ಅಮೆರಿಕ ಜೊತೆಗಿನ ಮಾತುಕತೆಯನ್ನು ಬಹಿರಂಗವಾಗಿ ಖಚಿತಪಡಿಸುವುದು ಸಂಪೂರ್ಣ ಮೂರ್ಖತನವಾಗುತ್ತದೆ ಎಂದು ಮುಜೀದ್ ಶೇಕರಿ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
300 ಬಿಲಿಯನ್ ಡಾಲರ್ ಪರಿಹಾರ, ಮುಟ್ಟುಗೋಲು ಹಾಕಿಕೊಳ್ಳಲಾದ ಆಸ್ತಿಗಳ ಬಿಡುಗಡೆ ಮತ್ತು ಅಮೆರಿಕನ್ ಪಡೆಗಳ ಹಿಂಪಡೆಯುವಿಕೆ ಸೇರಿದಂತೆ ತನ್ನ ಷರತ್ತುಗಳನ್ನು ಅಮೆರಿಕ ಒಪ್ಪಿಕೊಳ್ಳುವವರೆಗೆ ಹಾರ್ಮುಝ್ ಜಲಸಂಧಿ ಮುಚ್ಚಿರುತ್ತದೆ ಎಂದು ಇರಾನ್ ಪಟ್ಟು ಹಿಡಿದಿರುವಾಗಲೇ ಮಾತುಕತೆಯ ಕುರಿತು ಇರಾನ್ ಈ ನಿಲುವು ತಳೆದಿದೆ.






