ಶತ್ರು ಸಂಪರ್ಕಿತ ಹಡಗುಗಳನ್ನು ಬಿಟ್ಟು ಎಲ್ಲರಿಗೂ ಹಾರ್ಮುಝ್ ಜಲಸಂಧಿ ಮುಕ್ತ: ಇರಾನ್

ಸಾಂದರ್ಭಿಕ ಚಿತ್ರ (AI)
ದುಬೈ: ಇರಾನಿನ ಶತ್ರುಗಳಿಗೆ ಸಂಬಂಧಿಸಿದ ಹಡಗುಗಳನ್ನು ಹೊರತುಪಡಿಸಿ ಎಲ್ಲ ನೌಕಾ ಸಾಗಾಣಿಕೆಗಳಿಗೆ ಹಾರ್ಮುಝ್ ಜಲಸಂಧಿಯು ಮುಕ್ತವಾಗಿದೆ ಎಂದು ವಿಶ್ವಸಂಸ್ಥೆಯ ಕಡಲ ಸಂಸ್ಥೆಗೆ ಇರಾನ್ ಪ್ರತಿನಿಧಿ ಅಲಿ ಮುಸಾವಿ ರವಿವಾರ ಹೇಳಿದ್ದಾರೆ. 48 ಗಂಟೆಗಳಲ್ಲಿ ಹಾರ್ಮುಝ್ ಜಲಸಂಧಿಯನ್ನು ಸಂಪೂರ್ಣವಾಗಿ ತೆರೆಯದಿದ್ದರೆ ಇರಾನಿನ ವಿದ್ಯುತ್ ಉತ್ಪಾದನಾ ಸ್ಥಾವರಗಳನ್ನು ಗುರಿಯಾಗಿಸಿಕೊಂಡು ದಾಳಿಗಳನ್ನು ನಡೆಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆದರಿಕೆಯ ಬಳಿಕ ಮುಸಾವಿಯವರ ಈ ಹೇಳಿಕೆ ಹೊರಬಿದ್ದಿದೆ.
ಅಮೆರಿಕ ಮತ್ತು ಇಸ್ರೇಲ್ ಜೊತೆ ಯುದ್ಧದ ನಡುವೆಯೇ ಹೆಚ್ಚಿನ ಹಡಗುಗಳು ಈ ಕಿರಿದಾದ ಜಲಮಾರ್ಗದ ಮೂಲಕ ಹಾದು ಹೋಗುವುದನ್ನು ಇರಾನ್ ನಿರ್ಬಂಧಿಸಿದೆ. ಜಾಗತಿಕ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲಗಳ ಅಗತ್ಯದ ಐದನೇ ಒಂದು ಭಾಗವು ಹಾರ್ಮುಝ್ ಜಲಸಂಧಿಯ ಮೂಲಕವೇ ಸಾಗುತ್ತಿದ್ದು,ಈ ಜಲಮಾರ್ಗ ಮುಚ್ಚಿದ್ದು ಜಾಗತಿಕ ಇಂಧನ ಕೊರತೆಯ ಬೆದರಿಕೆಯನ್ನೊಡ್ಡಿದೆ.
ಕಡಲ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಕೊಲ್ಲಿಯಲ್ಲಿ ನಾವಿಕರನ್ನು ರಕ್ಷಿಸಲು ಅಂತರರಾಷ್ಟ್ರೀಯ ಕಡಲ ಸಂಘಟನೆಯೊಂದಿಗೆ ಸಹಕರಿಸಲು ಇರಾನ್ ಸಿದ್ಧವಿದೆ ಎಂದು ತಿಳಿಸಿದ ಮುಸಾವಿ, ಇರಾನಿನ ಶತ್ರುಗಳೊಂದಿಗೆ ಸಂಬಂಧ ಹೊಂದಿರದ ಹಡಗುಗಳು ಇರಾನ್ ಸರಕಾರದ ಜೊತೆ ಭದ್ರತಾ ಮತ್ತು ಸುರಕ್ಷತಾ ವ್ಯವಸ್ಥೆಗಳ ಸಮನ್ವಯದೊಂದಿಗೆ ಜಲಸಂಧಿಯ ಮೂಲಕ ಸಾಗಬಹುದು ಎಂದರು.
ರಾಜತಾಂತ್ರಿಕತೆ ಇರಾನಿನ ಆದ್ಯತೆಯಾಗಿದೆ, ಆದಾಗ್ಯೂ ಆಕ್ರಮಣವನ್ನು ಸಂಪೂರ್ಣವಾಗಿ ನಿಲ್ಲಿಸುವುದರ ಜೊತೆಗೆ ಪರಸ್ಪರ ನಂಬಿಕೆ ಮತ್ತು ವಿಶ್ವಾಸ ಹೆಚ್ಚು ಮುಖ್ಯವಾಗಿದೆ ಎಂದು ಹೇಳಿದ ಮುಸಾವಿ, ಹಾರ್ಮುಝ್ ಜಲಸಂಧಿಯಲ್ಲಿನ ಪ್ರಸ್ತುತ ಪರಿಸ್ಥಿತಿಗೆ ಇರಾನ್ ವಿರುದ್ಧ ಇಸ್ರೇಲ್ ಮತ್ತು ಅಮೆರಿಕ ದಾಳಿಗಳು ಮೂಲ ಕಾರಣವಾಗಿವೆ ಎಂದರು.







