ಯುದ್ಧ ಕೊನೆಗೊಳಿಸುವ ಒಪ್ಪಂದಕ್ಕೆ ಲೆಬನಾನ್ನಿಂದ ಇಸ್ರೇಲ್ ಹಿಂದೆ ಸರಿಯುವುದು ಕಡ್ಡಾಯ: ಇರಾನ್

Photo Credit : PTI
ಟೆಹರಾನ್, ಜೂ.16: ಅಮೆರಿಕದೊಂದಿಗಿನ ಯುದ್ಧವನ್ನು ಕೊನೆಗೊಳಿಸುವ ಪ್ರಾಯೋಗಿಕ ಒಪ್ಪಂದದ ಪ್ರಕಾರ ಇಸ್ರೇಲ್ ತನ್ನ ಸೇನೆಯನ್ನು ಲೆಬನಾನ್ನಿಂದ ಹಿಂತೆಗೆದುಕೊಳ್ಳಬೇಕಾಗುತ್ತದೆ ಎಂದು ಇರಾನ್ ಮಂಗಳವಾರ ಪ್ರತಿಪಾದಿಸಿದೆ.
ಆದರೆ ಈ ನಿಬಂಧನೆಯನ್ನು ಇಸ್ರೇಲ್ ಈಗಾಗಲೇ ತಿರಸ್ಕರಿಸಿದೆ. `ದಕ್ಷಿಣ ಲೆಬನಾನ್ನಲ್ಲಿ ಇಸ್ರೇಲ್ನ ನಿರಂತರ ಆಕ್ರಮಣವು ಒಪ್ಪಂದದ ಉಲ್ಲಂಘನೆಯಾಗುತ್ತದೆ. ಇಸ್ರೇಲ್ ಪಡೆಗಳು ಆಕ್ರಮಿಸಿಕೊಂಡಿರುವ ಪ್ರದೇಶಗಳಿಂದ ಅವುಗಳನ್ನು ಹಿಂತೆಗೆದುಕೊಳ್ಳದ ಹೊರತು, ಯುದ್ಧವು ಸಂಪೂರ್ಣವಾಗಿ ಕೊನೆಗೊಂಡಂತೆ ಆಗುವುದಿಲ್ಲ. ಇರಾನ್ ಯುದ್ಧದ ಅಂತ್ಯವು ಲೆಬನಾನ್ ಮೇಲಿನ ಇಸ್ರೇಲ್ ಆಕ್ರಮಣದ ಅಂತ್ಯವನ್ನೂ ಒಳಗೊಂಡಿದೆ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಹೇಳಿದ್ದಾರೆ.
ಮಧ್ಯಪ್ರಾಚ್ಯಕ್ಕೆ ಸಂಬಂಧಿಸಿದ ಮಹತ್ವದ ಬೆಳವಣಿಗೆಗಳು:
ಇರಾನ್ನ ಪರಮಾಣು ಕಾರ್ಯಕ್ರಮದ ಕುರಿತು ಅಮೆರಿಕದೊಂದಿಗಿನ ಮಾತುಕತೆಯ ಅಂತಿಮ ಹಂತದಲ್ಲಿ ಮಾತ್ರ ಚರ್ಚಿಸಲಾಗುವುದು. ಉಭಯ ದೇಶಗಳ ನಡುವಿನ ತಿಳುವಳಿಕಾ ಒಪ್ಪಂದವು ಜೂನ್ 19ರಂದು ಅಧಿಕೃತವಾಗಿ ಜಾರಿಗೆ ಬರಲಿದ್ದು ಅಂದು ಸ್ವಿಟ್ಜಲೆರ್ಂಡ್ನಲ್ಲಿ ಅಮೆರಿಕ-ಇರಾನ್ ನಡುವೆ ಹೊಸ ಸುತ್ತಿನ ಮಾತುಕತೆಗಳು ಪ್ರಾರಂಭವಾಗಲಿವೆ ಎಂದು ಇರಾನ್ ಹೇಳಿದೆ.
ವಿಶ್ವದಾದ್ಯಂತ ತೈಲ ಮತ್ತು ಅನಿಲ ಬೆಲೆಗಳ ಏರಿಕೆಯಿಂದ ಆರ್ಥಿಕತೆಯ ಮೇಲೆ ಉಂಟಾಗುತ್ತಿರುವ ಆಘಾತವನ್ನು ಕೊನೆಗೊಳಿಸಲು, ಹಾರ್ಮುಝ್ ಜಲಸಂಧಿಯನ್ನು ಟ್ಯಾಂಕರ್ ಸಂಚಾರಕ್ಕೆ ಯಾವುದೇ ಷರತ್ತುಗಳಿಲ್ಲದೆ ಮುಕ್ತವಾಗಿಡುವುದು ಅತ್ಯಗತ್ಯ ಎಂದು ಅಂತರರಾಷ್ಟ್ರೀಯ ಇಂಧನ ಸಂಸ್ಥೆಯ(ಐಇಎ) ಮುಖ್ಯಸ್ಥರು ಮಂಗಳವಾರ ಹೇಳಿದ್ದಾರೆ.
ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವುದಿಲ್ಲ ಎಂದು ಖಾತರಿಪಡಿಸುವುದು ಒಪ್ಪಂದದ ಮುಖ್ಯ ಉದ್ದೇಶವಾಗಿದೆ. ಒಂದು ವೇಳೆ ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದಲು ಮುಂದಾದರೆ ಪರಿಣಾಮ ಭೀಕರವಾಗಿರಲಿದೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ.
ಶಾಂತಿ ಒಪ್ಪಂದಕ್ಕೆ ಭದ್ರತಾ ಮಂಡಳಿ ಮುದ್ರೆ ಒತ್ತಲು ಇರಾನ್ ಚಿಂತನೆ
ಇರಾನ್ ಮತ್ತು ಅಮೆರಿಕ ನಡುವಿನ ಶಾಂತಿ ಒಪ್ಪಂದಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮುದ್ರೆ ಒತ್ತಲು ಇರಾನ್ ಬಯಸಿದೆ. ಅಮೆರಿಕಾದೊಂದಿಗೆ ತನ್ನ ಪರಮಾಣು ಕಾರ್ಯಕ್ರಮದ ಕುರಿತು ಅಂತಿಮ ಒಪ್ಪಂದ ಏರ್ಪಟ್ಟ ನಂತರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅನುಮೋದನೆ ಪಡೆಯಲು ಯೋಜಿಸುತ್ತಿರುವುದಾಗಿ ಇರಾನ್ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಇರಾನ್ `ಹಳೆಯ ಅನುಭವಗಳಿಂದ ಪಾಠ ಕಲಿಯಲಿದೆ. ಅಂತಿಮ ಒಪ್ಪಂದವನ್ನು 60 ದಿನಗಳ ಅವಧಿಯ ನಂತರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ(ಯುಎನ್ಎಸ್ಸಿ) ನಿರ್ಣಯದ ಮೂಲಕ ಅನುಮೋದಿಸುವ ನಿರೀಕ್ಷೆಯಿದೆ' ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಘೇಯ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ, ಪ್ರಮುಖ ಅಂತರರಾಷ್ಟ್ರೀಯ ಒಪ್ಪಂದಗಳನ್ನು ನಿರ್ಣಯದ ಮೂಲಕ ಯುಎನ್ಎಸ್ಸಿ ಅಧಿಕೃತವಾಗಿ ಅನುಮೋದಿಸಬಹುದು. ಇದು ಆ ಒಪ್ಪಂದಗಳಿಗೆ ಹೆಚ್ಚುವರಿ ಅಂತರರಾಷ್ಟ್ರೀಯ ಕಾನೂನುಬದ್ಧತೆ ಮತ್ತು ಮಾನ್ಯತೆಯನ್ನು ನೀಡುತ್ತದೆ. ಯುಎನ್ಎಸ್ಸಿ ಒಪ್ಪಂದಗಳನ್ನು ನೇರವಾಗಿ ದೃಢೀಕರಿಸುವುದಿಲ್ಲ. ಆದರೆ, ಅದರ ಬೆಂಬಲವು ಒಪ್ಪಂದಗಳನ್ನು ಅನುಷ್ಠಾನಗೊಳಿಸಲು ಮತ್ತು ಜಾರಿಗೊಳಿಸಲು ಒಂದು ಚೌಕಟ್ಟನ್ನು ರೂಪಿಸಲು ಸಹಾಯ ಮಾಡುತ್ತದೆ. ವಿಶೇಷವಾಗಿ ಶಾಂತಿ ಒಪ್ಪಂದಗಳು, ಪರಮಾಣು ಕಾರ್ಯಕ್ರಮಗಳು ಅಥವಾ ನಿರ್ಬಂಧಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.






