"ತಿಂಗಳುಗಟ್ಟಲೆ ಬೆದರಿಸುತ್ತಿತ್ತು, ಈಗ ಬೇಡಿಕೊಳ್ಳುತ್ತಿದೆ": ರಶ್ಯಾದಿಂದ ತೈಲ ಖರೀದಿಗೆ ಭಾರತಕ್ಕೆ ಅಮೆರಿಕದ ಅನುಮತಿ ಕುರಿತು ಇರಾನ್ ವ್ಯಂಗ್ಯ

ಇರಾನ್ ನ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಾಘ್ಚಿ (Photo: X/@araghchi)
ಹೊಸದಿಲ್ಲಿ: ಪಶ್ಚಿಮ ಏಷ್ಯಾದಲ್ಲಿಯ ಬಿಕ್ಕಟ್ಟಿನ ನಡುವೆ ರಶ್ಯಾದ ತೈಲದ ಬಗ್ಗೆ ಅಮೆರಿಕವು ತನ್ನ ನಿಲುವು ಬದಲಿಸಿದ್ದನ್ನು ಇರಾನಿನ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಾಘ್ಚಿ ಅವರು ಗೇಲಿ ಮಾಡಿದ್ದಾರೆ.
ಈ ಹಿಂದೆ ರಶ್ಯಾದಿಂದ ಕಚ್ಚಾ ತೈಲ ಆಮದನ್ನು ನಿಲ್ಲಿಸುವಂತೆ ಒತ್ತಡ ಹೇರಿದ್ದ ಡೊನಾಲ್ಡ್ ಟ್ರಂಪ್ ಆಡಳಿತವು ಈಗ ಆ ದೇಶದಿಂದಲೇ ತೈಲವನ್ನು ಖರೀದಿಸುವಂತೆ ಭಾರತ ಮತ್ತು ವಿಶ್ವಾದ್ಯಂತದ ಇತರ ರಾಷ್ಟ್ರಗಳನ್ನು ಬೇಡಿಕೊಳ್ಳುತ್ತಿದೆ ಎಂದು ಅರಾಘ್ಚಿ ಶನಿವಾರ ಎಕ್ಸ್ ಪೋಸ್ಟ್ನಲ್ಲಿ ಕುಟುಕಿದ್ದಾರೆ.
ರಶ್ಯಾದಿಂದ ತೈಲ ಆಮದು ನಿಲ್ಲಿಸುವಂತೆ ಅಮೆರಿಕವು ತಿಂಗಳುಗಟ್ಟಲೆ ಭಾರತವನ್ನು ಬೆದರಿಸಿತ್ತು. ಇರಾನ್ ಜೊತೆ ಎರಡು ವಾರಗಳ ಬಳಿಕ ಅದು ಈಗ ಭಾರತದ ಸೇರಿದಂತೆ ಜಗತ್ತನ್ನು ರಶ್ಯಾದ ಕಚ್ಚಾತೈಲವನ್ನು ಖರೀದಿಸುವಂತೆ ಬೇಡಿಕೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ.
ಇರಾನ್ ವಿರುದ್ಧದ ‘ಕಾನೂನು ಬಾಹಿರ ಯುದ್ಧ’ವನ್ನು ಬೆಂಬಲಿಸುತ್ತಿರುವುದಕ್ಕಾಗಿ ಐರೋಪ್ಯ ದೇಶಗಳನ್ನೂ ಟೀಕಿಸಿರುವ ಅರಾಘ್ಚಿ, ಪ್ರತಿಫಲವಾಗಿ ಅಮೆರಿಕವು ರಶ್ಯಾದ ವಿರುದ್ಧ ತಮ್ಮನ್ನು ಬೆಂಬಲಿಸುತ್ತದೆ ಎಂದು ಅವು ಭಾವಿಸಿದ್ದವು, ಶೋಚನೀಯ ಎಂದು ಹೇಳಿದ್ದಾರೆ.
ಈ ನಡುವೆ ಮಧ್ಯಪ್ರಾಚ್ಯ ಪ್ರದೇಶದಲ್ಲಿನ ಸಂಘರ್ಷದ ನಡುವೆಯೇ ಇರಾನ್ ಭಾರತದ ಧ್ವಜವನ್ನು ಹೊತ್ತಿರುವ ಎಲ್ಪಿಜಿ ಸಾಗಣೆಯ ಎರಡು ಹಡಗುಗಳಿಗೆ ಹಾರ್ಮುಝ್ ಜಲಸಂಧಿಯ ಮೂಲಕ ಹಾದು ಹೋಗಲು ಅನುಮತಿಸಿದೆ ಎಂದು ಬಲ್ಲ ಮೂಲಗಳನ್ನು ಉಲ್ಲೇಖಿಸಿ Financial Times article ಸುದ್ದಿಸಂಸ್ಥೆಯು ವರದಿ ಮಾಡಿದೆ.
ಸೌದಿ ಅರೇಬಿಯಾದ ಕಚ್ಚಾ ತೈಲವನ್ನು ಹೊತ್ತಿರುವ ತೈಲ ಟ್ಯಾಂಕರ್ ಮಾ.1ರ ಸುಮಾರಿಗೆ ಹಾರ್ಮುಝ್ ಜಲಸಂಧಿಯನ್ನು ದಾಟಿದ್ದು, ಶನಿವಾರ ಭಾರತವನ್ನು ತಲುಪುವ ನಿರಿಕ್ಷೆಯಿದೆ ಎಂದು ಸುದ್ದಿಸಂಸ್ಥೆಯು ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.
ಭಾರತದಿಂದ ರಶ್ಯಾ ತೈಲ ಖರೀದಿ ಕುರಿತು ಅಮೆರಿಕ ಹೇಳಿದ್ದೇನು?
ಭಾರತದಿಂದ ರಶ್ಯಾ ತೈಲ ಖರೀದಿಯ ಮುಂದುವರಿಕೆಯನ್ನು ‘ಅನಿವಾರ್ಯ’ ಎಂದು ಬಣ್ಣಿಸಿರುವ ಅಮೆರಿಕದ ವಿತ್ತಸಚಿವ ಸ್ಕಾಟ್ ಬೆಸೆಂಟ್ ಅವರು, ಪಶ್ಚಿಮ ಏಶ್ಯಾ ಸಂಘರ್ಷದಿಂದ ಉಂಟಾಗಿರುವ ಇಂಧನ ವ್ಯತ್ಯಯಗಳ ನಡುವೆ ತುರ್ತು ಪೂರೈಕೆ ಅಗತ್ಯಗಳಿಂದಾಗಿ ಭಾರತೀಯ ಸಂಸ್ಕರಣಾಗಾರಗಳಿಗೆ 30 ದಿನಗಳ ತಾತ್ಕಾಲಿಕ ವಿನಾಯಿತಿ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ʼಸ್ಕೈ ನ್ಯೂಸ್ʼಗೆ ನೀಡಿರುವ ಸಂದರ್ಶನದಲ್ಲಿ ಬೆಸೆಂಟ್, ರಶ್ಯಾದ ತೈಲವನ್ನು ಹೊತ್ತ ಟ್ಯಾಂಕರ್ಗಳು ಈಗಾಗಲೇ ಸಮುದ್ರದಲ್ಲಿದ್ದು, ಅದು ಭಾರತೀಯ ಸಂಸ್ಕರಣಾಗಾರಗಳಿಗೆ ತ್ವರಿತ ಮೂಲವಾಗಿದೆ. ಹೀಗಾಗಿ ಅವು ರಶ್ಯಾದಿಂದ ತೈಲವನ್ನು ಖರೀದಿಸಲು 30 ದಿನಗಳ ಅವಕಾಶವನ್ನು ನೀಡಲಾಗಿದೆ. ಇಲ್ಲದಿದ್ದರೆ ಆ ತೈಲ ಹೇಗಿದ್ದರೂ ಚೀನಾವನ್ನು ತಲುಪುತ್ತಿತ್ತು ಎಂದು ಹೇಳಿದ್ದಾರೆ.







