ಅಮೆರಿಕದ ವಿರೋಧಾಭಾಸದ ನಿಲುವು ಮಾತುಕತೆಗೆ ಅಡ್ಡಿ: ಇರಾನ್ ಟೀಕೆ

Photo Credit : PTI
ಟೆಹರಾನ್, ಜೂ.7: ಅಮೆರಿಕದ ಬದಲಾಗುತ್ತಿರುವ ಮತ್ತು ವಿರೋಧಾಭಾಸದ ನಿಲುವು ಶಾಂತಿ ಮಾತುಕತೆಯ ಪ್ರಗತಿಗೆ ಪ್ರಮುಖ ಅಡ್ಡಿಯಾಗಿದೆ ಎಂದು ಇರಾನ್ನ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಘೈ ಟೀಕಿಸಿದ್ದಾರೆ.
ಪಾಕಿಸ್ತಾನದ ಮಧ್ಯಸ್ಥಿಕೆದಾರರ ಮೂಲಕ ಸಂದೇಶ ವಿನಿಮಯ ಮುಂದುವರಿದಿದೆ. ಆದರೆ ಅಮೆರಿಕದ ಹಾಲಿ ಆಡಳಿತದೊಂದಿಗೆ ಸಂವಾದ ನಡೆಸುವಲ್ಲಿನ ಮುಖ್ಯ ಸಮಸ್ಯೆಯೆಂದರೆ, ಪದೇ ಪದೇ ಬದಲಾಗುತ್ತಿರುವ ನಿಲುವು, ಷರತ್ತುಗಳು, ವಿಭಿನ್ನ ಹೇಳಿಕೆಗಳು, ವಿಭಿನ್ನ ಅಧಿಕಾರಿಗಳಿಂದ ವಿರೋಧಾಭಾಸದ ನಿಲುವು ಸಂಪೂರ್ಣ ಪ್ರಕ್ರಿಯೆಯನ್ನು ತುಂಬಾ ತೊಡಕಾಗಿಸುತ್ತದೆ. ಹಲವು ಕಗ್ಗಂಟುಗಳನ್ನು ಬಿಡಿಸಬೇಕಿದೆ. ಆದರೆ ಮುಖ್ಯ ವಿಷಯವೆಂದರೆ, ಅಂತರರಾಷ್ಟ್ರೀಯ ಪ್ರಸರಣ ತಡೆ ಒಪ್ಪಂದದ ಅಡಿಯಲ್ಲಿ ಶಾಂತಿಯುತ ಪರಮಾಣು ಸಂವರ್ಧನೆ ಹಕ್ಕನ್ನು ಒಳಗೊಂಡಂತೆ, ಇರಾನ್ನ ಹಕ್ಕುಗಳನ್ನು ಮಾನ್ಯ ಮಾಡಬೇಕು ಎಂಬುದನ್ನು ಅಮೆರಿಕನ್ನರು ತಿಳಿದುಕೊಳ್ಳಬೇಕಿದೆ. ಅಲ್ಲದೆ, ಸ್ಥಂಭನಗೊಳಿಸಿರುವ ನಮ್ಮ ಸ್ವತ್ತುಗಳ ವಿಷಯದಲ್ಲಿ ಅವರು(ಅಮೆರಿಕ) ಯಾವುದೇ ಹೊಂದಾಣಿಕೆಗೆ ಸಿದ್ಧವಿಲ್ಲ. ಇರಾನ್ನ ಸ್ವತ್ತುಗಳನ್ನು ಮುಕ್ತಗೊಳಿಸಬೇಕು ಮತ್ತು ಅದು ಇರಾನಿಯನ್ನರಿಗೆ ಲಭ್ಯವಾಗಬೇಕು ಎಂದು ಇಸ್ಮಾಯಿಲ್ ಬಘೈ ಹೇಳಿದ್ದಾರೆ.
ವಿದೇಶದ ಬ್ಯಾಂಕ್ಗಳಲ್ಲಿ ಮುಟ್ಟುಗೋಲು ಹಾಕಿಕೊಂಡಿರುವ ಕೋಟ್ಯಾಂತರ ಮೌಲ್ಯದ ಇರಾನ್ನ ಸ್ವತ್ತುಗಳನ್ನು ಬಿಡುಗಡೆಗೊಳಿಸುವಂತೆ ಇರಾನ್ ಆಗ್ರಹಿಸುತ್ತಿದೆ.
ಎಪ್ರಿಲ್ನಲ್ಲಿ ಜಾರಿಗೆ ಬಂದಿರುವ ಕದನ ವಿರಾಮವನ್ನು ಅಮೆರಿಕ ಗೌರವಿಸುತ್ತಿಲ್ಲ. ಹಾರ್ಮುಝ್ ಜಲಸಂಧಿ ಮತ್ತು ಹೊರಭಾಗದಲ್ಲಿ ನಮ್ಮ ವಾಣಿಜ್ಯ ನೌಕೆಗಳ ಮೇಲೆ ಅವರು ದಾಳಿ ನಡೆಸುತ್ತಿದ್ದಾರೆ. ಪ್ರದೇಶದ ಬಗ್ಗೆ, ಮೂಲಭೂತವಾಗಿ ಕದನ ವಿರಾಮದ ಬಗ್ಗೆ ಅಮೆರಿಕದ ಬೇಜವಾಬ್ದಾರಿ ವರ್ತನೆಯಿಂದಾಗಿ ಪರಿಸ್ಥಿತಿ ಅತ್ಯಂತ ಸೂಕ್ಷ್ಮ ಮತ್ತು ಅಪಾಯಕಾರಿಯಾಗಿದೆ ಎಂದು ಇಸ್ಮಾಯಿಲ್ ಬಘೈ ಆರೋಪಿಸಿರುವುದಾಗಿ ವರದಿಯಾಗಿದೆ.
ಇರಾನ್ನ ಸರ್ವೋಚ್ಛ ನಾಯಕರಿಗೆ ವಿಶೇಷ ಪತ್ರ
ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಶನಿವಾರ ಟೆಹರಾನ್ ತಲುಪಿದ್ದು ಇರಾನ್ನ ಸರ್ವೋಚ್ಛ ನಾಯಕ ಮೊಜ್ತಬಾ ಖಾಮಿನೈ ಅವರನ್ನು ಉಲ್ಲೇಖಿಸಿದ ವಿಶೇಷ ಪತ್ರವನ್ನು ಇರಾನ್ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿಗೆ ಹಸ್ತಾಂತರಿಸಿರುವುದಾಗಿ ವರದಿಯಾಗಿದೆ.
ಮೊಜ್ತಬಾ ಅವರಿಗೆ ಪಾಕಿಸ್ತಾನದ ಸೇನಾ ಮುಖ್ಯಸ್ಥರು ಬರೆದ ಪತ್ರ ಹಾಗೂ ಪ್ರಧಾನಿ ಕಳುಹಿಸಿದ ವಿಶೇಷ ಸಂದೇಶವನ್ನು ನಖ್ವಿ ಇರಾನ್ ಅಧಿಕಾರಿಗಳಿಗೆ ತಲುಪಿಸಿದ್ದಾರೆ. ಇದಕ್ಕೂ ಮುನ್ನ ಇರಾನ್ನ ಆಂತರಿಕ ಸಚಿವರನ್ನು ಭೇಟಿಯಾದ ನಖ್ವಿ, ಇತ್ತೀಚಿನ ಪ್ರಾದೇಶಿಕ ಬೆಳವಣಿಗೆಗಳು ಮತ್ತು ಆಂತರಿಕ ಭದ್ರತೆಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚೆ ನಡೆಸಿದರು ಎಂದು ಮೂಲಗಳು ಹೇಳಿವೆ.






