ಟ್ರಂಪ್ ಕದನ ವಿರಾಮವನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸಿದ ಬೆನ್ನಿಗೇ ಮೂರನೇ ಕಂಟೈನರ್ ಹಡಗು ವಶಪಡಿಸಿಕೊಂಡ ಇರಾನ್

ಸಾಂದರ್ಭಿಕ ಚಿತ್ರ | Photo Credit : AP
ಟೆಹರಾನ್: ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನಿರ್ದಿಷ್ಟಾವಧಿಗೆ ವಿಸ್ತರಿಸಿದ ಬೆನ್ನಿಗೇ, ಬುಧವಾರ ಹಾರ್ಮುಝ್ ಜಲಸಂಧಿಯನ್ನು ದಾಟಲು ಪ್ರಯತ್ನಿಸುತ್ತಿದ್ದ ಮೂರು ಕಂಟೈನರ್ ಹಡಗುಗಳನ್ನು ಇರಾನ್ನ ರೆವಲ್ಯೂಷನರಿ ಗಾರ್ಡ್ಸ್ ವಶಪಡಿಸಿಕೊಂಡಿದೆ.
ಇದಕ್ಕೂ ಮುನ್ನ, ಬುಧವಾರ ಬೆಳಗ್ಗೆ ಪ್ರಕಟಣೆ ಬಿಡುಗಡೆ ಮಾಡಿದ್ದ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್(IRGC), ಎರಡು ಹಡಗುಗಳನ್ನು ವಶಪಡಿಸಿಕೊಂಡಿರುವುದನ್ನು ದೃಢಪಡಿಸಿತ್ತು.
“ಇಂದು ಬೆಳಗ್ಗೆ ಹಾರ್ಮುಝ್ ಜಲಸಂಧಿಯನ್ನು ಉಲ್ಲಂಘಿಸಲು ಪ್ರಯತ್ನಿಸುತ್ತಿದ್ದ ಎರಡು ಹಡಗುಗಳನ್ನು ಗುರುತಿಸಿ, ಅವನ್ನು ತಡೆಹಿಡಿಯಲಾಗಿದೆ,” ಎಂದು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ನ ನೌಕಾಪಡೆ ಪ್ರಕಟಣೆಯಲ್ಲಿ ತಿಳಿಸಿದೆ.
“ಉಲ್ಲಂಘನೆ ಮಾಡಿದ ಎರಡು ಹಡಗುಗಳನ್ನು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ನ ನೌಕಾಪಡೆ ವಶಪಡಿಸಿಕೊಂಡಿದ್ದು, ಅವನ್ನು ಇರಾನ್ ಕರಾವಳಿಯತ್ತ ಕಳುಹಿಸಲಾಗಿದೆ,” ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
“ವಶಪಡಿಸಿಕೊಂಡ ಎರಡು ಹಡಗುಗಳ ಪೈಕಿ ಒಂದು ‘MSC-FRANCESCA’ ಆಗಿದ್ದು, ಇದು ಇಸ್ರೇಲ್ಗೆ ಸೇರಿದ ಹಡಗು. ‘EPAMINONDAS’ ಮತ್ತೊಂದು ಹಡಗಾಗಿದೆ. ಈ ಎರಡು ಹಡಗುಗಳು ನೌಕಾಯಾನ ವ್ಯವಸ್ಥೆಗೆ ಧಕ್ಕೆ ತಂದು, ಸಾಗರ ಭದ್ರತೆಗೆ ಅಪಾಯ ಉಂಟುಮಾಡಿದ್ದವು,” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಪ್ರಕಟಣೆಯ ಬೆನ್ನಿಗೇ, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ನ ನೌಕಾಪಡೆಯು ‘ಯುಫೋರಿಯಾ’ ಎಂಬ ಮತ್ತೊಂದು ಹಡಗಿನ ಮೇಲೆ ದಾಳಿ ನಡೆಸಿದೆ ಎಂದು Nour News, Fars ಮತ್ತು Mehr ಸುದ್ದಿ ಸಂಸ್ಥೆಗಳು ಸೇರಿದಂತೆ ಇರಾನ್ ನ ಮಾಧ್ಯಮಗಳು ವರದಿ ಮಾಡಿವೆ. ಆ ಹಡಗನ್ನು ಇರಾನ್ ಕರಾವಳಿಯಲ್ಲಿ ನಿಲುಗಡೆ ಮಾಡಲಾಗಿದೆ ಎಂದು ಅವು ತಿಳಿಸಿವೆ. ಆದರೆ, ಈ ಕುರಿತು ಹೆಚ್ಚಿನ ವಿವರಗಳನ್ನು ನೀಡಿಲ್ಲ.






