ಇರಾನ್ನ ಮೇಲಿನ ದಾಳಿ ಮುಂದುವರಿಸಿದ ಅಮೆರಿಕ : ಕೆಶ್ಮ್ ದ್ವೀಪದಲ್ಲಿ ಪ್ರಬಲ ಸ್ಫೋಟ

Photo Credit : x
ವಾಶಿಂಗ್ಟನ್, ಜು.13: ಮಧ್ಯಪ್ರಾಚ್ಯದಾದ್ಯಂತ ಸರಣಿ ದಾಳಿಗಳು ಮುಂದುವರಿದಿರುವಂತೆಯೇ, ಅಮೆರಿಕ ಮತ್ತು ಇರಾನ್ ದೇಶಗಳು ತಾವು `ಹಾರ್ಮುಝ್ ಜಲಸಂಧಿ'ಯನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡಿರುವುದಾಗಿ ಸೋಮವಾರ ಪ್ರತಿಪಾದಿಸಿವೆ.
ಅಮೆರಿಕ ಮಿಲಿಟರಿಯ ಸೆಂಟ್ರಲ್ ಕಮಾಂಡ್ ಸೋಮವಾರ ನಡೆಸಿದ ದಾಳಿಯಲ್ಲಿ ವಾಯು ರಕ್ಷಣಾ ವ್ಯವಸ್ಥೆಗಳು, ರಾಡಾರ್ ಕೇಂದ್ರಗಳು, ಕ್ಷಿಪಣಿ ಮತ್ತು ಡ್ರೋನ್ ಉಪಕರಣಗಳು ಹಾಗೂ ಸಣ್ಣ ದೋಣಿಗಳು ಸೇರಿದಂತೆ ಇರಾನ್ನ ಹಲವು ನೆಲೆಗಳನ್ನು ಧ್ವಂಸಗೊಳಿಸಿರುವುದಾಗಿ ತಿಳಿಸಿದೆ. ಸೋಮವಾರ ಬೆಳಗ್ಗೆ ಇರಾನ್ನ ಕೆಶ್ಮ್ ದ್ವೀಪ ಮತ್ತು ಬಂದರು ನಗರ ಬಂದರ್ ಅಬ್ಬಾಸ್ನಲ್ಲಿ ಪ್ರಬಲ ಸ್ಫೋಟದ ಸದ್ದು ಕೇಳಿಬಂದಿವೆ. ರವಿವಾರ ತಡರಾತ್ರಿ ದಕ್ಷಿಣ ಇರಾನ್ನ ಬಂದರು ನಗರ ಬಂದರ್ ಲೆಂಗೆಹ್ ಬಳಿಯ ಫರೂರ್ ದ್ವೀಪದಲ್ಲಿ ಅಮೆರಿಕ ನಡೆಸಿದ ದಾಳಿಯಲ್ಲಿ ದೂರಸಂಪರ್ಕ ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ ಎಂದು ಇರಾನ್ನ ಮೆಹರ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಈ ಮಧ್ಯೆ, ಹಾರ್ಮುಝ್ ಜಲಸಂಧಿಯು ಜಾಗತಿಕ ವ್ಯಾಪಾರಕ್ಕೆ ಅತ್ಯಂತ ಪ್ರಮುಖವಾದ ಕಡಲ ಮಾರ್ಗವಾಗಿದೆ. ಇದು ಇರಾನ್ನ ನಿಯಂತ್ರಣದಲ್ಲಿಲ್ಲ ಎಂದು ಸೆಂಟ್ರಲ್ ಕಮಾಂಡ್ ಹೇಳಿದೆ. ಆದರೆ ಯಾವುದೇ ಕಾರಣಕ್ಕೂ ಹಾರ್ಮುಝ್ ಮೇಲಿನ ನಿಯಂತ್ರಣವನ್ನು ಬಿಟ್ಟುಕೊಡುವುದಿಲ್ಲ ಎಂದು ಇರಾನ್ ಘೋಷಿಸಿದೆ.




