ಸಂಘರ್ಷ ತಡೆಗಟ್ಟುವ ವ್ಯವಸ್ಥೆ ಸ್ಥಾಪನೆಗೆ ಇರಾನ್, ಅಮೆರಿಕ ಸಮ್ಮತಿ; ಲೆಬನಾನ್ ನಲ್ಲಿ ಹಿಂಸಾಚಾರ ನಿಯಂತ್ರಿಸುವ ಉದ್ದೇಶ

Photo | indiatoday
ಬರ್ನ್, ಜೂ.22: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಸ್ವಿಟ್ಸರ್ಲ್ಯಾಂಡ್ನಲ್ಲಿ ನಡೆದ ಮೊದಲ ಸುತ್ತಿನ ಮಾತುಕತೆಯ ನಂತರ, ಲೆಬನಾನ್ನಲ್ಲಿನ ಹೋರಾಟವನ್ನು ಅಂತ್ಯಗೊಳಿಸಲು ಸಂವಹನ ಮಾರ್ಗಗಳನ್ನು (ಕಮ್ಯುನಿಕೇಶನ್ ಲೈನ್ಸ್) ಸ್ಥಾಪಿಸಲು ಇರಾನ್ ಮತ್ತು ಅಮೆರಿಕ ಸೋಮವಾರ ಒಪ್ಪಿಕೊಂಡಿವೆ ಎಂದು ಮಧ್ಯಸ್ಥಗಾರರು ತಿಳಿಸಿದ್ದಾರೆ.
ಮತ್ತೆ ಹೋರಾಟ ಭುಗಿಲೇಳದಂತೆ ತಡೆಯಲು ಸಂಬಂಧಿತ ಪಕ್ಷಗಳು (ದೇಶಗಳು) ಮತ್ತು ಲೆಬನಾನ್ ಅಧಿಕಾರಿಗಳ ನಡುವೆ ಸಂಘರ್ಷ ತಡೆಗಟ್ಟುವ ವ್ಯವಸ್ಥೆಯನ್ನೂ ಸ್ಥಾಪಿಸಲಾಗಿದೆ. ಹೊರ್ಮುಝ್ ಜಲಸಂಧಿಯಲ್ಲಿ ‘ಘಟನೆಗಳು ಮತ್ತು ತಪ್ಪುಗ್ರಹಿಕೆಗಳನ್ನು ತಪ್ಪಿಸಲು’ ಸ್ಥಾಪಿಸಲಾದ ಸಂಪರ್ಕ ಮಾರ್ಗದ ವಿವರಗಳನ್ನು ಹಂಚಿಕೊಳ್ಳಲಾಗಿದೆ.
‘ಮಾತುಕತೆಗಳು ಸಕಾರಾತ್ಮಕ ಮತ್ತು ರಚನಾತ್ಮಕ ವಾತಾವರಣದಲ್ಲಿ ನಡೆದಿದ್ದು, ಮುಂದಿನ ತಾಂತ್ರಿಕ ಮಾತುಕತೆಗಳಿಗೆ ವ್ಯವಸ್ಥೆಯನ್ನು ರೂಪಿಸುವುದು ಸೇರಿದಂತೆ ಆಶಾದಾಯಕ ಪ್ರಗತಿಯನ್ನು ಸಾಧಿಸಲಾಗಿದೆ’ ಎಂದು ಮಾತುಕತೆಗೆ ಮಧ್ಯಸ್ಥಿಕೆ ವಹಿಸಿರುವ ಪಾಕಿಸ್ತಾನ ಮತ್ತು ಖತರ್ನ ಪ್ರತಿನಿಧಿಗಳು ತಿಳಿಸಿದ್ದಾರೆ.
ಹಿಜ್ಬುಲ್ಲಾಗೆ ಬೆಂಬಲ ನೀಡುತ್ತಿರುವ ಇರಾನ್ ಮೇಲೆ ದಾಳಿ ಮಾಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವಿವಾರ ಬೆದರಿಕೆ ಹಾಕಿದ್ದಕ್ಕೆ ಪ್ರತಿಕ್ರಿಯೆಯಾಗಿ ಇರಾನ್ ನಿಯೋಗವು ಮಾತುಕತೆಯಿಂದ ಹೊರನಡೆದ ನಂತರ ಮಾತುಕತೆಗಳು ಅನಿಶ್ಚಿತತೆಯಿಂದ ಆರಂಭವಾಗಿದ್ದವು. ಆದರೆ ನಂತರದ ಬೆಳವಣಿಗೆಯಾಗಿ ಈ ಒಪ್ಪಂದ ಏರ್ಪಟ್ಟಿದೆ.
‘ಪಾಕಿಸ್ತಾನ ಮತ್ತು ಖತರ್ನ ದಣಿವರಿಯದ ಮಧ್ಯಸ್ಥಿಕೆಯು ಲೆಬನಾನ್ ಯುದ್ಧವನ್ನು ಕೊನೆಗೊಳಿಸಲು ಪ್ರಮುಖ ಪ್ರಗತಿಯನ್ನು ತಂದಿದೆ. ತೈಲ ಮತ್ತು ಪೆಟ್ರೋಕೆಮಿಕಲ್ ರಫ್ತುಗಳ ಮೇಲಿನ ನಿರ್ಬಂಧಗಳನ್ನು ರದ್ದುಗೊಳಿಸಲಾಗಿದೆ, ದಿಗ್ಬಂಧನವನ್ನು ತೆರವುಗೊಳಿಸಲಾಗಿದೆ, ಸ್ಥಗಿತಗೊಳಿಸಲಾಗಿದ್ದ ಕೆಲವು ಆಸ್ತಿಗಳನ್ನು ಮುಕ್ತಗೊಳಿಸಲಾಗಿದೆ ಹಾಗೂ ಇರಾನ್ಗಾಗಿ ಪ್ರಮುಖ ಪುನರ್ನಿರ್ಮಾಣ ಮತ್ತು ಅಭಿವೃದ್ಧಿ ಯೋಜನೆಯನ್ನು ಪ್ರಾರಂಭಿಸಲಾಗಿದೆ’ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ‘ಎಕ್ಸ್’ನಲ್ಲಿ ಬರೆದಿದ್ದಾರೆ.
ಲೆಬನಾನ್ ಅಧ್ಯಕ್ಷರ ದೂರವಾಣಿ ಚರ್ಚೆ
ಲೆಬನಾನ್ ಅಧ್ಯಕ್ಷ ಜೋಸೆಫ್ ಔನ್ ಅವರು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್, ಅಮೆರಿಕ ಅಧ್ಯಕ್ಷರ ಹಿರಿಯ ಸಲಹೆಗಾರ ಜ್ಯಾರೆಡ್ ಕುಶ್ನರ್ ಮತ್ತು ಖತರ್ ಪ್ರಧಾನಿ ಶೇಖ್ ಮುಹಮ್ಮದ್ ಬಿನ್ ಅಬ್ದುಲ್ ರಹಮಾನ್ ಬಿನ್ ಜಾಸಿಮ್ ಅಲ್ ಥಾನಿ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಲೆಬನಾನ್ ನಲ್ಲಿ ಕದನ ವಿರಾಮವನ್ನು ಬಲಪಡಿಸುವುದು, ಇಸ್ರೇಲ್ ನ ಮಿಲಿಟರಿ ಆಕ್ರಮಣವನ್ನು ನಿಲ್ಲಿಸುವುದು ಹಾಗೂ ಈ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳು ಮತ್ತು ಅದಕ್ಕಾಗಿ ವಿಶೇಷ ವ್ಯವಸ್ಥೆಯನ್ನು ರಚಿಸುವ ಕುರಿತು ಚರ್ಚಿಸಲಾಯಿತು ಎಂದು ಲೆಬನಾನ್ ಸರ್ಕಾರದ ಮೂಲಗಳು ತಿಳಿಸಿವೆ.






