ಅಮೆರಿಕದ ನೆಲೆಗಳನ್ನು ಗುರಿಯಾಗಿಸಲು ಚೀನಾದ ಬೇಹುಗಾರಿಕಾ ಉಪಗ್ರಹ ಬಳಸಿದ ಇರಾನ್: ವರದಿ

ಸಾಂದರ್ಭಿಕ ಚಿತ್ರ
ನ್ಯೂಯಾರ್ಕ್, ಎ.16: ಇರಾನ್ 2024ರ ಅಂತ್ಯದಲ್ಲಿ ರಹಸ್ಯವಾಗಿ ಚೀನಾದ ಬೇಹುಗಾರಿಕಾ ಉಪಗ್ರಹವನ್ನು ಪಡೆದಿದ್ದು, ಇದು ಪ್ರಸ್ತುತ ಯುದ್ಧದ ಸಂದರ್ಭದಲ್ಲಿ ಮಧ್ಯಪ್ರಾಚ್ಯದಾದ್ಯಂತ ಅಮೆರಿಕ ಮಿಲಿಟಿರಿ ನೆಲೆಗಳನ್ನು ಗುರಿಯಾಗಿಸಲು ನೆರವಾಗಿತ್ತು ಎಂದು `ದಿ ಫೈನಾನ್ಶಿಯಲ್ ಟೈಮ್ಸ್' ವರದಿ ಮಾಡಿದೆ.
`ಅರ್ಥ್ ಐ ಕಂಪೆನಿ' ಎಂಬ ಚೀನೀ ಸಂಸ್ಥೆ ನಿರ್ಮಿಸಿದ್ದ `ಟಿಇಇ-01ಬಿ' ಉಪಗ್ರಹವನ್ನು ಚೀನಾ ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿದ ಬಳಿಕ ಅದನ್ನು ಇರಾನ್ನ ಇಸ್ಲಾಮಿಕ್ ರೆವೊಲ್ಯುಷನರಿ ಗಾರ್ಡ್ ಕಾಪ್ರ್ಸ್(ಐಆರ್ಜಿಸಿ) ಖರೀದಿಸಿತ್ತು ಎಂದು ಸೋರಿಕೆಯಾದ ಇರಾನ್ ಮಿಲಿಟರಿ ದಾಖಲೆಯನ್ನು ಉಲ್ಲೇಖಿಸಿದ ವರದಿ ಹೇಳಿದೆ.
ಇರಾನ್ನ ಮಿಲಿಟರಿ ಕಮಾಂಡರ್ಗಳು ಉಪಗ್ರಹವನ್ನು ಅಮೆರಿಕದ ಪ್ರಮುಖ ಮಿಲಿಟರಿ ನೆಲೆಗಳನ್ನು ಮೇಲ್ವಿಚಾರಣೆ ಮಾಡಲು ನಿರ್ದೇಶಿಸಿದರು ಎಂದು ಉಪಗ್ರಹ ಚಿತ್ರಣ ಮತ್ತು ಕಕ್ಷೆಯ ವಿಶ್ಲೇಷಣೆಯನ್ನು ಆಧರಿಸಿ ಪತ್ರಿಕೆ ವರದಿ ಮಾಡಿದೆ. ಒಪ್ಪಂದದ ಭಾಗವಾಗಿ, ಏಷ್ಯಾ, ಲ್ಯಾಟಿನ್ ಅಮೆರಿಕ ಮತ್ತು ಇತರ ಪ್ರದೇಶಗಳಾದ್ಯಂತ ವಿಸ್ತರಿಸಿರುವ ನೆಟ್ವರ್ಕ್ನೊಂದಿಗೆ ಬೀಜಿಂಗ್ ಮೂಲದ ಉಪಗ್ರಹ ನಿಯಂತ್ರಣ ಮತ್ತು ಡೇಟಾ ಸೇವೆಗಳ ಪೂರೈಕೆದಾರ `ಎಂಪೋಸ್ಯಾಟ್' ನಿರ್ವಹಿಸುವ ಕೇಂದ್ರಗಳಿಗೆ ಐಆರ್ಜಿಸಿ ಪ್ರವೇಶವನ್ನು ಪಡೆದುಕೊಂಡಿದೆ ಎಂದು ವರದಿ ಹೇಳಿದೆ.
ಚೀನಾದ ವಿದೇಶಾಂಗ ಇಲಾಖೆ ವರದಿಯನ್ನು ನಿರಾಕರಿಸಿದೆ. ಇತ್ತೀಚೆಗೆ, ಕೆಲವು ಶಕ್ತಿಗಳು ಉದ್ದೇಶಪೂರ್ವಕವಾಗಿ ಚೀನಾದ ಹೆಸರಿಗೆ ಕಳಂಕ ತರುವ ಕಾರ್ಯವನ್ನು ನಡೆಸುತ್ತಿದ್ದು, ಈ ವರದಿ ಇಂತಹ ಪ್ರಯತ್ನಗಳ ಭಾಗವಾಗಿದೆ ಎಂದು ವಿದೇಶಾಂಗ ಇಲಾಖೆ ಖಂಡಿಸಿದೆ.






