ಇಸ್ರೇಲ್ ನ ಮೊಸಾದ್ ಕಚೇರಿಗೆ ಇರಾನ್ ದಾಳಿ ಮಾಡಿದ್ದು ಹೇಗೆ?
► 'ಪತ್ತೆಹಚ್ಚಲಾಗದ' ಕ್ಷಿಪಣಿ ಬಳಸಿದ ಇರಾನ್!

PC | X ; @PressTV
ಟೆಲ್ ಅವೀವ್: ಇಸ್ರೇಲ್ ನ ಗುಪ್ತಚರ ವಿಭಾಗ ಮೊಸಾದ್ ನ ಕೇಂದ್ರವನ್ನು ಹೊಡೆದುರುಳಿಸಲು ಇರಾನ್ ನೂತನ, ಪತ್ತೆಹಚ್ಚಲಾಗದ ಕ್ಷಿಪಣಿಯನ್ನು ಬಳಸಿದೆ ಎಂದು ಹೇಳಿಕೊಂಡಿದೆ. ಇದು ಇಸ್ರೇಲ್ ನ ಏರ್ ಡಿಫೆನ್ಸ್ ಸಿಸ್ಟಮ್ ಅನ್ನು ಭೇದಿಸಿದೆ ಎಂದು Aljazeera ವರದಿ ಮಾಡಿದೆ.
"ಇಸ್ರೇಲ್ ನ ಗುಪ್ತಚರ ಕಚೇರಿ ಮೇಲೆ ಇಂದು ನಡೆಸಿದ ದಾಳಿಯಲ್ಲಿ, ನಾವು ಟ್ರ್ಯಾಕ್ ಮಾಡಲು ಅಥವಾ ಪ್ರತಿಬಂಧಿಸಲು ಸಾಧ್ಯವಾಗದ ಕ್ಷಿಪಣಿಗಳನ್ನು ಬಳಸಿದ್ದೇವೆ" ಎಂದು ಇರಾನ್ ರಕ್ಷಣಾ ಸಚಿವಾಲಯದ ವಕ್ತಾರ ಬ್ರಿಗೇಡಿಯರ್ ಜನರಲ್ ರೆಜಾ ತಲೈ-ನಿಕ್ ಹೇಳಿದ್ದಾರೆ ಎಂದು ಇರಾನಿನ ಸರಕಾರಿ ಸುದ್ದಿ ಸಂಸ್ಥೆ IRNA ತಿಳಿಸಿದೆ.
ವಿಶೇಷ ಕ್ಷಿಪಣಿ ಬಳಸಿ ಇರಾನ್ ನಡೆಸಿದ ಕಾರ್ಯಾಚರಣೆಯು ಇಸ್ರೇಲ್ ಗೆ ಅಚ್ಚರಿ ತಂದಿದೆ. ಇಂಥಹ ಹೆಚ್ಚಿನ ಅಚ್ಚರಿಗಳನ್ನು ನಾವು ಇಸ್ರೇಲ್ ಗೆ ನೀಡಲಿದ್ದೇವೆ ಎಂದು ಅವರು ಎಚ್ಚರಿಸಿದ್ದಾರೆ.
ಇಸ್ರೇಲ್ ದೀರ್ಘಕಾಲದ ಸಂಘರ್ಷಕ್ಕೆ ಸಿದ್ಧವಾಗಿಲ್ಲ ಎಂದ ವಕ್ತಾರ ತಲೈ-ನಿಕ್, ಇಸ್ರೇಲ್ ಆಡಳಿತವು ದೀರ್ಘಾವಧಿ ಯುದ್ದವನ್ನು ತಡೆದುಕೊಳ್ಳಲು ಸಾಧ್ಯವಿಲ್ಲ. ಇರಾನ್ ನ ಮಿಲಿಟರಿಯು ಸುಧಾರಿತ ವ್ಯವಸ್ಥೆಗಳೊಂದಿಗೆ ಸಜ್ಜಾಗಿದೆ. ನಮ್ಮ ಬತ್ತಳಿಕೆಯಲ್ಲಿರುವ ಕೆಲವು ತಂತ್ರವನ್ನು ಇನ್ನೂ ಬಳಸಿಲ್ಲ ಎಂದು ಹೇಳಿದ್ದಾರೆ.







