ಇರಾನ್ | ಅಣುಬಾಂಬ್ ದಾಳಿಯಿಂದ ರಕ್ಷಣೆ ಪಡೆಯಲು ವಿಡಿಯೋ ಮಾರ್ಗದರ್ಶಿ ಬಿಡುಗಡೆ

Screengrab : X
ಟೆಹರಾನ್: ಪಶ್ಚಿಮ ಏಶ್ಯಾದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅಣುಬಾಂಬ್ ಸ್ಫೋಟದಿಂದ ಹೇಗೆ ರಕ್ಷಣೆ ಪಡೆಯಬೇಕು ಎಂಬುದರ ಕುರಿತು ಇರಾನ್ ಅಧಿಕಾರಿಗಳು ಸಾರ್ವಜನಿಕ ಜಾಗೃತಿ ಮಾರ್ಗದರ್ಶಿಯನ್ನು ಬಿಡುಗಡೆ ಮಾಡಿದ್ದಾರೆ. ಆಶ್ರಯ ಪಡೆಯುವುದು, ವಿಕಿರಣಶೀಲತೆಯಿಂದ ಬಚಾವಾಗುವುದು ಮತ್ತು ಪರಮಾಣು ವಿಕಿರಣಗಳಿಂದ ರಕ್ಷಿಸಿಕೊಳ್ಳುವ ಕ್ರಮಗಳನ್ನು ವಿವರಿಸುವ ಎಂಟು ನಿಮಿಷಗಳ ಶೈಕ್ಷಣಿಕ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ.
ನಾಗರಿಕರು ಮನೆಗಳ ನೆಲಮಹಡಿಗಳಲ್ಲಿ ಆಶ್ರಯ ಪಡೆಯಲು, ಕಿಟಕಿಗಳಿಂದ ದೂರವಿರಲು, ಹೊರಗಿನ ಗಾಳಿಯನ್ನು ಎಳೆದುಕೊಳ್ಳುವ ಏರ್ ಕಂಡಿಷನರ್ಗಳನ್ನು ಆಫ್ ಮಾಡಲು ಮತ್ತು ಹೊರಾಂಗಣದಲ್ಲಿದ್ದರೆ ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಈ ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ.
ಕನಿಷ್ಠ 24 ಗಂಟೆಗಳ ಕಾಲ ಆಶ್ರಯ ತಾಣಗಳ ಒಳಗಡೆಯೇ ಇರುವುದು, ಪ್ಯಾಕ್ ಮಾಡಿದ ಆಹಾರ ಮತ್ತು ಬಾಟಲಿ ನೀರನ್ನು ಮಾತ್ರ ಸೇವಿಸುವುದು ಹಾಗೂ ವಾಹನಗಳನ್ನು ಆಶ್ರಯ ತಾಣಗಳಾಗಿ ಬಳಸದಿರಲು ಸಲಹೆ ನೀಡಲಾಗಿದೆ. ಸ್ಫೋಟಗೊಂಡ ಸ್ಥಳದಿಂದ ದೂರದಲ್ಲಿರುವ ಜನರಿಗೂ ಅಪಾಯವನ್ನುಂಟುಮಾಡುವ ವಿಕಿರಣಶೀಲ ಕಣಗಳು ವಾತಾವರಣದ ಮೂಲಕ ಹರಡಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಇರಾನ್ನ ನಟಾಂಜ್ ಪರಮಾಣು ಘಟಕವಿರುವ ಇಸ್ಫಹಾನ್ನ ತುರ್ತು ಸೇವೆಗಳ ವಿಭಾಗವು ಈ ಸೂಚನೆಗಳನ್ನು ಹೊರಡಿಸಿದೆ. ಇರಾನ್ನ ಭೂಗತ `ಪಿಕ್ಆಕ್ಸ್ ಮೌಂಟೇನ್' ಪರಮಾಣು ಸಂಶೋಧನಾ ತಾಣದ ಮೇಲೆ ಅಮೆರಿಕ ದಾಳಿ ನಡೆಸಬಹುದು ಎಂಬ ಊಹಾಪೋಹಗಳ ನಡುವೆ ಈ ಬೆಳವಣಿಗೆ ನಡೆದಿದೆ.






