ಹಾರ್ಮುಝ್ ಜಲಸಂಧಿಯ ನಿಯಂತ್ರಣ ಬಿಟ್ಟುಕೊಡುವುದಿಲ್ಲ: ಇರಾನ್ ಪಟ್ಟು

ಸಾಂದರ್ಭಿಕ ಚಿತ್ರ | Photo Credit : PTI
ಟೆಹರಾನ್: ಅಮೆರಿಕದ ಜೊತೆಗಿನ ಕರಡು ಒಪ್ಪಂದದಡಿ ಇರಾನ್, ಆಯಕಟ್ಟಿನ ಹಾರ್ಮುಝ್ ಜಲಸಂಧಿಯನ್ನು ಬಿಟ್ಟುಕೊಡುವುದಿಲ್ಲವೆಂದು ಟೆಹರಾನ್ನ ಸರಕಾರಿ ಸ್ವಾಮ್ಯದ ಸುದ್ದಿ ಮಾಧ್ಯಮವೊಂದು ಶುಕ್ರವಾರ ವರದಿ ಮಾಡಿದೆ.
‘‘ ಅಮೆರಿಕ ಹಾಗೂ ಇಸ್ರೇಲಿನ ಸೇನಾ ಆಕ್ರಮಣಕ್ಕೆ ಮುನ್ನ ಅಸ್ತಿತ್ವದಲ್ಲಿದ್ದ ಜಲಸಂಧಿಯ ನಿರ್ವಹಣೆಯ ಅಧಿಕಾರವನ್ನು ಬಿಟ್ಟುಕೊಡುವ ಬಗ್ಗೆ ಇರಾನ್ ಕರಡುಪಠ್ಯದಲ್ಲಿ ಯಾವುದೇ ಬದ್ಧತೆಯನ್ನು ವ್ಯಕ್ತಪಡಿಸಿಲ್ಲ’’ ಇರಾನ್ನ ಅಧಿಕೃತ ಸುದ್ದಿಸಂಸ್ಥೆ IRNA ವರದಿ ಮಾಡಿದೆ. ಹಾಲಿ ಪಠ್ಯದ ವಿಸ್ತೃತವಾದ ರೂಪುರೇಷೆಗಳನ್ನು ಅಂತಿಮಗೊಳಿಸಲಾಗುತ್ತಿದೆಯೆಂದು ಅವರು ಹೇಳಿದ್ದಾರೆ.
ಫೆಬ್ರವರಿ 28ರಂದು ಅಮೆರಿಕ ಹಾಗೂ ಇಸ್ರೇಲ್ ನಡುವೆ ಸಂಘರ್ಷ ಭುಗಿಲೆದ್ದಾಗಿನಿಂದ ಹಾರ್ಮುಝ್ ಜಲಸಂಧಿ ಇರಾನ್ನ ಸಂಪೂರ್ಣ ನಿಯಂತ್ರಣಕ್ಕೊಳಪಟ್ಟಿದೆ.
ಹಾರ್ಮುಝ್ ಜಲಸಂಧಿಯ ಮೂಲಕ ಹಾದುಹೋಗುವ ನೌಕೆಗಳು, ಸಂಚರಿಸುವ ಮುನ್ನ ತನ್ನ ಸಶಸ್ತ್ರ ಪಡೆಗಳ ಅನುಮತಿಯನ್ನು ಪಡೆಯಬೇಕೆಂದು ಇರಾನ್ ಹೇಳಿದೆ. ಹಾರ್ಮುಝ್ ಜಲಸಂಧಿಯ ಮೂಲಕ ಹಾದುಹೋಗಲು ಕೆಲವೇ ಹಡಗುಗಳಿಗೆ ಅದು ಅನುಮತಿ ನೀಡಿದೆ.
ಗುರುವಾರ ತಡರಾತ್ರಿ ಟ್ರಂಪ್ ಹೇಳಿಕೆಯೊಂದನ್ನು ನೀಡಿ, ಇರಾನ್ ಮೇಲೆ ಯೋಜಿತ ದಾಳಿಗಳ್ನು ರದ್ದುಪಡಿಸಿರುವುದಾಗಿ ಘೋಷಿಸಿದ್ದರು. ಮುಂಬರುವ ದಿನಗಳಲ್ಲಿ ಯುದ್ಧವನ್ನು ಅಂತ್ಯಗೊಳಿಸುವ ಕುರಿತು ಇರಾನ್ ಜೊತೆ ಒಪ್ಪಂದವೇರ್ಪಡಿಸಿಕೊಳ್ಳುವುದಾಗಿ ಅವರು ಹೇಳಿದ್ದಾರೆ.
ಈ ಒಪ್ಪಂದದಡಿಯಲ್ಲಿ ಅಮೆರಿಕವು ಬಯಸಿದ್ದೆಲ್ಲವನ್ನೂ ಪಡೆದುಕೊಳ್ಳಲಿದೆ ಮತ್ತು ಟೆಹರಾನ್ ಅಣ್ವಸ್ತ್ರವನ್ನು ಹೊಂದುವುದಿಲ್ಲವೆಂದು ಅವರು ಹೇಳಿದ್ದಾರೆ. ಈ ವಾರಾಂತ್ಯದಲ್ಲಿ ಇರಾನ್ ಜೊತೆ ಯುರೋಪ್ನಲ್ಲಿ ಒಪ್ಪಂದಕ್ಕೆ ಸಹಿಹಾಕುವ ನಿರೀಕ್ಷೆಯಿದ್ದು, ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಪಾಲ್ಗೊಳ್ಳಲಿದ್ದಾರೆಂದು ಅವರು ಹೇಳಿದ್ದರು.
ಆದಾಗ್ಯೂ ಇರಾನ್ ಸಚಿವಾಲಯದ ವಕ್ತಾರ ಇಸ್ಮಾಯೀಲ್ ಬಾಖಾಯಿ ಅವರು , ಒಪ್ಪಂದದ ಕುರಿತಾಗಿ ತನ್ನ ದೇಶ ಇನ್ನೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲವೆಂದು ಹೇಳಿದ್ದಾರೆ.






