ಪ್ರಾದೇಶಿಕ ಉದ್ವಿಗ್ನತೆ ತಡೆಗೆ ಟೆಹ್ರಾನ್ ನಲ್ಲಿ ಮಾತುಕತೆ; ಸೌದಿ ಅರೇಬಿಯ, ಪಾಕಿಸ್ತಾನ, ತುರ್ಕಿಯೆ ಭಾಗಿ

Photo Credit : AP
ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಮತ್ತಷ್ಟು ಸಂಘರ್ಷ ಉಂಟಾಗುವುದನ್ನು ತಡೆಯುವ ಉದ್ದೇಶದಿಂದ ಸೌದಿ ಅರೇಬಿಯ, ಪಾಕಿಸ್ತಾನ ಮತ್ತು ತುರ್ಕಿಯೆ ಅಧಿಕಾರಿಗಳು ಇರಾನ್ ನ ರಾಜಧಾನಿ ಟೆಹ್ರಾನ್ ನಲ್ಲಿ ಮಾತುಕತೆ ನಡೆಸುತ್ತಿದ್ದಾರೆ ಎಂದು ಸೌದಿ ಅರೇಬಿಯದ ವಿದೇಶಾಂಗ ಸಚಿವಾಲಯ ತಿಳಿಸಿದೆ ಎಂದು Aljazeera ವರದಿ ಮಾಡಿದೆ.
‘ಪ್ರದೇಶದಲ್ಲಿ ಮಿಲಿಟರಿ ಉದ್ವಿಗ್ನತೆ ಮತ್ತೆ ಹೆಚ್ಚುವುದನ್ನು ತಡೆಯುವುದು ಹಾಗೂ ಬಿಕ್ಕಟ್ಟನ್ನು ಕೊನೆಗೊಳಿಸಿ ಶಾಂತಿ ಮತ್ತು ಸ್ಥಿರತೆಯನ್ನು ಖಾತರಿಪಡಿಸುವ ಒಪ್ಪಂದಕ್ಕೆ ದಾರಿ ಮಾಡಿಕೊಡುವ ನಿಟ್ಟಿನಲ್ಲಿ ಮಾತುಕತೆಯ ಮಾರ್ಗಗಳನ್ನು ಮುಕ್ತವಾಗಿರಿಸುವುದು ಮಹತ್ವದ್ದಾಗಿದೆ’ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಸೌದಿ ಅರೇಬಿಯದ ರಕ್ಷಣಾ ಸಚಿವ ಖಾಲಿದ್ ಬಿನ್ ಸಲ್ಮಾನ್ ಅಲ್ ಸೌದ್, ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಮತ್ತು ತುರ್ಕಿಯೆ ಗುಪ್ತಚರ ಮುಖ್ಯಸ್ಥ ಇಬ್ರಾಹಿಂ ಕಾಲಿನ್ ಅವರು ಇರಾನ್ ನ ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್ನ ಕಾರ್ಯದರ್ಶಿ ಮೊಹ್ಸೆನ್ ರೆಜೈ ಅವರನ್ನು ಭೇಟಿಯಾಗುತ್ತಿದ್ದಾರೆ.
ತುರ್ಕಿಯೆ, ಪಾಕಿಸ್ತಾನ ಮತ್ತು ಸೌದಿ ಅರೇಬಿಯ ಆಗಸ್ಟ್ನಲ್ಲಿ ಮಕ್ಕಾ ಜಂಟಿ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದ್ದವು. ಈ ಒಪ್ಪಂದದಡಿ, ಯಾವುದೇ ಒಂದು ಸದಸ್ಯ ರಾಷ್ಟ್ರದ ಮೇಲೆ ನಡೆಯುವ ಸಶಸ್ತ್ರ ದಾಳಿಯನ್ನು ಎಲ್ಲ ಸದಸ್ಯ ರಾಷ್ಟ್ರಗಳ ಮೇಲಿನ ದಾಳಿ ಎಂದು ಪರಿಗಣಿಸಲಾಗುತ್ತದೆ.
ಯೆಮನ್ ನ ಇರಾನ್ ಬೆಂಬಲಿತ ಹೌತಿ ಸಶಸ್ತ್ರ ಗುಂಪು ಕಳೆದ ತಿಂಗಳು ಸೌದಿ ಅರೇಬಿಯದ ಮೇಲಿನ ದಾಳಿಗಳನ್ನು ತೀವ್ರಗೊಳಿಸಿದ ಬಳಿಕ, ಈ ಮೈತ್ರಿಕೂಟದ ಮೂವರು ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಇರಾನ್ ನೊಂದಿಗೆ ನಡೆಸುತ್ತಿರುವ ಮೊದಲ ಮಾತುಕತೆ ಇದಾಗಿದೆ.






