ಇರಾನ್ ಯುದ್ಧ ವರದಿ: ಅಮೆರಿಕ ಮಾಧ್ಯಮಗಳ ಮೇಲೆ ಟ್ರಂಪ್ ‘ದೇಶದ್ರೋಹ’ದ ಆರೋಪ

ಡೊನಾಲ್ಡ್ ಟ್ರಂಪ್ | Photo Credit : PTI
ವಾಷಿಂಗ್ಟನ್: ಇರಾನ್ ವಿರುದ್ಧದ ಯುದ್ಧದ ವರದಿ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕದ ಮಾಧ್ಯಮಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸುಳ್ಳು ಮಾಹಿತಿಯನ್ನು ಹರಡುವ ಮೂಲಕ ದೇಶದ್ರೋಹ ನಡೆಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಟ್ರೂತ್ ಸೋಷಿಯಲ್ನಲ್ಲಿ ಪ್ರಕಟಿಸಿದ ಪೋಸ್ಟ್ ನಲ್ಲಿ, ಅಮೆರಿಕದ ಕೆಲವು ಮಾಧ್ಯಮಗಳು ಇರಾನ್ ನೊಂದಿಗೆ ಸಮನ್ವಯದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ದೂರಿದ್ದಾರೆ. ಕೃತಕ ಬುದ್ಧಿಮತ್ತೆ (AI) ಬಳಸಿ ನಕಲಿ ದೃಶ್ಯಗಳನ್ನು ಸೃಷ್ಟಿಸಿ, ಅವುಗಳನ್ನು ನಿಜವೆಂದು ಪ್ರಸಾರ ಮಾಡಲಾಗುತ್ತಿದೆ ಎಂದು ಟ್ರಂಪ್ ಹೇಳಿದ್ದಾರೆ.
“ನಕಲಿ ಸುದ್ದಿ ಮಾಧ್ಯಮದೊಂದಿಗೆ ಸಮನ್ವಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಇರಾನ್, ವಿಶ್ವದ ಅತ್ಯಂತ ಪ್ರತಿಷ್ಠಿತ ಯುದ್ಧನೌಕೆಗಳಲ್ಲಿ ಒಂದಾದ ಯುಎಸ್ಎಸ್ ಅಬ್ರಹಾಂ ಲಿಂಕನ್ ವಿಮಾನವಾಹಕ ನೌಕೆ ಸಮುದ್ರದಲ್ಲಿ ಬೆಂಕಿಗಾಹುತಿಯಾಗುತ್ತಿದೆ ಎಂಬ ದೃಶ್ಯಗಳನ್ನು ತೋರಿಸಿದೆ. ಆದರೆ ವಾಸ್ತವದಲ್ಲಿ ಆ ನೌಕೆಗೆ ಯಾವುದೇ ಹಾನಿಯೂ ಆಗಿಲ್ಲ. ಅದು ಉರಿಯಲಿಲ್ಲ, ಅದರ ಮೇಲೆ ದಾಳಿ ನಡೆದಿಲ್ಲ. ಇಂತಹ ಸುಳ್ಳು ಕಥೆಗಳನ್ನು ತಿಳಿದೂ ಪ್ರಸಾರ ಮಾಡಿದ ಮಾಧ್ಯಮ ಸಂಸ್ಥೆಗಳ ವಿರುದ್ಧ ದೇಶದ್ರೋಹದ ಆರೋಪ ಮಾಡಬಹುದು,” ಎಂದು ಅವರು ಹೇಳಿದ್ದಾರೆ.
ಇರಾನ್ ನಿಜವಾಗಿ ಸಂಕಷ್ಟದಲ್ಲಿದ್ದು, ‘ಗೆಲುವು’ ಎಂಬ ಭ್ರಮೆಯನ್ನು ಸೃಷ್ಟಿಸಲು AI ಮೂಲಕ ನಕಲಿ ಯುದ್ಧ ದೃಶ್ಯಗಳನ್ನು ನಿರ್ಮಿಸಿ ಅವನ್ನು ಭ್ರಷ್ಟ ಮಾಧ್ಯಮಗಳ ಮೂಲಕ ಹರಡುತ್ತಿದೆ ಎಂದು ಟ್ರಂಪ್ ಆರೋಪಿಸಿದ್ದಾರೆ. “ಆಮೂಲಾಗ್ರ ಎಡಪಂಥೀಯ ಮಾಧ್ಯಮಗಳಿಗೆ ಇದು ಗೊತ್ತಿದ್ದರೂ ಸುಳ್ಳು ಕಥೆಗಳನ್ನು ಮುಂದುವರಿಸುತ್ತಿವೆ,” ಎಂದು ಅವರು ಟೀಕಿಸಿದ್ದಾರೆ.
ಇದೇ ವೇಳೆ, ತಪ್ಪು ಮಾಹಿತಿಯನ್ನು ಹರಡಿದ ಮಾಧ್ಯಮ ಸಂಸ್ಥೆಗಳ ಪ್ರಸಾರ ಪರವಾನಗಿಗಳನ್ನು ಪರಿಶೀಲಿಸುವುದಾಗಿ ಘೋಷಿಸಿರುವ ಅಮೆರಿಕ ನಿಯಂತ್ರಕ ಸಂಸ್ಥೆಯ ಮುಖ್ಯಸ್ಥ ಬ್ರೆಂಡನ್ ಕಾರ್ ಅವರನ್ನು ಟ್ರಂಪ್ ಪ್ರಶಂಸಿಸಿದ್ದಾರೆ. “ಅವರು ಶತಕೋಟಿ ಡಾಲರ್ ಮೌಲ್ಯದ ಉಚಿತ ಅಮೆರಿಕನ್ ಏರ್ವೇವ್ ಗಳನ್ನು ಪಡೆದು ಅದನ್ನು ಸುಳ್ಳು ಸುದ್ದಿಗಳಿಗೆ ಬಳಸುತ್ತಿದ್ದಾರೆ,” ಎಂದು ಅವರು ಆರೋಪಿಸಿದ್ದಾರೆ.







