ಇರಾನ್ ಯುದ್ಧದಿಂದ ಟ್ರಂಪ್ ಗೆ ಆಪ್ತ ತೈಲ ಕಂಪೆನಿಗಳಿಗೆ 130 ಶತಕೋಟಿ ಡಾಲರ್ ಲಾಭ: ನ್ಯೂಯಾರ್ಕ್ ಟೈಮ್ಸ್ ವರದಿ
ಅಮೆರಿಕದ ಜನರಿಗೆ ಇಂಧನ ಬೆಲೆ ಏರಿಕೆಯ ಹೊರೆ; ಸೆನೆಟರ್ ಕ್ರಿಸ್ ವ್ಯಾನ್ ಆರೋಪ

Photo: x.com/clashreport
ವಾಷಿಂಗ್ಟನ್: ಇರಾನ್ ವಿರುದ್ಧದ ಯುದ್ಧದಿಂದ ಅಮೆರಿಕದ ತೈಲ ಕಂಪೆನಿಗಳು ಭಾರಿ ಲಾಭ ಗಳಿಸುತ್ತಿವೆ. ಆದರೆ, ಇಂಧನ ಬೆಲೆ ಏರಿಕೆಯಿಂದ ಅಮೆರಿಕದ ಜನರು ಹೆಚ್ಚಿನ ಹಣ ಖರ್ಚು ಮಾಡಬೇಕಾಗಿದೆ ಎಂದು ಅಮೆರಿಕದ ಸೆನೆಟರ್ ಕ್ರಿಸ್ ವ್ಯಾನ್ ಹೋಲೆನ್ ಆರೋಪಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಯುದ್ಧ ಆರಂಭಿಸಿದ ಬಳಿಕ ಅವರಿಗೆ ಆಪ್ತವಾಗಿರುವ ತೈಲ ಕಂಪೆನಿಗಳು 130 ಶತಕೋಟಿ ಡಾಲರ್ ಲಾಭ ಗಳಿಸಿವೆ. ಇದೇ ಅವಧಿಯಲ್ಲಿ ಅಮೆರಿಕದ ಕುಟುಂಬಗಳು ಇಂಧನಕ್ಕಾಗಿ ಹೆಚ್ಚುವರಿಯಾಗಿ 1,100 ಡಾಲರ್ಗೂ ಹೆಚ್ಚು ಹಣ ಪಾವತಿಸಿವೆ ಎಂದು ವ್ಯಾನ್ ಹೋಲೆನ್ ಸಾಮಾಜಿಕ ಜಾಲತಾಣ 'ಎಕ್ಸ್' ನಲ್ಲಿನ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ತಮ್ಮ ಹೇಳಿಕೆಗೆ ಅವರು 'ನ್ಯೂಯಾರ್ಕ್ ಟೈಮ್ಸ್'ನ ಅಕ್ಟೋಬರ್ 30ರ ವರದಿಯನ್ನು ಉಲ್ಲೇಖಿಸಿದ್ದಾರೆ. ವರದಿಯ ಪ್ರಕಾರ, ಅಮೆರಿಕದ 50ಕ್ಕೂ ಹೆಚ್ಚು ಪ್ರಮುಖ ತೈಲ ಮತ್ತು ಅನಿಲ ಕಂಪೆನಿಗಳು 2026ರ ಎಪ್ರಿಲ್ನಿಂದ ಸೆಪ್ಟೆಂಬರ್ ವರೆಗಿನ ಆರು ತಿಂಗಳಲ್ಲಿ 130 ಶತಕೋಟಿ ಡಾಲರ್ ಗೂ ಅಧಿಕ ಲಾಭ ಗಳಿಸಿವೆ. 2025ರ ಇದೇ ಅವಧಿಯಲ್ಲಿ ಈ ಕಂಪೆನಿಗಳ ಲಾಭ 47 ಶತಕೋಟಿ ಡಾಲರ್ ಗಿಂತ ಕಡಿಮೆ ಇತ್ತು. ಅಂದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕಂಪೆನಿಗಳ ಲಾಭ ಸುಮಾರು ಮೂರು ಪಟ್ಟು ಹೆಚ್ಚಾಗಿದೆ. ಈ ಲೆಕ್ಕಾಚಾರದಲ್ಲಿ ಮಾರ್ಚ್ ಮತ್ತು ಅಕ್ಟೋಬರ್ ತಿಂಗಳ ಲಾಭವನ್ನು ಸೇರಿಸಿಲ್ಲ.
ಇನ್ನೊಂದೆಡೆ, ಯುದ್ಧದ ಪರಿಣಾಮವಾಗಿ ಇಂಧನ ಬೆಲೆ ಏರಿಕೆಯಾಗಿದ್ದು, ಅಮೆರಿಕದ ಜನರ ಖರ್ಚು ಹೆಚ್ಚಾಗಿದೆ. ಫೆಬ್ರುವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ಆರಂಭಿಸಿದ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ಖರೀದಿಗಾಗಿ ಅಮೆರಿಕದ ಜನರು ಹೆಚ್ಚುವರಿಯಾಗಿ 147 ಶತಕೋಟಿ ಡಾಲರ್ ಖರ್ಚು ಮಾಡಿದ್ದಾರೆ. ಬ್ರೌನ್ ವಿಶ್ವವಿದ್ಯಾಲಯದ ಕ್ಲೈಮೇಟ್ ಸೊಲ್ಯೂಷನ್ಸ್ ಲ್ಯಾಬ್ನ ವಿಶ್ಲೇಷಣೆಯನ್ನು ಉಲ್ಲೇಖಿಸಿ ನ್ಯೂಯಾರ್ಕ್ ಟೈಮ್ಸ್ ಈ ಮಾಹಿತಿ ನೀಡಿದೆ. ಪ್ರತಿ ಕುಟುಂಬದ ಹೆಚ್ಚುವರಿ ವೆಚ್ಚ 1,100 ಡಾಲರ್ಗೂ ಅಧಿಕವಾಗಿದೆ.
ಮಧ್ಯಪ್ರಾಚ್ಯ ಮತ್ತು ರಷ್ಯಾದಲ್ಲಿನ ಸಂಘರ್ಷಗಳಿಂದ ಹಲವು ತೈಲ ಸಂಸ್ಕರಣಾ ಘಟಕಗಳಿಗೆ ಹಾನಿಯಾಗಿದೆ. ಇದರಿಂದ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಕಾರ್ಯನಿರ್ವಹಿಸುತ್ತಿರುವ ಸಂಸ್ಕರಣಾ ಘಟಕಗಳಿಗೆ ಬೇಡಿಕೆ ಹೆಚ್ಚಿದೆ. ಪರಿಣಾಮವಾಗಿ ಅವುಗಳ ಲಾಭವೂ ಏರಿಕೆಯಾಗಿದೆ ಎಂದು ವರದಿ ವಿವರಿಸಿದೆ.
ಅಮೆರಿಕದ ಪ್ರಮುಖ ತೈಲ ಕಂಪೆನಿಗಳಾದ ಎಕ್ಸಾನ್ ಮೊಬಿಲ್ ಮತ್ತು ಚೆವ್ರಾನ್ ಮೂರನೇ ತ್ರೈಮಾಸಿಕದಲ್ಲಿ ಹಲವು ವರ್ಷಗಳಲ್ಲೇ ಗರಿಷ್ಠ ಲಾಭ ದಾಖಲಿಸಿವೆ. ಹಿಂದಿನ ಅವಧಿಗೆ ಹೋಲಿಸಿದರೆ ಎಕ್ಸಾನ್ ಮೊಬಿಲ್ ನ ಲಾಭ ಎರಡು ಪಟ್ಟು ಹೆಚ್ಚಾಗಿದ್ದರೆ, ಚೆವ್ರಾನ್ ನ ಲಾಭ ಸುಮಾರು ಮೂರು ಪಟ್ಟು ಹೆಚ್ಚಾಗಿದೆ.
ತೈಲ ಕಂಪೆನಿಗಳು ಸಾಮಾನ್ಯ ದುಡಿಯುವ ಜನರ ಸಂಕಷ್ಟವನ್ನೇ ಲಾಭ ಗಳಿಸುವ ಅವಕಾಶವಾಗಿ ಬಳಸಿಕೊಳ್ಳುತ್ತಿವೆ ಎಂದು ವ್ಯಾನ್ ಹೋಲೆನ್ ಆರೋಪಿಸಿದ್ದಾರೆ.
"ಜೀವಗಳನ್ನು ಉಳಿಸಲು ಮತ್ತು ಜನರ ವೆಚ್ಚವನ್ನು ಕಡಿಮೆ ಮಾಡಲು ಈ ಯುದ್ಧ ಕೊನೆಗೊಳ್ಳಲೇಬೇಕು" ಎಂದು ಅವರು ಒತ್ತಾಯಿಸಿದ್ದಾರೆ.






