UAEಯ ಬಂದರು ಪ್ರದೇಶಗಳನ್ನು ತಕ್ಷಣ ಖಾಲಿ ಮಾಡುವಂತೆ ಇರಾನ್ ಎಚ್ಚರಿಕೆ; ಖಾರ್ಗ್ ಮೇಲಿನ ದಾಳಿಗೆ ಪ್ರತಿಕಾರಕ್ಕೆ ಸಿದ್ಧತೆ?

Photo Credit ; PTI , AP
ದುಬೈ, ಮಾ.14: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಯುನೈಟೆಡ್ ಅರಬ್ ಎಮಿರೇಟ್ಸ್ ನ ದುಬೈನ ಜೆಬೆಲ್ ಅಲಿ ಬಂದರು, ಅಬುಧಾಬಿಯ ಖಲೀಫಾ ಬಂದರು ಹಾಗೂ ಫುಜೈರಾ ಬಂದರಿನ ಸುತ್ತಮುತ್ತಲಿನ ಪ್ರದೇಶಗಳನ್ನು ತಕ್ಷಣ ಖಾಲಿ ಮಾಡುವಂತೆ ಇರಾನ್ ತುರ್ತು ಎಚ್ಚರಿಕೆ ನೀಡಿದೆ ಇರಾನ್ ನ ಅರೆ ಸರಕಾರಿ ತಸ್ನಿಮ್ ಸುದ್ದಿ ಸಂಸ್ಥೆ ತಿಳಿಸಿದೆ.
“ನಾಗರಿಕ ವಸತಿ ಪ್ರದೇಶಗಳೊಳಗೆ ಅಮೆರಿಕದ ಮಿಲಿಟರಿ ಪಡೆಗಳ ಉಪಸ್ಥಿತಿ ಹಾಗೂ ಅವುಗಳನ್ನು ಮರೆಮಾಚಲಾಗಿರುವುದರಿಂದ ಆ ಪ್ರದೇಶಗಳು ಸೈನಿಕ ಗುರಿಗಳಾಗಿವೆ. ಮುಂದಿನ ಗುರಿ ಅದೇ ಆಗಿರುವ ಸಾಧ್ಯತೆಯಿದೆ” ಎಂದು ಸುದ್ದಿ ಸಂಸ್ಥೆ ತನ್ನ ವರದಿಯಲ್ಲಿ ಎಚ್ಚರಿಸಿದೆ ಎಂದು Aljazeera ವರದಿ ಮಾಡಿದೆ.
ಈ ಬೆಳವಣಿಗೆ ಯುಎಇಯ ಪ್ರಮುಖ ವಾಣಿಜ್ಯ ಹಾಗೂ ಇಂಧನ ಸಾಗಣೆ ಕೇಂದ್ರಗಳ ಭದ್ರತೆ ಕುರಿತು ಗಂಭೀರ ಆತಂಕ ಹುಟ್ಟಿಸಿದೆ. ಜಾಗತಿಕ ವ್ಯಾಪಾರದಲ್ಲಿ ಮಹತ್ವದ ಪಾತ್ರವಹಿಸುವ ಜೆಬೆಲ್ ಅಲಿ, ಖಲೀಫಾ ಹಾಗೂ ಫುಜೈರಾ ಬಂದರುಗಳ ಮೇಲೆ ಯಾವುದೇ ದಾಳಿ ನಡೆದರೆ, ಅಂತರಾಷ್ಟ್ರೀಯ ಸರಕು ಸಾಗಣೆ ಮತ್ತು ಇಂಧನ ಪೂರೈಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಮಧ್ಯಪ್ರಾಚ್ಯದಲ್ಲಿ ಈಗಾಗಲೇ ನಡೆಯುತ್ತಿರುವ ಸಂಘರ್ಷದ ನಡುವೆ ಅಮೆರಿಕದ ಸೈನಿಕ ಉಪಸ್ಥಿತಿಯ ವಿರುದ್ಧ ಇರಾನ್ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಳ್ಳುವ ಭೀತಿ ವ್ಯಕ್ತವಾಗಿದೆ.






