ಅಮೆರಿಕಾದ ನೆಲೆಗಳ ಮೇಲೆ ಪ್ರತಿದಾಳಿ: ಇರಾನ್ ಎಚ್ಚರಿಕೆ

Photo Credit : AP
ಟೆಹ್ರಾನ್, ಜ.14: ಒಂದು ವೇಳೆ ಇರಾನ್ ಮೇಲೆ ಅಮೆರಿಕಾ ದಾಳಿ ನಡೆಸಿದರೆ, ತಾನು ಅಮೆರಿಕಾದ ನೆಲೆಗಳ ಮೇಲೆ ಪ್ರತಿದಾಳಿ ನಡೆಸುವುದಾಗಿ ಅಮೆರಿಕಾದ ಪಡೆಗಳಿಗೆ ಆತಿಥ್ಯ ವಹಿಸಿರುವ ನೆರೆಹೊರೆಯ ದೇಶಗಳಿಗೆ ಇರಾನ್ ಎಚ್ಚರಿಕೆ ನೀಡಿರುವುದಾಗಿ ‘ರಾಯಿಟರ್ಸ್’ ಬುಧವಾರ ವರದಿ ಮಾಡಿದೆ.
ಅಮೆರಿಕಾ ಇರಾನ್ ಅನ್ನು ಗುರಿಯಾಗಿಸಿದರೆ, ಆ ದೇಶಗಳಲ್ಲಿನ ಅಮೆರಿಕಾದ ನೆಲೆಗಳ ಮೇಲೆ ದಾಳಿ ಮಾಡುವುದಾಗಿ ಸೌದಿ ಅರೆಬಿಯಾ ಮತ್ತು ಯುಎಇಯಿಂದ ಟರ್ಕಿಯವರೆಗಿನ ಪ್ರಾದೇಶಿಕ ದೇಶಗಳಿಗೆ ಇರಾನ್ ತಿಳಿಸಿದೆ. ಜೊತೆಗೆ, ಇರಾನಿನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಮತ್ತು ಅಮೆರಿಕಾದ ವಿಶೇಷ ಪ್ರತಿನಿಧಿ ಸ್ಟೀವ್ ವಿಟ್ಕಾಫ್ ನಡುವಿನ ನೇರ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದೆ ಎಂದು ವರದಿ ಹೇಳಿದೆ.
ಖತರ್ ನಲ್ಲಿರುವ ಅಲ್ ಉದೈದ್ನಲ್ಲಿ ಸೆಂಟ್ರಲ್ ಕಮಾಂಡ್ ನ ಪ್ರಧಾನ ಕಚೇರಿ, ಬಹ್ರೈನ್ ನಲ್ಲಿ ನೌಕಾದಳದ ಹಡಗುಪಡೆ ಸೇರಿದಂತೆ ಅಮೆರಿಕಾ ಪ್ರದೇಶದಾದ್ಯಂತ ಪಡೆಗಳನ್ನು ಹೊಂದಿದೆ.
ಈ ಮಧ್ಯೆ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇರಾನಿನ ಜನತೆಯ ಪ್ರಧಾನ ಕೊಲೆಗಾರರಾಗಿದ್ದಾರೆ ಎಂದು ಇರಾನ್ ಭದ್ರತಾ ಪಡೆಗಳ ಮುಖ್ಯಸ್ಥ ಅಲಿ ಲಾರಿಜಾನಿ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ತಿರುಗೇಟು ನೀಡಿದ್ದಾರೆ.
ಇರಾನಿನಲ್ಲಿ ಮುಂದುವರಿದಿರುವ ರಾಷ್ಟ್ರವ್ಯಾಪಿ ಪ್ರತಿಭಟನೆಗಳ ಸಂದರ್ಭ ಹೆಚ್ಚಿನ ಸಾವು-ನೋವು ಸಂಭವಿಸಿದೆ ಎಂಬ ವರದಿಯನ್ನು ಇರಾನ್ ಸರ್ಕಾರಿ ಸ್ವಾಮ್ಯದ ಸುದ್ದಿವಾಹಿನಿ ದೃಢಪಡಿಸಿದ್ದು, ಇದಕ್ಕೆ ಸಶಸ್ತ್ರ ಗುಂಪುಗಳೇ ಕಾರಣ ಎಂದು ದೂಷಿಸಿದೆ. ಇರಾನಿನಲ್ಲಿ ರಾಜಕೀಯ ಅಸ್ಥಿರತೆ ಉಂಟುಮಾಡುವ ಪ್ರಯತ್ನಗಳಿಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರೋತ್ಸಾಹ ನೀಡುತ್ತಿದ್ದು ಹಿಂಸಾಚಾರವನ್ನು ಪ್ರಚೋದಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಗೆ ಇರಾನಿನ ರಾಯಭಾರಿ ಆರೋಪಿಸಿದ್ದಾರೆ. ಇರಾನಿನಲ್ಲಿ ಇಂಟರ್ನೆಟ್ ಸ್ಥಗಿತ ಮುಂದುವರಿದಿದ್ದರೂ, ಅಂತರಾಷ್ಟ್ರೀಯ ಫೋನ್ ಸೇವೆಗಳು ಸಾಂದರ್ಭಿಕವಾಗಿ ಪುನರಾರಂಭಗೊಂಡಿವೆ. ಎರಡು ವಾರಗಳ ಅಶಾಂತಿಯಲ್ಲಿ 100ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಸಾವನ್ನಪ್ಪಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದರೆ, ಸಾವಿರಾರು ಪ್ರತಿಭಟನಾಕಾರರು ಮೃತಪಟ್ಟಿರುವುದಾಗಿ ವಿರೋಧ ಪಕ್ಷದ ಕಾರ್ಯಕರ್ತರು ಪ್ರತಿಪಾದಿಸಿದ್ದಾರೆ.
ಇರಾನ್ನ ಸೇನೆಯು ರಕ್ಷಣಾತ್ಮಕ ಸನ್ನದ್ಧತೆಯ ಉತ್ತುಂಗದಲ್ಲಿದ್ದು, ಯಾವುದೇ ಆಕ್ರಮಣವನ್ನು ಎದುರಿಸಲು ಉನ್ನತ ಸಿದ್ಧತೆಯಲ್ಲಿದೆ. ಇಸ್ರೇಲ್ನೊಂದಿಗಿನ 12 ದಿನಗಳ ಯುದ್ಧಕ್ಕೆ ಹೋಲಿಸಿದರೆ ಕ್ಷಿಪಣಿಗಳ ದಾಸ್ತಾನು ಹೆಚ್ಚಾಗಿದೆ. ಈ ಅವಧಿಯಲ್ಲಿ ಆಗಿರುವ ಎಲ್ಲಾ ಹಾನಿಗಳನ್ನು ಸರಿಪಡಿಸಲಾಗಿದ್ದು ಪಡೆಗಳನ್ನು ಗರಿಷ್ಠ ಸಿದ್ಧತೆಯಲ್ಲಿ ಇರಿಸಿಕೊಳ್ಳಲಾಗಿದೆ ಎಂದು ಇಸ್ಲಾಮಿಕ್ ರೆವೊಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್ಜಿಸಿ)ನ ವಾಯುಪಡೆ ಕಮಾಂಡರ್ ಹೇಳಿರುವುದಾಗಿ ‘ಫಾರ್ಸ್’ ಸುದ್ದಿಸಂಸ್ಥೆ ವರದಿ ಮಾಡಿದೆ.
*ಅಮೆರಿಕಾದ ನಿರ್ಬಂಧಗಳಿಗೆ ಇರಾನ್ ಖಂಡನೆ
ಅಮೆರಿಕಾದ ಹೊಸ ನಿರ್ಬಂಧಗಳು ದೇಶದ ಕಡೆಗೆ ಆಳವಾಗಿ ಬೇರೂರಿರುವ ದ್ವೇಷದಿಂದ ಪ್ರೇರಿತವಾದ ಕಾನೂನುಬಾಹಿರ ಕ್ರಮವಾಗಿದೆ. ಈ ಅಮಾನವೀಯ ಕ್ರಮಗಳು ವಿಶ್ವಸಂಸ್ಥೆಯ ಸನದು (ಚಾರ್ಟರ್) ಮತ್ತು ಅಂತಾರಾಷ್ಟ್ರೀಯ ಕಾನೂನಿನ ತತ್ವಗಳನ್ನು ಉಲ್ಲಂಘಿಸುತ್ತವೆ ಎಂದು ಇರಾನಿನ ವಿದೇಶಾಂಗ ಸಚಿವಾಲಯ ಖಂಡಿಸಿದೆ. ಅಮೆರಿಕಾದ ಏಕಪಕ್ಷೀಯ ಕ್ರಮಗಳು ಜಾಗತಿಕ ವ್ಯಾಪಾರ ವ್ಯವಸ್ಥೆಯನ್ನು ದುರ್ಬಲಗೊಳಿಸುವುದರಿಂದ, ನಿರ್ಬಂಧಗಳು ಇರಾನ್ಗಷ್ಟೇ ಅಲ್ಲದೆ ಆಚೆಯೂ ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತವೆ. ವಿಶ್ವಸಂಸ್ಥೆ ಮತ್ತು ಅದರ ಸಂಸ್ಥೆಗಳು ಅಂತಾರಾಷ್ಟ್ರೀಯ ಕಾನೂನನ್ನು ಎತ್ತಿಹಿಡಿಯುವ ಜವಾಬ್ದಾರಿಯನ್ನು ಹೊಂದಿದ್ದು, ಈ ‘ಬಲವಂತದ ಆರ್ಥಿಕ ಕ್ರಮಗಳನ್ನು’ ತಡೆಯಬೇಕು ಎಂದು ಇಲಾಖೆಯ ವಕ್ತಾರ ಇಸ್ಮಾಯಿಲ್ ಬಘೈ ಆಗ್ರಹಿಸಿದ್ದಾರೆ.
ಇರಾನ್ನೊಂದಿಗೆ ವ್ಯಾಪಾರದಲ್ಲಿ ತೊಡಗಿರುವ ದೇಶಗಳು ಅಮೆರಿಕಾದೊಂದಿಗೆ ಮಾಡುವ ಯಾವುದೇ ವ್ಯವಹಾರದ ಮೇಲೆ 25% ಸುಂಕವನ್ನು ಎದುರಿಸಬೇಕಾಗುತ್ತದೆ ಎಂದು ಟ್ರಂಪ್ ಹೇಳಿದ್ದರು.







