ಅನಧಿಕೃತ ಜಲಮಾರ್ಗಗಳಲ್ಲಿ ಪ್ರಯಾಣಿಸದಂತೆ ಇಂಧನ ಹಡಗುಗಳಿಗೆ ಇರಾನ್ ಎಚ್ಚರಿಕೆ

ಸಾಂದರ್ಭಿಕ ಚಿತ್ರ | Photo Credit : freepik
ಟೆಹರಾನ್, ಜು.3: ಜಗತ್ತಿನ ಅತ್ಯಂತ ಮಹತ್ವದ ಇಂಧನ ಪೂರೈಕೆ ಮಾರ್ಗಗಳಲ್ಲೊಂದಾದ ಹಾರ್ಮುಝ್ ಜಲಸಂಧಿಯನ್ನು ಹಡಗುಗಾರಿಕೆಯ ಮಾರ್ಗವಾಗಿ ಬಳಸುವ ಕುರಿತ ತನ್ನ ನಿಲುವನ್ನು ಇರಾನ್ ಶುಕ್ರವಾರ ಸ್ಪಷ್ಟಪಡಿಸಿದೆ. ನಿಯೋಜಿತ ಅಧಿಕೃತ ಜಲಮಾರ್ಗಗಳಲ್ಲಿ ಮಾತ್ರವೇ ಹಡಗುಗಳು ಪ್ರಯಾಣಿಸಬೇಕು. ಇದರ ಬದಲು ಅನಧಿಕೃತ ಮಾರ್ಗಗಳನ್ನು ಬಳಸಿದಲ್ಲಿ ಕಠಿಣ ಕ್ರಮಗಳನ್ನು ಎದುರಿಸಬೇಕಾಗಬಹುದು ಎಂದು ಇರಾನ್ ಎಚ್ಚರಿಕೆ ನೀಡಿದೆ.
ಪ್ರದೇಶದಲ್ಲಿ ಭದ್ರತೆಯನ್ನು ಖಾತರಿಪಡಿಸಲು ಹಾಗೂ ಅವಘಡಗಳನ್ನು ತಪ್ಪಿಸಲು ಹಡಗುಗಳು ಕೆಲವು ನಿರ್ದಿಷ್ಟ ನೌಕಾಯಾನ ಸಂಹಿತೆಗಳನ್ನು ಅನುಸರಿಸುವುದು ಅಗತ್ಯವಾಗಿದೆ ಎಂದು ಇರಾನ್ ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಖತರ್ ಮಧ್ಯಸ್ಥಿಕೆಯಲ್ಲಿ ಅಮೆರಿಕ ಹಾಗೂ ಇರಾನ್ ನಡುವೆ ಶಾಂತಿ ಮಾತುಕತೆ ನಡೆದ ಬೆನ್ನಲ್ಲೇ ಇರಾನ್ ಈ ಹೇಳಿಕೆಯನ್ನು ನೀಡಿದೆ.
ಇರಾನ್ ರೂಪಿಸಿರುವ ನೌಕಾಯಾನದ ಶಿಷ್ಟಾಚಾರಗಳನ್ನು ಉಲ್ಲಂಘಿಸುವ ಯಾವುದೇ ಹಡಗು ಕೂಡಲೇ ಬಲವಾದ ಪ್ರತೀಕಾರವನ್ನು ಎದುರಿಸಬೇಕಾಗಲಿದ್ದು, ಅದರ ಭದ್ರತೆಗೆ ಬೆದರಿಕೆ ಉಂಟಾಗಲಿದೆ ಎಂದು ಮೂಲಗಳು ತಿಳಿಸಿವೆ. ಇರಾನ್ ಈ ಹಿಂದೆ ಅಮೆರಿಕದೊಂದಿಗೆ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಿದ ಸಂದರ್ಭದಲ್ಲಿಯೂ ಇದೇ ರೀತಿಯ ಎಚ್ಚರಿಕೆಯನ್ನು ನೀಡಿತ್ತು ಎಂದು ಮೂಲಗಳು ಹೇಳಿವೆ.
ಬಹರೈನ್ ನಲ್ಲಿ ಇತ್ತೀಚೆಗೆ ಪ್ರಾದೇಶಿಕ ನಾಯಕರು ಭಾಗವಹಿಸಿದ್ದ ಭದ್ರತಾ ಸಭೆಯಲ್ಲಿ ಹಾರ್ಮುಝ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಸಂಚಾರ ಅಬಾಧಿತವಾಗಿ ನಡೆಯುವುದನ್ನು ತಾನು ಖಾತರಿಪಡಿಸುವುದಾಗಿ ಅಮೆರಿಕದ ಸೆಂಟ್ರಲ್ ಕಮಾಂಡ್ ಘೋಷಿಸಿದ ಬೆನ್ನಲ್ಲೇ ಇರಾನ್ ಈ ಹೇಳಿಕೆ ನೀಡಿರುವುದು ಗಮನಾರ್ಹವಾಗಿದೆ.






