‘ಯುದ್ಧವೂ ಇಲ್ಲ, ಶಾಂತಿಯೂ ಇಲ್ಲ’ ಸ್ಥಿತಿಯನ್ನು ಇರಾನ್ ಇನ್ನು ಸಹಿಸದು: ಸಂಧಾನಕಾರರು

Photo Credit : X
ಟೆಹರಾನ್, ನ.15: ಇರಾನ್ ವಿರುದ್ಧ ಸಂಘರ್ಷವನ್ನು ತೀವ್ರಗೊಳಿಸುವ ಅಥವಾ ಕಡಿಮೆಗೊಳಿಸುವ ಕುರಿತು ಡೊನಾಲ್ಡ್ ಟ್ರಂಪ್ ಪದೇ ಪದೇ ತನ್ನ ನಿಲುವುಗಳನ್ನು ಬದಲಾಯಿಸುತ್ತಿರುವ ನಡುವೆಯೇ, ‘ಯುದ್ಧವೂ ಇಲ್ಲ, ಶಾಂತಿಯೂ ಇಲ್ಲ’ ಎಂಬ ಸ್ಥಿತಿಯಲ್ಲಿ ಇರಾನ್ ಮುಂದುವರಿಯುವುದಿಲ್ಲವೆಂದು ಆ ದೇಶದ ಮುಖ್ಯ ಸಂಧಾನಕಾರ ಮೊಹಮ್ಮದ್ ಬಾಘೇರ್ ಗಾಲಿಬಾಫ್ ರವಿವಾರ ಹೇಳಿದ್ದಾರೆ. ಇದೇ ವೇಳೆ, ಇರಾನ್ ವಿರುದ್ಧ ಮತ್ತೆ ದಾಳಿಗಳನ್ನು ಪುನರಾರಂಭಿಸುವ ದುಸ್ಸಾಹಸಕ್ಕಿಳಿಯದಂತೆ ಅವರು ಡೊನಾಲ್ಡ್ ಟ್ರಂಪ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ.
‘‘ಅಮೆರಿಕವು ಮಾತುಕತೆ ಅಥವಾ ಸಮರ, ಈ ಎರಡರಲ್ಲಿ ಯಾವ ದಾರಿಯನ್ನು ಹಿಡಿಯುತ್ತದೆ ಎಂಬ ಬಗ್ಗೆ ನಮಗೆ ಚಿಂತೆ ಇಲ್ಲ. ಒಂದು ವೇಳೆ ನಾವು ಮುಂದಿಟ್ಟಿರುವ ಏಳು ನ್ಯಾಯಯುತ ಷರತ್ತುಗಳಿಗೆ ಅದು ಸಮ್ಮತಿಸಿದಲ್ಲಿ, ಒಪ್ಪಂದದ ಬಾಗಿಲು ತೆರೆಯಲಿದೆ’’ ಎಂದವರು ಹೇಳಿದ್ದಾರೆ.
ಇರಾನ್ ಸಂಸತ್ ನ ಅಧಿವೇಶನದ ಆರಂಭದಲ್ಲಿ ಸದನವನ್ನುದ್ದೇಶಿಸಿ ಮಾತನಾಡಿದ ಅವರು, ‘‘ಒಂದು ವೇಳೆ ಅಮೆರಿಕವು ಇನ್ನೊಮ್ಮೆ ತಪ್ಪು ಮಾಡಿದಲ್ಲಿ, ಇರಾನ್ ನ ಬಲಿಷ್ಠ ಸಶಸ್ತ್ರ ಪಡೆಗಳು ಯುದ್ಧಭೂಮಿಯ ಭೂಗೋಳವನ್ನು ನಿರ್ಧರಿಸಲಿವೆ’’ ಎಂದರು.






