ಭಯೋತ್ಪಾದನೆಯ ಆರೋಪ | ಇರಾನ್ ಆಡಳಿತ ವಿರೋಧಿ ಹೋರಾಟಗಾರ ಜಂಶೀದ್ ಗೆ ಗಲ್ಲು

ಜಂಶೀದ್ ಶರ್ಮಾಹದ್ |PC : X \ @JongIraansNL
ದುಬೈ : ಭಯೋತ್ಪಾದನೆಗೆ ಸಂಬಂಧಿಸಿದ ವಿವಾದಾತ್ಮಕ ಆರೋಪಗಳನ್ನು ಹೊರಿಸಲ್ಪಟ್ಟಿದ್ದ ಇರಾನಿ-ಜರ್ಮನ್ ಖೈದಿ ಜಂಶೀದ್ ಶರ್ಮಾಹದ್ ಅವರನ್ನು ಇರಾನ್ ಆಡಳಿತ ಗಲ್ಲಿಗೇರಿಸಿದೆ. ಇರಾನಿ ಬೇಹುಗಾರಿಕಾ ಏಜೆನ್ಸಿಗಳು ಜಂಶೀದ್ ಅವರನ್ನು 2020ರಲ್ಲಿ ದುಬೈನಲ್ಲಿ ಅಪಹರಿಸಿದ್ದವು.
ಗಾಝಾ, ಲೆಬನಾನ್ ಸಂಘರ್ಷದ ನಡುವೆ ಇರಾನ್ ಮೇಲೆ ಇಸ್ರೇಲ್ ದಾಳಿ ನಡೆಸಿದ ಕೇವಲ ಎರಡು ದಿನಗಳ ಬಳಿಕ ಶರ್ಮಾಹದ್ ಅವರನ್ನು ಗಲ್ಲಿಗೇರಿಸಲಾಗಿದೆ. ‘ಪಾಶ್ಚಾತ್ಯ ಬೇಹುಗಾರಿಕಾ ಸಂಸ್ಥೆಗಳು, ಅಮೆರಿಕ ಸರಕಾರ ಹಾಗೂ ಶಿಶುಹಂತಕ ಯೆಹೂದ್ಯ ಪಾರಮ್ಯವಾದಿ ಧಣಿಗಳ ಆದೇಶದಂತೆ ಇರಾನ್ ವಿರುದ್ಧ ದಾಳಿಗೆ ಸಂಚು ಹೂಡಿದ್ದರೆಂದು ತೀರ್ಪಿನಲ್ಲಿ ತಿಳಿಸಿದ ಇರಾನ್ ನ ನ್ಯಾಯಾಲಯವು ಸರ್ಮಾಹದ್ ಅವರಿಗೆ ಮರಣದಂಡನೆಯನ್ನು ಘೋಷಿಸಿತ್ತು.
ಐವರು ಮಕ್ಕಳು ಹಾಗೂ ಒಂದು ಮಗು ಸೇರಿದಂತೆ 18 ಮಂದಿ ಸಾವನ್ನಪ್ಪಿ, 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದ ಇರಾನ್ ಮಸೀದಿ ಮೇಲಿನ ದಾಳಿಯಲ್ಲಿ ಜಂಶೀದ್ ಅವರ ಕೈವಾಡವಿತ್ತೆಂದು ಇರಾನ್ ಆಪಾದಿಸಿತ್ತು. ‘ಕಿಂಗ್ಡಮ್ ಅಸೆಂಬ್ಲಿ ಆಫ್ ಇರಾನ್’ ಹಾಗೂ ‘ಟೊಂಡಾರ್’ ತೀವ್ರವಾದಿ ಗುಂಪಿನ ಮೂಲಕ ದಾಳಿಗಳನ್ನು ನಡೆಸಲು ಶರ್ಮಾಹತ್ ಸಂಚು ಹೂಡಿದ್ದರೆಂದು ಇರಾನ್ ಆಡಳಿತ ಆಪಾದಿಸಿತ್ತು. ಶರ್ಮಾಹದ್ ಅವರು 2020ರಲ್ಲಿ ತನ್ನ ಸಾಫ್ಟ್ವೇರ್ ಕಂಪೆನಿಗೆ ಸಂಬಂಧಿಸಿ ವ್ಯವಹಾರ ಒಪ್ಪಂದಕ್ಕಾಗಿ ಭಾರತಕ್ಕೆ ಪ್ರಯಾಣಿಸುತ್ತಿದ್ದಾಗ, ಅವರನ್ನು ದುಬೈನಲ್ಲಿ ಇರಾನ್ನ ಗುಪ್ತಚರ ಏಜೆಂಟರುಗಳು ಅಪಹರಿಸಿದ್ದರು.
ಇರಾನ್ನ ಐ ಆರ್ಜಿ ಸಿ ಪಡೆಗಳ ಕ್ಷಿಪಣಿ ಸ್ಥಾವರಗಳ ಬಗ್ಗೆ ಮಹತ್ವದ ಮಾಹಿತಿಯನ್ನು ಅವರು 2017ರಲ್ಲಿ ಪಾಲ್ಗೊಂಡಿದ್ದ ಟಿವಿ ಕಾರ್ಯಕ್ರಮವೊಂದರಲ್ಲಿ ಬಹಿರಂಗಪಡಿಸಿದರೆಂದು ಇರಾನ್ ಆಡಳಿತ ಆಪಾದಿಸಿತ್ತು. ಶರ್ಮಾಹದ್ ಅವರಿಗೆ 2023ರಲ್ಲಿ ಮರಣದಂಡನೆಯನ್ನು ಘೋಷಿಸಲಾಗಿತ್ತು.







