ಕುವೈತ್ನ ವಿದ್ಯುತ್ ಘಟಕದ ಮೇಲೆ ಇರಾನ್ ದಾಳಿ: ಭಾರತೀಯ ಕಾರ್ಮಿಕ ಮೃತ್ಯು

ಸಾಂದರ್ಭಿಕ ಚಿತ್ರ PC: x.com/PakistanTVcom
ಕುವೈತ್ : ವಿದ್ಯುತ್ ಮತ್ತು ಜಲ ನಿರ್ಲವಣೀಕರಣ ಘಟಕದ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಭಾರತೀಯ ಕಾರ್ಮಿಕ ಮೃತಪಟ್ಟಿದ್ದಾನೆ. ಈ ಘಟಕದ ಕಟ್ಟಡಕ್ಕೆ ತೀವ್ರ ಹಾನಿಯಾಗಿದೆ ಎಂದು ಕುವೈತ್ನ ವಿದ್ಯುತ್ ಮತ್ತು ಜಲ ಖಾತೆ ಸೋಮವಾರ ಮುಂಜಾನೆ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದೆ.
ಅಂತೆಯೇ ದಕ್ಷಿಣ ಲೆಬನಾನ್ ನಲ್ಲಿ ಸಂಭವಿಸಿದ ಸ್ಫೋಟವೊಂದರಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಶಾಂತಿಪಾಲಕ ಮೃತಪಟ್ಟಿದ್ದಾಗಿ ಲೆಬನಾನ್ ನಲ್ಲಿರುವ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆ ಪ್ರಕಟಿಸಿದೆ. ಅಡ್ಚಿಟ್ ಅಲ್ ಕ್ಯೂಸಿಯರ್ ಗ್ರಾಮದಲ್ಲಿ ಪ್ರಾಜೆಕ್ಟೈಲ್ ಸ್ಫೋಟದಿಂದ ಈ ದುರಂತ ಸಂಭವಿಸಿದೆ. ಈ ಪ್ರಾಜೆಕ್ಟೈಲ್ ನ ಮೂಲದ ಬಗ್ಗೆ ಇನ್ನೂ ಮಾಹಿತಿ ಇಲ್ಲ. ಈ ಸನ್ನಿವೇಶಗಳ ಬಗ್ಗೆ ನಿರ್ಧಾರಕ್ಕೆ ಬರುವ ಸಲುವಾಗಿ ತನಿಖೆ ಆರಂಭಿಸಲಾಗಿದೆ ಎಂದು ಶಾಂತಿಪಾಲನಾ ಪಡೆ ಹೇಳಿದೆ.
ಏತನ್ಮಧ್ಯೆ ಅಮೆರಿಕ ಮತ್ತು ಇಸ್ರೇಲ್ ಮೇಲೆ ಪ್ರತೀಕಾರದ ದಾಳಿ ನಡೆಸುವ ಎಚ್ಚರಿಕೆ ನೀಡಿರುವ ಇರಾನ್, ಅಮೆರಿಕ ಹಾಗೂ ಇಸ್ರೇಲ್ ಅಧಿಕಾರಿಗಳ ಖಾಸಗಿ ನಿವಾಸಗಳು ಇದೀಗ ಇರಾನ್ ದಾಳಿಗೆ ಕಾನೂನುಬದ್ಧ ಗುರಿಗಳಾಗಿವೆ ಎಂದು ಹೇಳಿಕೆ ನೀಡಿದೆ. ಜಂಟಿ ಮಿಲಿಟರಿ ಕಮಾಂಡ್ ವಕ್ತಾರ ಈ ಸಂಬಂಧ ಹೇಳಿಕೆ ನೀಡಿದ್ದು, ಯುದ್ಧಾರಂಭದ ಒಂದು ತಿಂಗಳ ಬಳಿಕ ಸಂಘರ್ಷದ ವಾತಾವರಣ ಇಡೀ ಮಧ್ಯಪ್ರಾಚ್ಯಕ್ಕೆ ವ್ಯಾಪಿಸಿದೆ.
ಅಮೆರಿಕ ಮತ್ತು ಇಸ್ರೇಲ್ನ ಮಿಲಿಟರಿ ಹಾಗೂ ರಾಜಕೀಯ ಮುಖಂಡರು ಇಸ್ರೇಲ್ ಸೇರಿದಂತೆ ಮಧ್ಯಪ್ರಾಚ್ಯ ಪ್ರದೇಶವನ್ನು ತೊರೆಯುತ್ತಿರುವ ನಡುವೆಯೇ ಇರಾನ್ ಈ ಎಚ್ಚರಿಕೆ ನೀಡಿದೆ. ಇರಾನ್ ದೇಶದ ವಿವಿಧ ನಗರಗಳಲ್ಲಿ ಇರಾನ್ ಅಧಿಕಾರಿಗಳ ನಿವಾಸಗಳನ್ನು ಗುರಿ ಮಾಡಿ ಅಮೆರಿಕ ಹಾಗೂ ಇಸ್ರೇಲ್ ದಾಳಿ ನಡೆಸುತ್ತಿರುವುದರಿಂದ ಆ ದೇಶದ ಅಧಿಕಾರಿಗಳ ನಿವಾಸದ ಮೇಲೆ ದಾಳಿ ನಡೆಸುವುದು ನಮ್ಮ ಕಾನೂನುಬದ್ಧ ಹಕ್ಕು ಎಂದು ವಕ್ತಾರ ಇಬ್ರಾಹಿಂ ಝೋಲ್ಫಘಾರಿ ಹೇಳಿದ್ದಾರೆ.
ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕದ ದಾಳಿ ಮುಂದುವರಿದಿದ್ದು, ಉತ್ತರ ಟೆಹರಾನ್ನಲ್ಲಿ ಭಾನುವಾರ ಸರಣಿ ಸ್ಫೋಟಗಳು ಸಂಭವಿಸಿವೆ ಎಂದು ಎಎಫ್ಪಿ ವರದಿ ಮಾಡಿದೆ ದಟ್ಟವಾದ ಹೊಗೆ ಬಾನೆತ್ತರಕ್ಕೆ ವ್ಯಾಪಿಸುತ್ತಿದೆ ಎಂದು ಹೇಳಲಾಗಿದ್ದು, ಯಾವ ಗುರಿಯ ಮೇಲೆ ದಾಳಿ ನಡೆದಿದೆ ಎನ್ನುವುದು ಸ್ಪಷ್ಟವಾಗಿಲ್ಲ. ಇರಾನ್ ಕೂಡಾ ಪ್ರತಿದಾಳಿ ಮುಂದುವರಿಸಿದ್ದು, ದಕ್ಷಿಣ ಇಸ್ರೇಲ್ನ ಕೈಗಾರಿಕಾ ಸಂಕೀರ್ಣದ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿದ್ದಾಗಿ ಹೇಳಿದೆ.







