ಇಸ್ರೇಲ್ ಆಸ್ಪತ್ರೆಗೆ ಬಡಿದ ಇರಾನ್ನ ಬ್ಯಾಲಿಸ್ಟಿಕ್ ಕ್ಷಿಪಣಿ : ವರದಿ

Photo credit: indiatoday.in
ಜೆರುಸಲೆಮ್ : ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ 7ನೇ ದಿನಕ್ಕೆ ಕಾಲಿಟ್ಟಿದೆ. ಎರಡೂ ದೇಶಗಳು ಪರಸ್ಪರ ಕ್ಷಿಪಣಿ, ಡ್ರೋನ್ಗಳ ಮೂಲಕ ದಾಳಿ ಮುಂದುವರಿಸಿದೆ. ಇಸ್ರೇಲ್ನ ಪ್ರಮುಖ ಆಸ್ಪತ್ರೆಗೆ ಇರಾನ್ ಕ್ಷಿಪಣಿ ಬಡಿದ ಪರಿಣಾಮ ದಟ್ಟ ಹೊಗೆ ಕಾಣಿಸಿಕೊಂಡಿದೆ ಎಂದು India Today ವರದಿ ಮಾಡಿದೆ.
ಗುರುವಾರ ಇರಾನಿನ ಬ್ಯಾಲಿಸ್ಟಿಕ್ ಕ್ಷಿಪಣಿ ಟೆಲ್ ಅವೀವ್, ರಾಮತ್ ಗ್ಯಾನ್, ಹೊಲೊನ್ ಮತ್ತು ಬೀರ್ಶೆಬಾ ಸೇರಿದಂತೆ ಇಸ್ರೇಲ್ನಾದ್ಯಂತ ಹಲವಾರು ನಗರಗಳಲ್ಲಿ ವ್ಯಾಪಕ ಹಾನಿ ಉಂಟುಮಾಡಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ವೀಡಿಯೊಗಳಲ್ಲಿ ಇರಾನಿನ ಬ್ಯಾಲಿಸ್ಟಿಕ್ ಕ್ಷಿಪಣಿ ಬೀರ್ಶೆಬಾದ ಸೊರೊಕಾ ವೈದ್ಯಕೀಯ ಕೇಂದ್ರಕ್ಕೆ ಅಪ್ಪಳಿಸಿದ ನಂತರ ವ್ಯಾಪಕ ಹಾನಿಯಾಗಿರುವುದು ಕಂಡು ಬಂದಿದೆ.
ʼರಾಷ್ಟ್ರವು ಒಗ್ಗಟ್ಟಿನಿಂದ ಇದೆ. ಯಾವುದೇ ಬಾಹ್ಯ ಒತ್ತಡಕ್ಕೆ ಮಣಿಯುವುದಿಲ್ಲʼ ಎಂದು ಇರಾನ್ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಾಮಿನೈ ಹೇಳಿದ್ದಾರೆ.
ಇರಾನ್ ಶರಣಾಗುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕರೆಗೆ ಪ್ರತಿಕ್ರಿಯಿಸಿದ ಖಾಮಿನೈ, ಅಮೆರಿಕದ ಯಾವುದೇ ಮಿಲಿಟರಿ ದಾಳಿಯು ಗಂಭೀರ ಮತ್ತು ಸರಿಪಡಿಸಲಾಗದ ಪರಿಣಾಮಗಳಿಗೆ ಕಾರಣವಾಗುತ್ತದೆ ಎಂದು ಹೇಳಿದರು.
ಅಮೆರಿಕ ಇರಾನ್ ಮೇಲೆ ದಾಳಿ ಮಾಡಲಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, ʼನಾನು ಅದನ್ನು ಮಾಡಬಹುದು, ನಾನು ಅದನ್ನು ಮಾಡದಿರಬಹುದು. ನಾನು ಏನು ಮಾಡಲಿದ್ದೇನೆಂದು ಯಾರಿಗೂ ತಿಳಿದಿಲ್ಲʼ ಎಂದು ಹೇಳಿದ್ದಾರೆ.







