"ಅಮೆರಿಕದ ಜನರ ಮೇಲೆ ಇರಾನ್ಗೆ ಯಾವುದೇ ದ್ವೇಷವಿಲ್ಲ": ಮಧ್ಯಪ್ರಾಚ್ಯ ಸಂಘರ್ಷದ ಮಧ್ಯೆ ಅಮೆರಿಕದ ಜನರಿಗೆ ಪತ್ರ ಬರೆದ ಇರಾನ್ ಅಧ್ಯಕ್ಷ ಮಸೂದ್ ಪೆಝೆಶ್ಕಿಯಾನ್

ಇರಾನ್ ಅಧ್ಯಕ್ಷ ಮಸೂದ್ ಪೆಝೆಶ್ಕಿಯಾನ್ (Photo: PTI)
ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಸಂಘರ್ಷ ತೀವ್ರಗೊಂಡಿರುವ ಮಧ್ಯೆ ಅಮೆರಿಕದ ಜನತೆಯನ್ನುದ್ದೇಶಿಸಿ ಇರಾನ್ ಅಧ್ಯಕ್ಷ ಮಸೂದ್ ಪೆಝೆಶ್ಕಿಯಾನ್ ಬಹಿರಂಗ ಪತ್ರ ಬರೆದಿದ್ದು, ʼಇರಾನ್ಗೆ ಅಮೆರಿಕದ ಜನರ ಮೇಲೆ ಯಾವುದೇ ದ್ವೇಷವಿಲ್ಲʼ ಎಂದು ಹೇಳಿದ್ದಾರೆ.
ವಿಶ್ವದ ಅತ್ಯಂತ ಹಳೆಯ ನಾಗರಿಕತೆಗಳಲ್ಲಿ ಇರಾನ್ ನಾಗರಿಕತೆಯೂ ಒಂದು. ನಮ್ಮ ದೇಶವು ಯಾವುದೇ ಆಕ್ರಮಣಕಾರಿ ಅಥವಾ ವಿಸ್ತರಣಾ ಚಟುವಟಿಕೆಗಳಲ್ಲಿ ತೊಡಗಿಲ್ಲ. ಬದಲಿಗೆ ಆತ್ಮರಕ್ಷಣೆಯ ಕಾರ್ಯವನ್ನು ನಡೆಸುತ್ತಿದೆ ಎಂದು ಮಸೂದ್ ಪೆಝೆಶ್ಕಿಯಾನ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇರಾನ್ ಅಧ್ಯಕ್ಷ ಮಸೂದ್ ಪೆಝೆಶ್ಕಿಯಾನ್ ಬರೆದ ಪತ್ರದಲ್ಲಿ ಏನಿದೆ?
ಇರಾನ್ ಇತಿಹಾಸವು ಮಾನವ ನಾಗರಿಕತೆಯ ಅತ್ಯಂತ ಹಳೆಯ ನಾಗರಿಕತೆಗಳಲ್ಲಿ ಒಂದಾಗಿದೆ. ಐತಿಹಾಸಿಕ ಮತ್ತು ಭೌಗೋಳಿಕ ಅನುಕೂಲಗಳನ್ನು ಹೊಂದಿದ್ದರೂ ಕೂಡ ಆಧುನಿಕ ಇತಿಹಾಸದಲ್ಲಿ ಇರಾನ್ ಎಂದಿಗೂ ಆಕ್ರಮಣಶೀಲತೆ, ವಸಾಹತುಶಾಹಿ ಅಥವಾ ಪ್ರಭುತ್ವದ ಹಾದಿಯನ್ನು ಹಿಡಿದಿಲ್ಲ. ವಿದೇಶಿ ಆಕ್ರಮಣಗಳು, ದಾಳಿಗಳನ್ನು ಎದುರಿಸಿದರೂ, ನೆರೆಯ ದೇಶಗಳಿಗಿಂತ ಸೇನಾ ಶಕ್ತಿಯಲ್ಲಿ ಮೇಲುಗೈ ಹೊಂದಿದ್ದರೂ ಇರಾನ್ ಎಂದಿಗೂ ಯುದ್ಧವನ್ನು ಮೊದಲು ಪ್ರಾರಂಭಿಸಿಲ್ಲ. ಆದರೆ, ತನ್ನ ಮೇಲೆ ದಾಳಿ ಮಾಡಿದವರನ್ನು ಬಿಡದೆ ಅವರನ್ನು ಹಿಮ್ಮೆಟ್ಟಿಸಿದೆ ಎಂದು ಹೇಳಿದ್ದಾರೆ.
ಇರಾನ್ ಜನರು ಅಮೆರಿಕ, ಯುರೋಪ್ ಅಥವಾ ನೆರೆಹೊರೆಯ ದೇಶಗಳ ಜನರ ಮೇಲೆ ಯಾವುದೇ ದ್ವೇಷವನ್ನು ಹೊಂದಿಲ್ಲ. ವಿದೇಶಿ ಹಸ್ತಕ್ಷೇಪ ಮತ್ತು ಒತ್ತಡಗಳ ನಡುವೆಯೂ ಇರಾನ್ ಯಾವಾಗಲೂ ಅಲ್ಲಿನ ಸರಕಾರ ಮತ್ತು ಜನರಿಗೆ ಇರುವ ವ್ಯತ್ಯಾಸವನ್ನು ಸ್ಪಷ್ಟವಾಗಿ ಗುರುತಿಸುತ್ತದೆ. ಇದು ಇರಾನ್ನ ಸಂಸ್ಕೃತಿ ಮತ್ತು ಸಾಮೂಹಿಕ ಪ್ರಜ್ಞೆಯಲ್ಲಿ ಆಳವಾಗಿ ಬೇರೂರಿರುವ ಸತ್ವವಾಗಿದೆ. ಇದು ತಾತ್ಕಾಲಿಕ ರಾಜಕೀಯ ನಿಲುವಲ್ಲ ಎಂದು ಹೇಳಿದ್ದಾರೆ.
ಇರಾನ್ ಅನ್ನು ಒಂದು ‘ಬೆದರಿಕೆ‘ ಎಂದು ಬಿಂಬಿಸುವುದು ಇತಿಹಾಸದ ವಾಸ್ತವಿಕತೆಗೆ ಹೊಂದಿಕೆಯಾಗುವುದಿಲ್ಲ. ಇಂತಹ ಗ್ರಹಿಕೆಗಳು ಕೇವಲ ರಾಜಕೀಯ ಮತ್ತು ಆರ್ಥಿಕ ಹಿತಾಸಕ್ತಿಗಳ ಫಲಿತಾಂಶವಾಗಿದೆ. ಮಿಲಿಟರಿ ಪ್ರಾಬಲ್ಯ ಸಾಧಿಸುವುದು, ಶಸ್ತ್ರಾಸ್ತ್ರ ಉದ್ಯಮವನ್ನು ಉಳಿಸಿಕೊಳ್ಳುವುದು ಮತ್ತು ಆಯಕಟ್ಟಿನ ಮಾರುಕಟ್ಟೆಗಳನ್ನು ನಿಯಂತ್ರಿಸುವುದು ಇದರ ಹಿಂದಿನ ಇತರ ಉದ್ದೇಶಗಳಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಬೆದರಿಕೆ ಇಲ್ಲದಿದ್ದರೂ ಇದೆ ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಇದೇ ಕಾರಣಕ್ಕೆ ಅಮೆರಿಕ ಇರಾನ್ನ ಸುತ್ತಲೂ ತನ್ನ ಸೇನಾ ನೆಲೆಗಳನ್ನು ಸ್ಥಾಪಿಸಿದೆ. ಅಮೆರಿಕದ ಸ್ಥಾಪನೆಯಾದಾಗಿನಿಂದ ಇಂದಿನವರೆಗೂ ಇರಾನ್ ಎಂದಿಗೂ ಯುದ್ಧವನ್ನು ಆರಂಭಿಸಿಲ್ಲ. ತನ್ನ ನೆಲೆಗಳಿಂದ ಅಮೆರಿಕ ನಡೆಸಿದ ದಾಳಿಗಳು ಮತ್ತು ಮಿಲಿಟರಿ ಉಪಸ್ಥಿತಿಯು ಎಷ್ಟು ಅಪಾಯಕಾರಿ ಎಂಬುದನ್ನು ತೋರಿಸಿಕೊಟ್ಟಿವೆ. ಸ್ವಾಭಾವಿಕವಾಗಿ, ಇಂತಹ ಸ್ಥಿತಿಯನ್ನು ಎದುರಿಸುತ್ತಿರುವ ಯಾವುದೇ ದೇಶವು ತನ್ನ ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸಿಕೊಳ್ಳುವುದನ್ನು ಬಿಡುವುದಿಲ್ಲ. ಇರಾನ್ ಮಾಡುತ್ತಿರುವುದು ಕೇವಲ ಕಾನೂನುಬದ್ಧ ಆತ್ಮರಕ್ಷಣೆಯೇ ಹೊರತು ಯುದ್ಧವಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇರಾನ್ ಮತ್ತು ಅಮೆರಿಕ ನಡುವಿನ ಸಂಬಂಧದಲ್ಲಿ ಮೊದಲಿನಿಂದಲೂ ಶತ್ರುತ್ವ ಇರಲಿಲ್ಲ. ಆದರೆ, 1953 ರಲ್ಲಿ ಇರಾನ್ನ ಸಂಪನ್ಮೂಲಗಳ ರಾಷ್ಟ್ರೀಕರಣವನ್ನು ತಡೆಯಲು ಅಮೆರಿಕ ನಡೆಸಿದ ಕಾನೂನುಬಾಹಿರ ದಂಗೆಯಿಂದ ಪರಿಸ್ಥಿತಿ ಬದಲಾಯಿತು. ಅಮೆರಿಕದ ನೀತಿಗಳ ಬಗ್ಗೆ ಇರಾನ್ನ ಜನರಲ್ಲಿ ಅಪನಂಬಿಕೆಯನ್ನು ಉಂಟು ಮಾಡಿದೆ. ನಂತರದ ದಿನಗಳಲ್ಲಿ ಷಾ ಆಡಳಿತಕ್ಕೆ ಅಮೆರಿಕ ನೀಡಿದ ಬೆಂಬಲ, 1980ರ ದಶಕದಲ್ಲಿ ಹೇರಿದ ಯುದ್ಧದ ಸಮಯದಲ್ಲಿ ಸದ್ದಾಂ ಹುಸೇನ್ಗೆ ಬೆಂಬಲ, ಸುದೀರ್ಘ ನಿರ್ಬಂಧಗಳು ಮತ್ತು ಮಾತುಕತೆಗಳ ನಡುವೆಯೇ ಎರಡು ಬಾರಿ ನಡೆಸಿದ ಅಪ್ರಚೋದಿತ ಸೇನಾ ದಾಳಿಗಳಿಂದ ಈ ಅಪನಂಬಿಕೆ ಹೆಚ್ಚಾಯಿತು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇರಾನ್ನಲ್ಲಿ ಸಾಕ್ಷರತಾ ಪ್ರಮಾಣ ಹೆಚ್ಚಳವಾಗಿದೆ. ಆರೋಗ್ಯ ಸೇವೆ ಮತ್ತು ಮೂಲಸೌಕರ್ಯಗಳಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಿದೆ. ಇವು ಕಲ್ಪಿತ ಕಥೆಗಳಲ್ಲ, ಕಣ್ಣಿಗೆ ಕಾಣುವ ವಾಸ್ತವಗಳಾಗಿದೆ. ಬಾಂಬ್ ದಾಳಿಗಳು ಜನ ಜೀವನದ ಮೇಲೆ ಆಳವಾದ ಪರಿಣಾಮ ಬೀರಿವೆ. ಯುದ್ಧವು ಜನ ಜೀವನದ ಮೇಲೆ ಗಾಢವಾದ ಪರಿಣಾಮ ಉಂಟು ಮಾಡಿದಾಗ ಅದಕ್ಕೆ ಕಾರಣರಾದವರ ಬಗ್ಗೆ ನಿರ್ಲಕ್ಷ್ಯವಹಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಯುದ್ಧವು ಒಂದು ಮೂಲಭೂತ ಪ್ರಶ್ನೆಯನ್ನು ಹುಟ್ಟುಹಾಕಿದೆ. ಈ ಯುದ್ಧದಿಂದ ಅಮೆರಿಕಾದ ಜನರ ಯಾವ ಹಿತಾಶಕ್ತಿ ಈಡೇರಿದೆ? ಇರಾನ್ನಿಂದ ಯಾವುದೇ ಭೌತಿಕ ಬೆದರಿಕೆ ಇತ್ತೇ? ಮುಗ್ಧ ಮಕ್ಕಳ ಹತ್ಯಾಕಾಂಡ, ಕ್ಯಾನ್ಸರ್ ಚಿಕಿತ್ಸಾ ಸೌಲಭ್ಯಗಳ ನಾಶ ಮತ್ತು ಒಂದು ದೇಶವನ್ನು ಶಿಲಾಯುಗಕ್ಕೆ ತಳ್ಳುವುದಾಗಿ ಹೇಳುತ್ತಿರುವುದು ಅಮೆರಿಕದ ಜಾಗತಿಕ ಪ್ರತಿಷ್ಠೆಯನ್ನು ಮತ್ತಷ್ಟು ಹಾನಿಗೊಳಿಸುವುದಲ್ಲದೆ ಮತ್ತೇನು ಸಾಧ್ಯ? ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇರಾನ್ ಮಾತುಕತೆ ಮುಂದುವರಿಸಿತು, ಒಪ್ಪಂದಕ್ಕೆ ಬಂದಿತ್ತು. ತನ್ನ ಎಲ್ಲಾ ಬದ್ಧತೆಗಳನ್ನು ಪೂರೈಸಿತು. ಆ ಒಪ್ಪಂದದಿಂದ ಹಿಂದೆ ಸರಿದು ಮಾತುಕತೆಯ ಮಧ್ಯೆ ಎರಡು ಬಾರಿ ದಾಳಿ ನಡೆಸಿರುವುದು ಅಮೆರಿಕ ಸರಕಾರದ ವಿನಾಶಕಾರಿ ಆಯ್ಕೆಯಾಗಿದೆ.
ಇರಾನ್ನ ಇಂಧನ ಮತ್ತು ಕೈಗಾರಿಕಾ ಸೌಲಭ್ಯಗಳ ಮೇಲೆ ದಾಳಿ ಮಾಡುವುದು ನೇರವಾಗಿ ಇರಾನ್ನ ಜನರನ್ನೇ ಗುರಿಯಾಗಿಸಿದಂತೆ. ಇದು ಯುದ್ಧಾಪರಾಧವಾಗಿದೆ ಮತ್ತು ಗಡಿಯನ್ನು ಮೀರಿ ಅಸ್ಥಿರತೆಯನ್ನು ಉಂಟುಮಾಡುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇಸ್ರೇಲ್ನ ಕುಮ್ಮಕ್ಕಿನಿಂದ ಅಮೆರಿಕ ಯುದ್ಧ ರಂಗಕ್ಕೆ ಇಳಿದಿದೆಯೇ? ಫೆಲೆಸ್ತೀನ್ನಲ್ಲಿ ನಡೆಸಿದ ನರಮೇಧದಿಂದ ಜಗತ್ತಿನ ಗಮನವನ್ನು ಬೇರೆಡೆ ಸೆಳೆಯಲು ಇಸ್ರೇಲ್ ಪ್ರಯತ್ನಿಸುತ್ತಿದೆ ಎಂಬುದು ನಿಜವಲ್ಲವೇ? ಅಮೆರಿಕದ ಸೈನಿಕರು ಮತ್ತು ತೆರಿಗೆದಾರರ ಹಣದಿಂದ ಇಸ್ರೇಲ್ ಈ ಯುದ್ಧವನ್ನು ನಡೆಸಲು ಬಯಸಿದೆ ಎಂದು ಸ್ಪಷ್ಟವಾಗಿ ಕಾಣುತ್ತಿದೆ. "ಅಮೆರಿಕಾ ಮೊದಲು" ಎಂಬುದು ಇಂದಿನ ಅಮೆರಿಕದ ಸರಕಾರದ ಆದ್ಯತೆಗಳಲ್ಲಿ ನಿಜವಾಗಿಯೂ ಇದೆಯೇ ಎಂದು ಪ್ರಶ್ನಿಸಿದ್ದಾರೆ.
ಇಂದು ಜಗತ್ತು ಸಂದಿಗ್ಧ ಪರಿಸ್ಥಿತಿಯಲ್ಲಿದೆ, ಸಂಘರ್ಷದ ಹಾದಿಯು ಹಿಂದೆಂದಿಗಿಂತಲೂ ಹೆಚ್ಚು ದುಬಾರಿಯಾದುದು ಮತ್ತು ವ್ಯರ್ಥವಾದುದು. ಸಂಘರ್ಷ ಅಥವಾ ಸೌಹಾರ್ದತೆಯ ನಡುವಿನ ಆಯ್ಕೆಯು ಮುಂದಿನ ಪೀಳಿಗೆಯ ಭವಿಷ್ಯವನ್ನು ನಿರ್ಧರಿಸಲಿದೆ ಎಂದು ಮಸೂದ್ ಪೆಝೆಶ್ಕಿಯಾನ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.






