ಇರಾನಿಯನ್ನರು ಎಂದೂ ಒತ್ತಡಕ್ಕೆ ಮಣಿಯುವುದಿಲ್ಲ: ಹಾರ್ಮುಝ್ ಉದ್ವಿಗ್ನತೆಯ ನಡುವೆ ಅರಾಘ್ಚಿ ಹೇಳಿಕೆ

ಅಬ್ಬಾಸ್ ಅರಾಘ್ಚಿ | Photo Credit : PTI , AP
ಟೆಹರಾನ್, ಮೇ 8: ರಾಜತಾಂತ್ರಿಕ ಪರಿಹಾರ ಸಾಧ್ಯವಿರುವಾಗಲೆಲ್ಲಾ ಅಮೆರಿಕವು ಮಿಲಿಟರಿ ಕ್ರಮವನ್ನೇ ಆಯ್ದುಕೊಳ್ಳುತ್ತಲೇ ಬಂದಿದೆ ಎಂದು ಇರಾನ್ ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇರಾನಿಯನ್ನರು ಎಂದಿಗೂ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಅವರು ಒತ್ತಿ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ (ಟ್ವಿಟರ್)ನಲ್ಲಿ ಶುಕ್ರವಾರ ಈ ಬಗ್ಗೆ ಬರೆದುಕೊಂಡಿರುವ ಅವರು, ಪ್ರತಿ ಬಾರಿ ರಾಜತಾಂತ್ರಿಕ ಪರಿಹಾರವು ಮಾತುಕತೆಯ ಹಂತದಲ್ಲಿದ್ದಾಗ ಅಮೆರಿಕವು ಬೇಜವಾಬ್ದಾರಿಯುತ ಮಿಲಿಟರಿ ಸಾಹಸವನ್ನು ಆಯ್ದುಕೊಳ್ಳುತ್ತದೆ ಎಂದು ಹೇಳಿದ್ದಾರೆ.
ಇರಾನ್ ನ ಕ್ಷಿಪಣಿ ಸಾಮರ್ಥ್ಯದ ಬಗ್ಗೆ ಅಮೆರಿಕದ ಬೇಹುಗಾರಿಕಾ ಸಂಸ್ಥೆ ಸಿಐಎ ನೀಡಿದ ವರದಿಗಳನ್ನು ಅವರು ತಿರಸ್ಕರಿಸಿದ್ದಾರೆ. ಫೆಬ್ರುವರಿ 28ರಂದು ಆರಂಭವಾದ ಸಂಘರ್ಷ ಪೂರ್ವದ ಮಟ್ಟಕ್ಕೆ ಹೋಲಿಸಿದರೆ, ಇರಾನ್ ನ ಕ್ಷಿಪಣಿ ದಾಸ್ತಾನು ಮತ್ತು ಲಾಂಚರ್ ಸಾಮರ್ಥ್ಯವು ಶೇ 120ರಷ್ಟಿದೆ ಎಂದು ಅವರು ಹೇಳಿದ್ದಾರೆ. ‘‘ನಮ್ಮ ಜನರನ್ನು ರಕ್ಷಿಸುವ ನಮ್ಮ ಸಿದ್ಧತೆಯ ಬಗ್ಗೆ ಹೇಳುವುದಾದರೆ ಅದು 1,000% ರಷ್ಟಿದೆ’’ ಎಂದು ಅಬ್ಬಾಸ್ ಅರಾಘ್ಚಿ ಹೇಳಿದ್ದಾರೆ.




