ಪ್ರತಿಭಟನಾಕಾರರನ್ನು ಗಲ್ಲಿಗೇರಿಸುವುದಿಲ್ಲ: ಇರಾನ್ ವಿದೇಶಾಂಗ ಸಚಿವ

Photo credit: PTI
ಹೊಸದಿಲ್ಲಿ: ಸರಕಾರ ವಿರೋಧಿ ಪ್ರತಿಭಟನಾಕಾರರಿಗೆ ಮರಣದಂಡನೆ ವಿಧಿಸಲು ಇರಾನ್ ಆಡಳಿತವು ಯೋಜಿಸಿದೆ ಎನ್ನುವುದನ್ನು ದೇಶದ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಅವರು ನಿರಾಕರಿಸಿದ್ದಾರೆ. ಇದಕ್ಕೂ ಮುನ್ನ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಇರಾನ್ನಲ್ಲಿ ಪ್ರತಿಭಟನಾಕಾರರ ಹತ್ಯೆಗಳು ನಿಂತಿವೆ ಎಂಬ ಮಾಹಿತಿ ತನಗೆ ಲಭಿಸಿದೆ ಎಂದು ಹೇಳಿದ್ದರು.
ಬುಧವಾರ ಫಾಕ್ಸ್ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ಪ್ರತಿಭಟನಾಕಾರರನ್ನು ಗಲ್ಲಿಗೇರಿಸುವ ಯೋಜನೆಯಿದೆಯೇ ಎಂಬ ಪ್ರಶ್ನೆಗೆ ನಕಾರಾತ್ಮಕವಾಗಿ ಉತ್ತರಿಸಿದ ಅರಘ್ಚಿ, ಗಲ್ಲಿಗೇರಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಜ.8ರಿಂದ ದೇಶಾದ್ಯಂತ ವ್ಯಾಪಿಸಿದ್ದ ಪ್ರತಿಭಟನೆಗಳ ವಿರುದ್ಧ ಕಠಿಣ ಕ್ರಮದ ಬಳಿಕ ತನ್ನ ಸರಕಾರವು ಪರಿಸ್ಥಿತಿಯ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದೆ ಎಂದು ಹೇಳಿದ ಅವರು,‘ಮೂರು ದಿನಗಳ ಭಯೋತ್ಪಾದಕ ಕಾರ್ಯಾಚರಣೆಯ ಬಳಿಕ ಈಗ ಶಾಂತಿ ನೆಲೆಸಿದೆ, ನಾವು ಸಂಪೂರ್ಣ ನಿಯಂತ್ರಣವನ್ನು ಹೊಂದಿದ್ದೇವೆ’ ಎಂದರು.
ಸ್ಥಳೀಯ ಕರೆನ್ಸಿಯ ಮೌಲ್ಯಕುಸಿತ ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚದ ವಿರುದ್ಧ ಕಳೆದ ವರ್ಷದ ಡಿಸೆಂಬರ್ನಲ್ಲಿ ವ್ಯಾಪಾರಿಗಳು ಬೀದಿಗಿಳಿದಿದ್ದು ಪ್ರತಿಭಟನೆಗಳಿಗೆ ನಾಂದಿ ಹಾಡಿತ್ತು ಮತ್ತು ಅದು ಶೀಘ್ರವೇ ಸರಕಾರದ ವಿರುದ್ಧ ವ್ಯಾಪಕ ಪ್ರತಿಭಟನೆಯಾಗಿ ಉಲ್ಬಣಗೊಂಡಿತ್ತು.
ರಾಷ್ಟ್ರವ್ಯಾಪಿ ಪ್ರತಿಭಟನೆಗಳ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾವುಗಳು ಸಂಭವಿಸಿವೆ ಎಂಬ ವರದಿಗಳನ್ನು ಇರಾನ್ ಸರಕಾರಿ ದೂರದರ್ಶನವು ಒಪ್ಪಿಕೊಂಡಿದ್ದು, ಇದಕ್ಕೆ ಸಶಸ್ತ್ರ ಮತ್ತು ಭಯೋತ್ಪಾದಕ ಗುಂಪುಗಳು ಕಾರಣ ಎಂದು ಹುತಾತ್ಮರ ಪ್ರತಿಷ್ಠಾನದ ಮುಖ್ಯಸ್ಥರನ್ನು ಉಲ್ಲೇಖಿಸಿ ಹೇಳಿದೆ.
ಎರಡು ವಾರಗಳ ಅಶಾಂತಿಯ ಸಂದರ್ಭದಲ್ಲಿ 100ಕ್ಕೂ ಅಧಿಕ ಭದ್ರತಾ ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ ಎಂದು ಇರಾನ್ ಸರಕಾರಿ ಮಾಧ್ಯಮಗಳು ವರದಿ ಮಾಡಿದ್ದರೆ, ಸಾವಿನ ಸಂಖ್ಯೆ ಹೆಚ್ಚಾಗಿದ್ದು ಮೃತರಲ್ಲಿ ಸಾವಿರಾರು ಪ್ರತಿಭಟನಾಕಾರರು ಸೇರಿದ್ದಾರೆ ಎಂದು ವಿರೋಧಿ ಕಾರ್ಯಕರ್ತರು ಪ್ರತಿಪಾದಿಸಿದ್ದಾರೆ.
2,400ಕ್ಕೂ ಅಧಿಕ ಪ್ರತಿಭಟನಾಕಾರರು ಹಾಗೂ 150ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಗಳು ಮತ್ತು ಸರಕಾರದ ಬೆಂಬಲಿಗರ ಸಾವುಗಳನ್ನು ತಾನು ದೃಢಪಡಿಸಿಕೊಂಡಿರುವುದಾಗಿ ಅಮೆರಿಕದ ಮಾನವ ಹಕ್ಕುಗಳ ಕಾರ್ಯಕರ್ತರ ಸುದ್ದಿಸಂಸ್ಥೆಯು ಹೇಳಿದೆ.







