ಇಸ್ರೇಲ್ ನ ಪ್ರಧಾನ ವಿಜ್ಞಾನ ಸಂಸ್ಥೆಗೆ ಅಪ್ಪಳಿಸಿದ ಇರಾನ್ ನ ಕ್ಷಿಪಣಿ

PC | AP
ಟೆಹ್ರಾನ್: ಇಸ್ರೇಲ್ ನ ಪ್ರಧಾನ ಸಂಶೋಧನಾ ಸಂಸ್ಥೆ `ದಿ ವೈಜ್ಮನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್'ನ ಮೇಲೆ ಇರಾನ್ ನ ಕ್ಷಿಪಣಿ ಅಪ್ಪಳಿಸಿದ್ದು ಹಲವು ಪ್ರಯೋಗಾಲಯಗಳಿಗೆ ವ್ಯಾಪಕ ಹಾನಿಯನ್ನುಂಟು ಮಾಡಿದೆ. ಈ ದಾಳಿಯು ಇರಾನ್ ಗೆ ದೊರೆತ ನೈತಿಕ ಗೆಲುವೆಂದು ಮಾಧ್ಯಮಗಳು ವಿಶ್ಲೇಷಿಸಿವೆ.
ರವಿವಾರ ಬೆಳಿಗ್ಗೆ ನಡೆದಿದ್ದ ದಾಳಿಯಲ್ಲಿ ಸಾವು-ನೋವು ಸಂಭವಿಸಿಲ್ಲ, ಆದರೆ ಸಂಸ್ಥೆಯ ಆವರಣದಲ್ಲಿರುವ ಎರಡು ಪ್ರಮುಖ ಕಟ್ಟಡಗಳಿಗೆ ಹಾನಿ ಎಸಗಿದೆ. ಒಂದು ಕಟ್ಟಡದಲ್ಲಿ ಜೀವ ವಿಜ್ಞಾನ ಪ್ರಯೋಗಾಲಯವಿದ್ದರೆ ನಿರ್ಮಾಣ ಹಂತದ ಮತ್ತೊಂದು ಕಟ್ಟಡವನ್ನು ರಸಾಯನ ಶಾಸ್ತ್ರ ಸಂಶೋಧನೆಗೆ ಗೊತ್ತುಪಡಿಸಲಾಗಿದೆ. 12ಕ್ಕೂ ಹೆಚ್ಚು ಇತರ ಕಟ್ಟಡಗಳಿಗೂ ಹಾನಿಯಾಗಿರುವುದಾಗಿ ವರದಿಯಾಗಿದೆ.
ಜೀವ ವಿಜ್ಞಾನ, ಭೌತಶಾಸ್ತ್ರ ಮತ್ತು ರಸಾಯನ ಶಾಸ್ತ್ರಕ್ಕೆ ನೀಡಿದ ಕೊಡುಗೆಗಳಿಗಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿರುವ ಸಂಸ್ಥೆಯಲ್ಲಿನ ದಶಕಗಳ ಶೈಕ್ಷಣಿಕ ಸಂಶೋಧನೆಗೆ ಈ ಕ್ಷಿಪಣಿ ದಾಳಿಯು ಹೊಡೆತ ನೀಡಿದೆ. `ಅವರು ಇಸ್ರೇಲ್ ನಲ್ಲಿ ವಿಜ್ಞಾನದ ಕಿರೀಟದಲ್ಲಿದ್ದ ರತ್ನಕ್ಕೇ ಹಾನಿಯೆಸಗಲು ಯಶಸ್ವಿಯಾಗಿದ್ದು ಇದು ಇರಾನ್ ಗೆ ನೈತಿಕ ಗೆಲುವಾಗಿದೆ ಎಂದು ಸಂಸ್ಥೆಯ ಪ್ರೊಫೆಸರ್ ಒರೆನ್ ಶುಲ್ಡಿನರ್ ಹೇಳಿರುವುದಾಗಿ `ಅಸೋಸಿಯೇಟೆಡ್ ಪ್ರೆಸ್' ವರದಿ ಮಾಡಿದೆ.





