ಇಸ್ರೇಲ್ ನ ಹೈಫಾದ ರಾಸಾಯನಿಕ ಘಟಕದ ಮೇಲೆ ಕ್ಷಿಪಣಿ ದಾಳಿ: IRGC

Screengrab: X/@RT_India_news
ಟೆಹ್ರಾನ್: ಇರಾನ್ ನ ಪೆಟ್ರೋಕೆಮಿಕಲ್ ಘಟಕದ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ, ಇಸ್ರೇಲ್ ನ ಹೈಫಾ ನಗರದಲ್ಲಿರುವ ರಾಸಾಯನಿಕ ಘಟಕದ ಮೇಲೆ ಕ್ಷಿಪಣಿ ದಾಳಿ ನಡೆಸಿರುವುದಾಗಿ IRGC (ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್) ಹೇಳಿದೆ ಎಂದು aljazeera.com ವರದಿ ಮಾಡಿದೆ.
ಇರಾನ್ನ ಪೆಟ್ರೋಕೆಮಿಕಲ್ ತಾಣದ ಮೇಲಿನ ದಾಳಿಯನ್ನು ‘ಅಮೆರಿಕ–ಇಸ್ರೇಲ್ ದಾಳಿ’ ಎಂದು ಪರಿಗಣಿಸಿರುವ IRGC, ಅದಕ್ಕೆ ಪ್ರತಿಯಾಗಿ ಹೈಫಾದಲ್ಲಿರುವ ಇದೇ ಮಾದರಿಯ ಕೈಗಾರಿಕಾ ಘಟಕವನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ತಿಳಿಸಿದೆ.
ತನ್ನ ದೇಶದ ಗಡಿಯೊಳಗೆ ನಾಗರಿಕ ಮತ್ತು ಇಂಧನ ಮೂಲಸೌಕರ್ಯಗಳ ಮೇಲೆ ಮತ್ತಷ್ಟು ದಾಳಿಗಳು ನಡೆದರೆ, ಅದರ ಪರಿಣಾಮಗಳು ಜಾಗತಿಕ ಮಟ್ಟದಲ್ಲಿ ಕಂಡುಬರಲಿವೆ ಎಂದು IRGC ಎಚ್ಚರಿಕೆ ನೀಡಿದೆ.
‘ವಸತಿ ಪ್ರದೇಶಗಳು ಮತ್ತು ತೈಲ ಕೈಗಾರಿಕೆಗಳ ಮೇಲೆ ದಾಳಿ ನಡೆಸುವ ಮೂಲಕ ಇಸ್ರೇಲ್ ಅಪಾಯಕಾರಿ ಬೆಳವಣಿಗೆಗೆ ಕಾರಣವಾಗಿದೆ. ಇದರ ಪರಿಣಾಮಗಳು ಮಧ್ಯಪ್ರಾಚ್ಯದ ಎಲ್ಲ ಇಂಧನ ತಾಣಗಳಿಗೆ ವಿಸ್ತರಿಸಬಹುದು. ಜಾಗತಿಕ ಆರ್ಥಿಕತೆಯ ಮೇಲೆ ಆಗುವ ಪರಿಣಾಮಗಳಿಗೆ ಅಮೆರಿಕ ಹೊಣೆಗಾರನಾಗಿರಲಿದೆ’ ಎಂದು IRGC ಹೇಳಿಕೆಯಲ್ಲಿ ತಿಳಿಸಿದೆ.
ಈ ಮಧ್ಯೆ, ಖುಝೆಸ್ತಾನ್ ಪ್ರಾಂತ್ಯದ ಮಹಶಹರ್ ನಲ್ಲಿರುವ ಕರುಣ್ ಪೆಟ್ರೋಕೆಮಿಕಲ್ ಘಟಕದ ಮೇಲೆ ಇಸ್ರೇಲ್ ಎರಡು ಬಾರಿ ದಾಳಿ ನಡೆಸಿದೆ ಎಂದು ಇರಾನ್ ನ ಅರೆ ಸರಕಾರಿ ಸುದ್ದಿ ಸಂಸ್ಥೆ ಮೆಹರ್ ವರದಿ ಮಾಡಿದೆ.
ಈ ದಾಳಿಗಳಲ್ಲಿ ಯಾವುದೇ ಸಾವು–ನೋವು ಸಂಭವಿಸಿಲ್ಲ. ಘಟಕಕ್ಕೆ ಉಂಟಾಗಿರುವ ಹಾನಿಯ ಪ್ರಮಾಣವನ್ನು ಇನ್ನೂ ಪರಿಶೀಲಿಸಲಾಗುತ್ತಿದೆ ಎಂದು ವರದಿ ಹೇಳಿದೆ.
ಭದ್ರತಾ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮಹಶಹರ್ ಬಂದರು ಆಡಳಿತವು ನಗರ ಮಟ್ಟದ ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಹಾಜರಾತಿಯನ್ನು ಶೇಕಡಾ 30ಕ್ಕೆ ಇಳಿಸಿದೆ.
‘ಇಂದಿನಿಂದ ಎಲ್ಲ ನಗರ ಮಟ್ಟದ ಕಚೇರಿಗಳು ಶೇಕಡಾ 30ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲಿವೆ. ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಕಚೇರಿಗಳಿಗೆ ಭೇಟಿ ನೀಡುವಾಗ ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು’ ಎಂದು ಮೆಹರ್ ಸುದ್ದಿ ಸಂಸ್ಥೆ ತಿಳಿಸಿದೆ.
ಆದರೆ ತುರ್ತು ಸೇವೆಗಳು ಹಾಗೂ ವಿದ್ಯುತ್, ನೀರು ಮತ್ತು ಅನಿಲ ಪೂರೈಕೆಗೆ ಸಂಬಂಧಿಸಿದ ಸೇವೆಗಳಿಗೆ ಈ ನಿರ್ಬಂಧ ಅನ್ವಯಿಸುವುದಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.






