ಹಮಾಸ್ ನ ರಾಕೆಟ್ ದಾಳಿಯನ್ನು ಸಂಪೂರ್ಣ ತಡೆಯಲು ವಿಫಲವಾದ 'ಐರನ್ ಡೋಮ್'

Photo: NDTV
ಟೆಲ್ಅವೀವ್: ಕ್ಷಿಪಣಿ, ರಾಕೆಟ್ ದಾಳಿಗಳಿಂದ ತನ್ನನ್ನು ರಕ್ಷಿಸಿಕೊಳ್ಳುವ ಅತ್ಯಾಧುನಿಕವಾದ ರಕ್ಷಣಾ ವ್ಯವಸ್ಥೆ ‘ಐರನ್ ಡೋಮ್’(ಕಬ್ಬಿಣದ ಗೋಪುರ ಎಂದು ಅರ್ಥ) ಅನ್ನು ಇಸ್ರೇಲ್ ಹೊಂದಿದ್ದರೂ ಹಮಾಸ್ ಹೋರಾಟಗಾರರು ಅದನ್ನು ಭೇದಿಸಿ, ಇಸ್ರೇಲಿ ಪ್ರದೇಶದೊಳಗಿರುವ ಗುರಿಗಳ ಮೇಲೆ ದಾಳಿ ನಡೆಸಿರುವಲ್ಲಿ ಸಫಲವಾಗಿರುವುದು ಇಸ್ರೇಲಿ ಸೇನಾಧಿಕಾರಿಗಳ ಕಳವಳಕ್ಕೆ ಕಾರಣವಾಗಿದೆ. ಹಮಾಸ್ ಉಡಾವಣೆಗೊಳಿಸಿದ ರಾಕೆಟ್ಗಳು ಹಾಗೂ ಕ್ಷಿಪಣಿಗಳನ್ನು ಐರನ್ ಡೋಮ್ ತಡೆದು, ಅವುಗಳನ್ನು ನಾಶಪಡಿಸುವ ಮೂಲಕ ಸಾವುನೋವನ್ನು ತಪ್ಪಿಸುತ್ತಿರುವ ವೀಡಿಯೊವೊಂದು ಜಾಲತಾಣಗಳಲ್ಲಿ ಹರಿದಾಡಿದೆ. ಆದರೂ, ಜಗತ್ತಿನ ಅತ್ಯಾಧುನಿಕ ರಕ್ಷಣಾ ವ್ಯವಸ್ಥೆಯನ್ನು ಭೇದಿಸಲು ಹಮಾಸ್ ಸಫಲವಾಗಿದ್ದು, ಇಸ್ರೇಲ್ನೊಳಗಿರುವ ಹಲವು ಗುರಿಗಳ ಮೇಲೆ ದಾಳಿ ನಡೆಸಿತ್ತು.
ಏನಿದು ಐರನ್ ಡೋಮ್?
ಐರನ್ಡೋಮ್ ಎಂಬುದು ನೆಲದಿಂದ ಆಗಸಕ್ಕೆ ಚಿಮ್ಮುವ ಅಲ್ಪದೂರ ವ್ಯಾಪ್ತಿಯ ವಾಯುರಕ್ಷಣಾ ವ್ಯವಸ್ಥೆಯಾಗಿದೆ. ಕ್ಷಿಪಣಿಗಳು, ರಾಕೆಟ್ಗಳು ಹಾಗೂ ಮಾನವರಹಿತ ವೈಮಾನಿಕ ವಾಹನಗಳನ್ನು ಕ್ಷಿಪಣಿ ಪ್ರತ್ಯಾಸ್ತ್ರಗಳ ಮೂಲಕ ಆಗಸ ಮಧ್ಯದಲ್ಲೇ ತಡೆದು, ಅವುಗಳನ್ನು ನಾಶಪಡಿಸುತ್ತದೆ. ಈ ವ್ಯವಸ್ಥೆಯನ್ನು ಇಸ್ರೇಲ್ 2011ರಲ್ಲಿ ಸ್ಥಾಪಿಸಿದ್ದು, ಇಂದು ಅದನ್ನು ದೇಶಾದ್ಯಂತ ವಿವಿಧ ಆಯಕಟ್ಟಿನ ಸ್ಥಳಗಳಲ್ಲಿ ಸ್ಥಾಪಿಸಲಾಗಿದೆ.
ಈ ವಾಯುರಕ್ಷಣಾ ವ್ಯವಸ್ಥೆಯು 70 ಕಿ.ಮೀ.ವ್ಯಾಪ್ತಿಯನ್ನು ಹೊಂದಿದೆ. ಗಾಝಾದಿಂದ ಇಸ್ರೇಲ್ ನೆಲದೊಳಗೆ ಹಮಾಸ್ 5 ಸಾವಿರಕ್ಕೂ ಅಧಿಕ ರಾಕೆಟ್ಗಳನ್ನು ಎಸೆದಾಗ ಐರನ್ಡೋಮ್ನಲ್ಲಿರುವ ಪತ್ತೆ ಹಾಗೂ ಬೆನ್ನಟ್ಟುವಿಕೆಯ ರಾಡಾರ್ ವ್ಯವಸ್ಥೆ ಅವುಗಳನ್ನು ಪತ್ತೆಹಚ್ಚಿ, ಈ ಬಗ್ಗೆ ಮಾಹಿತಿಯನ್ನು ಶಸ್ತ್ರಾಸ್ತ್ರ ನಿಯಂತ್ರಣ ವ್ಯವಸ್ಥೆಗೆ ಕಳುಹಿಸಿದೆ. ಶಸ್ತ್ರಾಸ್ತ್ರ ನಿಯಂತ್ರಣ ವ್ಯವಸ್ಥೆಯು ರಾಕೆಟ್ಗಳ ಪಥ ಹಾಗೂ ಅವುಗಳ ಸಂಭಾವ್ಯಗುರಿಯ ಕುರಿತು ಕ್ಷಿಪ್ರವಾಗಿ ಅಂದಾಜು ಮಾಡಿ, ಅವುಗಳನ್ನು ಅಡ್ಡಗಟ್ಟಲು ಪ್ರತ್ಯಾಸ್ತ್ರ ಕ್ಷಿಪಣಿಗಳನ್ನು ಕಳುಹಿಸಿತ್ತು.
ಜನದಟ್ಟಣೆಯ ಪ್ರದೇಶದ ಮೇಲೆ ಶತ್ರು ಕ್ಷಿಪಣಿಯು ಗುರಿಯಿಟ್ಟಿದ್ದಲ್ಲಿ, ಐರನ್ಡೋಮ್ನಲ್ಲಿರುವ ಮಿಸೈಲ್ ಉಡಾವಕವು ತಾಮಿರ್ ಕ್ಷಿಪಣಿಗಳನ್ನು ಉಡಾವಣೆಗೊಳಿಸಿ,ಅವುಗಳನ್ನು ನಾಶಪಡಿಸುತ್ತದೆ.
ಐರನ್ ಡೋಮ್ ನ ಭದ್ರತಾ ಕವಚವನ್ನು ಭೇದಿಸಲು ಹಮಾಸ್ ಗೆ ಸಾಧ್ಯವಾದದ್ದು ಹೇಗೆ?
ಆದರೆ ಹಮಾಸ್ 5 ಸಾವಿರಕ್ಕೂ ಅಧಿಕ ರಾಕೆಟ್ಗಳನ್ನು 20 ನಿಮಿಷಗಳ ಅವಧಿಯಲ್ಲಿ ಎಸೆದಿತ್ತು. ಐರನ್ಡೋಮ್ ಅನೇಕ ರಾಕೆಟ್ಗಳನ್ನು ನಾಶಪಡಿಸುವಲ್ಲಿ ಯಶಸ್ವಿಯಾದರೂ, ಕೆಲವು ಈ ಭದ್ರತಾ ಕವಚವನ್ನು ಭೇದಿಸಿ ಇಸ್ರೇಲ್ ಪ್ರಾಂತದೊಳಗೆ ಅಪ್ಪಳಿಸುವಲ್ಲಿ ಯಶಸ್ವಿಯಾಗಿದ್ದವು. ಹೀಗೆ ಐರನ್ ಡೋಮ್ ರಕ್ಷಣಾ ಕವಚವನ್ನು ದಾಟುವಲ್ಲಿ ಯಶಸ್ವಿಯಾದ ರಾಕೆಟ್ಗಳು ಇಸ್ರೇಲ್ ರಾಜಧಾನಿ ಟೆಲ್ ಅವೀವ್ನಷ್ಟು ದೂರದ ಕಟ್ಟಡಗಳಿಗೂ ಅಪ್ಪಳಿಸಿದ್ದವು ಎಂದು ಮೂಲಗಳು ತಿಳಿಸಿವೆ.







