Pakistan | ಇಸ್ಲಾಮಾಬಾದ್ ಮಸೀದಿಯಲ್ಲಿ ಆತ್ಮಹತ್ಯಾ ಬಾಂಬ್ ಸ್ಫೋಟ: ಹೊಣೆ ಹೊತ್ತ ಐಎಸ್

People chant slogans as they condemn the deadly explosion at a Shi'ite Muslim mosque in Islamabad, during a protest in Karachi, Pakistan | Photo Credit: Reuters
ಇಸ್ಲಾಮಾಬಾದ್: ಶುಕ್ರವಾರ ಇಸ್ಲಾಮಾಬಾದ್ ನ ಶಿಲ್ಟೆ ಮಸೀದಿಯಲ್ಲಿ ಸಂಭವಿಸಿದ ಆತ್ಮಹತ್ಯಾ ಬಾಂಬರ್ ದಾಳಿಯಲ್ಲಿ ಕನಿಷ್ಠ 31 ಮಂದಿ ಮೃತಪಟ್ಟಿದ್ದು, 169ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಗ್ರೂಪ್ ಹೊತ್ತುಕೊಂಡಿದೆ.
ಪಾಕಿಸ್ತಾನದ ರಾಜಧಾನಿಯಾದ ಇಸ್ಲಾಮಾಬಾದ್ ನಲ್ಲಿ 2008ರ ಮ್ಯಾರಿಯಟ್ ಹೋಟೆಲ್ ಮೇಲಿನ ಬಾಂಬ್ ದಾಳಿಯ ನಂತರ ನಡೆದ ಅತ್ಯಂತ ಭೀಕರ ಬಾಂಬ್ ದಾಳಿ ಇದಾಗಿದೆ.
ಇಸ್ಲಾಮಾಬಾದ್ ನ ಹೊರವಲಯದಲ್ಲಿರುವ ತಲರಾಯಿ ಪ್ರದೇಶದ ಇಮಾಂ ಬರ್ಗಾ ಕಸರ್-ಇ-ಖಾದಿಜತುಲ್ ಕುಬ್ರಾ ಮಸೀದಿಯಲ್ಲಿ ನಡೆದ ಬಾಂಬ್ ದಾಳಿಯಲ್ಲಿ 31 ಮಂದಿ ಮೃತಪಟ್ಟಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ನಗರ ಅಧಿಕಾರಿಗಳು ತಿಳಿಸಿದ್ದಾರೆ. ಮೃತರ ಸಂಖ್ಯೆಯಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ ಎಂದೂ ಅವರು ಹೇಳಿದ್ದಾರೆ.
ಶುಕ್ರವಾರದ ಪ್ರಾರ್ಥನೆಗಾಗಿ ದೇಶದಾದ್ಯಂತ ಮಸೀದಿಗಳು ಜನರಿಂದ ಕಿಕ್ಕಿರಿದು ತುಂಬಿದ್ದ ವೇಳೆ ಈ ಬಾಂಬ್ ಸ್ಫೋಟ ಸಂಭವಿಸಿದೆ. “ದಾಳಿಕೋರನನ್ನು ಮಸೀದಿಯ ದ್ವಾರದ ಬಳಿಯೇ ತಡೆಯಲಾಗಿದ್ದು, ಆತ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ” ಎಂದು ಭದ್ರತಾ ಮೂಲಗಳು ತಿಳಿಸಿವೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿರುವ ಇಸ್ಲಾಮಿಕ್ ಸ್ಟೇಟ್, “ನಮ್ಮ ಸದಸ್ಯನೊಬಬ್ಬ ಸಭೆಯ ಮೇಲೆ ಬಾಂಬ್ ದಾಳಿ ನಡೆಸಿದ್ದು, ಇದರಿಂದ ದೊಡ್ಡ ಪ್ರಮಾಣದ ಸಾವು-ನೋವು ಸಂಭವಿಸಿದೆ” ಎಂದು ಹೇಳಿಕೊಂಡಿದೆ ಎಂದು ಅವರ ಮೇಲೆ ನಿಗಾವಹಿಸಿಯರುವ SITE ಗುಪ್ತಚರ ಗುಂಪು ತಿಳಿಸಿದೆ.







