ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹತ್ಯೆಗೆ ಸಂಚು?

ಡೊನಾಲ್ಡ್ ಟ್ರಂಪ್ | Photo Credit : PTI
ವಾಶಿಂಗ್ಟನ್, ಆ.5: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕ್ಯಾಲಿಫೋರ್ನಿಯಾದ ಗಾಲ್ಫ್ ಕೋರ್ಸ್ನಲ್ಲಿ ರಿಪಬ್ಲಿಕನ್ ನ್ಯಾಷನಲ್ ಕಮಿಟಿಯ ನಿಧಿ ಸಂಗ್ರಹಣಾ ಕಾರ್ಯಕ್ರಮ ನಡೆಯುವ ಕೆಲವೇ ದಿನಗಳ ಮೊದಲು, ಭದ್ರತಾ ವ್ಯವಸ್ಥೆಗಳ ಫೋಟೋಗಳನ್ನು ತೆಗೆಯುತ್ತಿದ್ದ 38 ವರ್ಷದ ಸಶಸ್ತ್ರ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಆತನ ಬಳಿ ಲೋಡ್ ಮಾಡಿದ ಪಿಸ್ತೂಲ್ ಮತ್ತು ಗುಂಡುಗಳು ಪತ್ತೆಯಾಗಿವೆ. ಆತನ ಮನೆಯಲ್ಲಿ ನಡೆಸಿದ ಶೋಧದ ವೇಳೆ ಶಸ್ತ್ರಾಸ್ತ್ರಗಳು, ದೇಹ ರಕ್ಷಾ ಕವಚ ಹಾಗೂ ಕೆಲವು ಆತಂಕಕಾರಿ ಹೇಳಿಕೆಗಳನ್ನು ಹೊಂದಿರುವ ನೋಟ್ಬುಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟ್ರಂಪ್ ನ್ಯಾಷನಲ್ ಗಾಲ್ಫ್ ಕೋರ್ಸ್ನಲ್ಲಿ ಡೊನಾಲ್ಡ್ ಟ್ರಂಪ್ ಅವರು ರಿಪಬ್ಲಿಕನ್ ನ್ಯಾಷನಲ್ ಕಮಿಟಿಯ ನಿಧಿ ಸಂಗ್ರಹಣಾ ಭೋಜನಕೂಟದಲ್ಲಿ ಭಾಗವಹಿಸುವುದಕ್ಕೆ ಎರಡು ದಿನಗಳ ಮೊದಲು 38 ವರ್ಷದ ಜೀನಿನ್ ಜಾನ್ ಟೇಲೆ ಎಂಬಾತನನ್ನು ಬಂಧಿಸಲಾಯಿತು. ಈತ ಗಾಲ್ಫ್ ಕೋರ್ಸ್ ಸುತ್ತಲಿನ ಭದ್ರತಾ ಸಿದ್ಧತೆಗಳ ಫೋಟೋ ಮತ್ತು ವೀಡಿಯೊಗಳನ್ನು ಚಿತ್ರೀಕರಿಸುತ್ತಿದ್ದಾಗ ಭದ್ರತಾ ಸಿಬ್ಬಂದಿ ಆತನನ್ನು ತಡೆದು ಬಂಧಿಸಿದರು ಎಂದು ವರದಿಯಾಗಿದೆ. 2025ರಲ್ಲಿ ಫ್ಲೋರಿಡಾ ಗಾಲ್ಫ್ ಕ್ಲಬ್ನಲ್ಲಿ ಅಮೆರಿಕ ಅಧ್ಯಕ್ಷರ ಹತ್ಯಾ ಪ್ರಯತ್ನದ ನಂತರ, ಟ್ರಂಪ್ ಸುತ್ತಲಿನ ಭದ್ರತೆಯನ್ನು ಹೆಚ್ಚಿಸಿರುವ ನಡುವೆಯೇ ಈ ಘಟನೆ ನಡೆದಿದೆ.






