ಪಶ್ಚಿಮ ಏಶ್ಯಾ ಸಂಘರ್ಷ| ಪಾಕಿಸ್ತಾನದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಮಾತುಕತೆ ನಡೆಯುವ ಸಾಧ್ಯತೆ: ವರದಿ

Photo credit: PTI
ಹೊಸದಿಲ್ಲಿ: ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಸಂಘರ್ಷವನ್ನು ನಿಲ್ಲಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ರಾಜತಾಂತ್ರಿಕ ಪ್ರಯತ್ನಗಳಲ್ಲಿ ಪಾಕಿಸ್ತಾನವು ಪ್ರಮುಖ ಪಾತ್ರವನ್ನು ವಹಿಸುತ್ತಿದೆ ಎಂದು Reuters ಸುದ್ದಿಸಂಸ್ಥೆಯು ವರದಿ ಮಾಡಿದೆ.
ಇರಾನ್ ಜೊತೆ ಮಾತುಕತೆಗಳು ಯಶಸ್ವಿಯಾಗಿ ನಡೆಯುತ್ತಿವೆ ಎಂದು ಬಣ್ಣಿಸಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಇರಾನಿನ ಇಂಧನ ಮೂಲಸೌಕರ್ಯಗಳ ಮೇಲೆ ದಾಳಿಗಳನ್ನು ಐದು ದಿನಗಳ ಕಾಲ ಸ್ಥಗಿತಗೊಳಿಸಲಾಗಿದೆ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಈ ವರದಿ ಬಂದಿದೆ.
ಅಮೆರಿಕ ಮತ್ತು ಇರಾನ್ ನಡುವೆ ಮಾತುಕತೆಗೆ ಪೂರಕ ವಾತಾವರಣವನ್ನು ಸೃಷ್ಟಿಸಲು ಪಾಕಿಸ್ತಾನ, ತುರ್ಕಿಯೆ ಮತ್ತು ಈಜಿಪ್ಟ್ ಪ್ರಯತ್ನಿಸುತ್ತಿವೆ ಎಂದು ರಾಯ್ಟರ್ಸ್ ಮತ್ತು ಆಕ್ಸಿಯೋಸ್ ವರದಿಗಾರರು ಹೇಳಿದ್ದಾರೆ.
ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಅಮೆರಿಕ ಮತ್ತು ಇರಾನಿನ ಉನ್ನತ ಮಟ್ಟದ ಪ್ರತಿನಿಧಿಗಳನ್ನೊಳಗೊಂಡ ಮಾತುಕತೆಗಳನ್ನು ಏರ್ಪಡಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಹಿರಿಯ ಇಸ್ರೇಲಿ ಅಧಿಕಾರಿಯೊರ್ವರು Reutersಗೆ ತಿಳಿಸಿದ್ದಾರೆ.
ವಿಷಯವನ್ನು ಬಲ್ಲ ಅಧಿಕಾರಿಗಳ ಪ್ರಕಾರ,ಇರಾನ್ ಸಂಸತ್ತಿನ ಸ್ಪೀಕರ್ ಮುಹಮ್ಮದ್ ಬಘರ್ ಘಾಲಿಬಾಫ್ ಅವರ ಹೆಸರು ಮುನ್ನೆಲೆಗೆ ಬರುತ್ತಿದ್ದು, ಅವರು ಪ್ರಸ್ತಾವಿತ ಮಾತುಕತೆಗಳಲ್ಲಿ ತನ್ನ ದೇಶವನ್ನು ಪ್ರತಿನಿಧಿಸಬಹುದು.
ಘಾಲಿಬಾಪ್ ಅವರೊಂದಿಗೆ ಶ್ವೇತಭವನದ ವಿಶೇಷ ರಾಯಭಾರಿಗಳಾದ ಸ್ಟೀವ್ ವಿಟ್ಕಾಫ್ ಮತ್ತು ಜೇರೆಡ್ ಕುಶ್ನರ್ ಜೊತೆಗೆ ಉಪಾಧ್ಯಕ್ಷ ಜೆ.ಡಿ.ವಾನ್ಸ್ ಅವರು ಇರಾನ್ ಅಧಿಕಾರಿಗಳೊಂದಿಗಿನ ಪ್ರಸ್ತಾವಿತ ಶಾಂತ ಶೃಂಗಸಭೆಯನ್ನು ಭಾಗವಹಿಸಬಹುದು ಎಂದು ವರದಿಗಳು ತಿಳಿಸಿವೆ.
ಈ ನಡುವೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಅವರು ರವಿವಾರ ಟ್ರಂಪ್ ಅವರೊಂದಿಗೆ ಮಾತನಾಡಿದ್ದರೆ ಎನ್ನಲಾಗಿದ್ದು, ಇದು ಮಾತುಕತೆಗಳಲ್ಲಿ ಮಧ್ಯಸ್ಥಿಕೆ ವಹಿಸಲು ಪಾಕ್ ಪ್ರಯತ್ನಗಳ ಭಾಗವಾಗಿದೆ ಎಂದು ಪರಿಗಣಿಸಲಾಗಿದೆ.
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರೂ ಇರಾನ್ ಅಧ್ಯಕ್ಷ ಮಸೂದ್ ಫೆಜೆಶ್ಕಿಯಾನ್ ಜೊತೆ ಚರ್ಚಿಸಿದ್ದು, ಪ್ರದೇಶದಲ್ಲಿ ಶಾಂತಿಸ್ಥಾಪನೆಗೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.
ಸ್ವಯಂಘೋಷಿತ ವಿಶ್ವಗುರುವಿಗೆ ಮುಖಭಂಗ: ಕಾಂಗ್ರೆಸ್ ಟೀಕೆ
ಪಾಕಿಸ್ತಾನವು ಅಮೆರಿಕ-ಇರಾನ್ ನಡುವೆ ಮಧ್ಯವರ್ತಿಗಳಲ್ಲಿ ಒಂದಾಗಿದೆ ಎಂಬ ವರದಿಗಳು ನಿಜವೇ ಆಗಿದ್ದರೆ ಇದು ಭಾರತಕ್ಕೆ ತೀವ್ರ ಹಿನ್ನಡೆ ಮತ್ತು ಮುಖಭಂಗವಾಗುತ್ತದೆ ಎಂದು ಕಾಂಗ್ರೆಸ್ ಮಂಗಳವಾರ ಟೀಕಿಸಿದೆ.
‘ಆಪರೇಷನ್ ಸಿಂಧೂರ’ದಲ್ಲಿ ಭಾರತದ ಶಂಕಾತೀತ ಮಿಲಿಟರಿ ಯಶಸ್ಸಿನ ಹೊರತಾಗಿಯೂ ಅದರ ನಂತರ ಪಾಕಿಸ್ತಾನದ ರಾಜತಾಂತ್ರಿಕತೆ ಮತ್ತು ನಿರೂಪಣಾ ನಿರ್ವಹಣೆಯು ಮೋದಿ ಸರಕಾರಕ್ಕಿಂತ ಗಮನಾರ್ಹವಾಗಿ ಉತ್ತಮವಾಗಿದೆ ಎನ್ನುವುದು ವಿಷಾದಕರ ವಾಸ್ತವವಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಮಂಗಳವಾರ ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದಾರೆ.
Multiple reports in leading international media outlets have identified Pakistan as one of the intermediaries being used between the US and Israel on the one side and Iran on the other.
— Jairam Ramesh (@Jairam_Ramesh) March 24, 2026
If these reports are true, they represent a severe setback and rebuff to India - and it is…
ಪ್ರಮುಖ ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿಯ ವರದಿಗಳು ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವೆ ಮಾತುಕತೆಗಳಲ್ಲಿ ಮಧ್ಯವರ್ತಿಗಳಲ್ಲೊಂದು ಎಂದು ಪಾಕಿಸ್ತಾನವನ್ನುಗುರುತಿಸಿವೆ. ಇದು ನಿಜವೇ ಆಗಿದ್ದರೆ ಭಾರತಕ್ಕೆ ತೀವ್ರ ಹಿನ್ನಡೆ ಮತ್ತು ಮುಖಭಂಗವಾಗುತ್ತದೆ ಮತ್ತು ಇದನ್ನು ಸ್ವಯಂಘೋಷಿತ ವಿಶ್ವಗುರು ಅವರೇ ಹೊರಬೇಕು ಎಂದು ರಮೇಶ್ ಹೇಳಿದ್ದಾರೆ.
ರಾಜಕೀಯವಾಗಿ,ಸಾಮಾಜಿಕವಾಗಿ,ಆರ್ಥಿಕವಾಗಿ ಮತ್ತು ಜಾಗತಿಕವಾಗಿ ದಯನೀಯ ಸ್ಥಿತಿಯಲ್ಲಿದ್ದ ಪಾಕಿಸ್ತಾನಕ್ಕೆ ಈಗ ಹೊಸ ಜೀವ ಬಂದಿದೆ ಎಂದೂ ಅವರು ಹೇಳಿದ್ದಾರೆ.






