ಇಸ್ರೇಲ್ ವಿರುದ್ಧ ದೃಢವಾದ ಕಾನೂನು, ರಾಜತಾಂತ್ರಿಕ ಕ್ರಮಗಳನ್ನು ರೂಪಿಸಲು 9 ದೇಶಗಳ ಗುಂಪು ಸಜ್ಜು: ವರದಿ

ಸಾಂದರ್ಭಿಕ ಚಿತ್ರ | PC : NDTV
ಹೊಸದಿಲ್ಲಿ: ಇಸ್ರೇಲ್ನಿಂದ ಆಕ್ರಮಿತ ಫೆಲೆಸ್ತೀನಿಯನ್ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಅಂತರರಾಷ್ಟ್ರೀಯ ಕಾನೂನು ಉಲ್ಲಂಘನೆಗಳನ್ನು ತಡೆಯಲು ಅದರ ವಿರುದ್ಧ ಕಾನೂನು ಮತ್ತು ರಾಜತಾಂತ್ರಿಕ ಕ್ರಮಗಳನ್ನು ರೂಪಿಸಲು ಕೊಲಂಬಿಯಾ ಹಾಗೂ ದಕ್ಷಿಣ ಆಫ್ರಿಕಾ ನೇತೃತ್ವದ 9 ದೇಶಗಳ ಪ್ರತಿನಿಧಿಗಳು ಮುಂದಿನ ತಿಂಗಳು ಸಭೆ ಸೇರಲಿದ್ದಾರೆ ಎಂದು thewire.in ವರದಿ ಮಾಡಿದೆ.
ಹೇಗ್ ಗ್ರೂಪ್ ಎಂದು ಕರೆಯಲ್ಪಡುತ್ತಿರುವ ಮತ್ತು ಬೇಲಿಜ್, ಬೊಲಿವಿಯಾ, ಕೊಲಂಬಿಯಾ, ಕ್ಯೂಬಾ, ಹೊಂಡುರಾಸ್, ಮಲೇಷ್ಯಾ, ನಮೀಬಿಯಾ, ಸೆನೆಗಲ್ ಮತ್ತು ದಕ್ಷಿಣ ಆಫ್ರಿಕಾಗಳನ್ನು ಒಳಗೊಂಡಿರುವ ಈ ಒಕ್ಕೂಟವು ಜು.15 ಮತ್ತು 16ರಂದು ಕೊಲಂಬಿಯಾದ ರಾಜಧಾನಿ ಬೊಗೋಟಾದಲ್ಲಿ ತುರ್ತು ಸಚಿವ ಮಟ್ಟದ ಸಭೆಯನ್ನು ನಡೆಸಲಿದೆ. ಈ ಸ್ಥಾಪಕ ಗುಂಪಿನ ಹೊರಗಿನ ಸದಸ್ಯರನ್ನೂ ಅದು ಸಭೆಗೆ ಆಹ್ವಾನಿಸಲಿದೆ.
ನರಮೇಧ ಅಪರಾಧ ಸೇರಿದಂತೆ ಇಸ್ರೇಲ್ನಿಂದ ಆಕ್ರಮಿತ ಫೆಲೆಸ್ತೀನಿಯನ್ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಅಂತರರಾಷ್ಟ್ರೀಯ ಕಾನೂನು ಉಲ್ಲಂಘನೆಗಳ ಹಿನ್ನೆಲೆಯಲ್ಲಿ ಈ ಸಭೆಯನ್ನು ಆಯೋಜಿಸಲಾಗಿದೆ ಎಂದು ಹೇಗ್ ಗ್ರೂಪ್ ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ.
ಉಲ್ಲಂಘನೆಗಳನ್ನು ಅಂತ್ಯಗೊಳಿಸಲು ಸಭೆಯು ಸಂಘಟಿತ ಕಾನೂನು ಮತ್ತು ರಾಜತಾಂತ್ರಿಕ ಕ್ರಮಗಳ ಬಗ್ಗೆ ಚರ್ಚಿಸಲಿದೆ ಮತ್ತು ಈ ದೇಶಗಳು ಅಂತರರಾಷ್ಟ್ರೀಯ ಕಾನೂನನ್ನು ಜಾರಿಗೊಳಿಸಲು, ನರಮೇಧವನ್ನು ಕೊನೆಗೊಳಿಸಲು ಹಾಗೂ ನ್ಯಾಯ ಮತ್ತು ಉತ್ತರದಾಯಿತ್ವವನ್ನು ಖಚಿತಪಡಿಸಲು ದೃಢವಾದ ಕ್ರಮಗಳನ್ನು ಪ್ರಕಟಿಸಲಿವೆ ಎಂದೂ ಹೇಳಿಕೆಯು ತಿಳಿಸಿದೆ.
ಈ ವರ್ಷದ ಜನವರಿಯಲ್ಲಿ ರಚನೆಯಾದ ಗುಂಪು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅವರ ಹಿಂದಿನ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ವಿರುದ್ಧ ಹೇಗ್ನ ಅಂತರರಾಷ್ಟ್ರೀಯ ನ್ಯಾಯಾಲಯ(ಐಸಿಜೆ)ವು ಹೊರಡಿಸಿರುವ ಬಂಧನ ವಾರಂಟ್ಗಳನ್ನು ಎತ್ತಿಹಿಡಿಯುವ ತನ್ನ ಉದ್ದೇಶವನ್ನು ಘೋಷಿಸಿತ್ತು. ಜೊತೆಗೆ ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಲು ಬಳಕೆಯಾಗುವ ‘ಸ್ಪಷ್ಟ ಅಪಾಯ’ವಿದ್ದರೆ ಇಸ್ರೇಲ್ಗೆ ಶಸ್ತ್ರಾಸ್ತ್ರಗಳು,ಮದ್ದುಗುಂಡುಗಳು ಮತ್ತು ಮಿಲಿಟರಿ ಇಂಧನ ಪೂರೈಕೆಯನ್ನು ತಡೆಯಲೂ ಉದ್ದೇಶಿಸಿತ್ತು.
ಆಕ್ರಮಿತ ಫೆಲೆಸ್ತೀನಿಯನ್ ಪ್ರದೇಶದಲ್ಲಿ ಇಸ್ರೇಲ್ ಸೃಷ್ಟಿಸಿರುವ ಕಾನೂನುಬಾಹಿರ ಸ್ಥಿತಿಯನ್ನು ಕಾಯ್ದುಕೊಳ್ಳಲು ನೆರವಾಗುವ ಅದರೊಂದಿಗಿನ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಐಸಿಜೆ ಜುಲೈ 2024ರಲ್ಲಿ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಿತ್ತು.
ಇಸ್ರೇಲ್ನಿಂದ ಫೆಲೆಸ್ತೀನಿ ಪ್ರದೇಶಗಳ ಆಕ್ರಮಣ ಕಾನೂನುಬಾಹಿರ ಎಂದೂ ಐಸಿಜೆ ತೀರ್ಪು ನೀಡಿತ್ತು.
ಪ್ರಸ್ತುತ ಹೇಗ್ ಗ್ರೂಪ್ನ ಸಹ-ಅಧ್ಯಕ್ಷತೆಯನ್ನು ಹೊಂದಿರುವ ದ.ಆಫ್ರಿಕಾ ಇಸ್ರೇಲ್ ಗಾಝಾದಲ್ಲಿ ನರಮೇಧವನ್ನು ನಡೆಸಿದೆ ಎಂದು ಆರೋಪಿಸಿ ಐಸಿಜೆಯಲ್ಲಿ ಪ್ರಕರಣವನ್ನು ದಾಖಲಿಸಿತ್ತು. ಈ ಪ್ರಕರಣವು ಅಂತ್ಯಗೊಳ್ಳಲು ವರ್ಷಗಳೇ ಬೇಕಾಗಬಹುದು ಎಂದು ನಿರೀಕ್ಷಿಸಲಾಗಿದೆ.