ಇಸ್ರೇಲ್ ನೆರವಿಗೆ ಬಂದರೆ ಪ್ರಾದೇಶಿಕ ಸೇನಾ ನೆಲೆಗಳ ಮೇಲೆ ದಾಳಿ: ಅಮೆರಿಕ, ಬ್ರಿಟನ್, ಫ್ರಾನ್ಸ್ ಗೆ ಇರಾನ್ ಎಚ್ಚರಿಕೆ

PC : NDTV
ಟೆಹರಾನ್: ಇಸ್ರೇಲ್ ವಿರುದ್ಧ ತಾನು ನಡೆಸುತ್ತಿರುವ ಪ್ರತೀಕಾರ ದಾಳಿಯನ್ನು ನಿಲ್ಲಿಸಲು ಅದರ ಪಾಶ್ಚಾತ್ಯ ಮಿತ್ರ ರಾಷ್ಟ್ರಗಳಾದ ಅಮೆರಿಕ,ಬ್ರಿಟನ್ ಹಾಗೂ ಫ್ರಾನ್ಸ್ ನೆರವಿಗೆ ಬಂದಲ್ಲಿ, ಅವುಗಳ ಪ್ರಾದೇಶಿಕ ಸೇನಾ ನೆಲೆಗಳ ಮೇಲೂ ದಾಳಿ ನಡೆಸುವುದಾಗಿ ಇರಾನ್ ಎಚ್ಚರಿಕೆ ನೀಡಿದೆ. ಪರ್ಶಿಯನ್ ಕೊಲ್ಲಿಯ ರಾಷ್ಟ್ರಗಳು ಹಾಗೂ ಕೆಂಪು ಸಮುದ್ರದಲ್ಲಿರುವ ಈ ದೇಶಗಳ ಸೇನಾನೆಲೆಗಳು, ಹಡಗುಗಳು ಹಾಗೂ ನೌಕೆಗಳು ಕೂಡಾ ದಾಳಿಗೆ ಗುರಿಯಾಗಲಿವೆ ಎಂದು ಇರಾನ್ ನ ಅರೆಸರಕಾರಿ ಸುದ್ದಿಸಂಸ್ಥೆ ಮೆಹರ್ ವರದಿ ಮಾಡಿದೆ.
ಇಸ್ರೇಲ್ ಶುಕ್ರವಾರ ಟೆಹರಾನ್ ನ ಅಣುಸ್ಥಾವರಗಳು ಹಾಗೂ ಮಿಲಿಟರಿ ನೆಲೆಗಳನ್ನು ಗುರಿಯಾಗಿರಿಸಿ ನಡೆಸಿದ ದಾಳಿಯಲ್ಲಿ ಸೇನಾ ವರಿಷ್ಠರುಗಳು ಸೇರಿದಂತೆ 78 ಮಂದಿ ಸಾವನ್ನಪ್ಪಿದ್ದರು. ಮೃತರಲ್ಲಿ ಸುಮಾರು 20 ಮಕ್ಕಳೆಂದು ತಿಳಿದುಬಂದಿದೆ.
ಇಸ್ರೇಲ್ ಶುಕ್ರವಾರ ನಡೆಸಿದ ವಾಯುದಾಳಿಯಲ್ಲಿ ಇರಾನ್ ನ ಸಶಸ್ತ್ರ ಪಡೆಗಳ ವರಿಷ್ಠ ಮೊಹಮ್ಮದ್ ಬಾಘೇರಿ, ಇರಾನಿಯನ್ ರೆವೆಲ್ಯೂಶನರಿ ಗಾರ್ಡ್ಸ್ (ಐಆರ್ಜಿಸಿ) ವರಿಷ್ಠ ಹುಸೈನ್ ಸಲಾಮಿ ಸೇರಿದಂತೆ ಹಲವು ಉನ್ನತ ಸೇನಾಧಿಕಾರಿಗಳು ಹಾಗೂ ಪರಮಾಣು ವಿಜ್ಞಾನಿಗಳು ಸಾವನ್ನಪ್ಪಿದ್ದಾರೆ.







