ಇಸ್ರೇಲ್ ಮೇಲೆ ಕ್ಷಿಪಣಿಗಳ ಮಳೆಗರೆದ ಇರಾನ್ | ಕನಿಷ್ಠ 8 ಮಂದಿ ಮೃತ್ಯು; 30 ಮಂದಿಗೆ ಗಾಯ
ಟೆಲ್ಅವೀವ್, ಹೈಫಾ ನಗರಗಳಲ್ಲಿ ವ್ಯಾಪಕ ಹಾನಿ

PC : aljazeera.com
ಟೆಹ್ರಾನ್: ಸೋಮವಾರ ಬೆಳಿಗ್ಗೆ ಇಸ್ರೇಲ್ ನ ಟೆಲ್ಅವೀವ್ ಮತ್ತು ಬಂದರು ನಗರ ಹೈಫಾದ ಮೇಲೆ ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ಮುಂದುವರಿಸಿದ್ದು ಕನಿಷ್ಠ 8 ಮಂದಿ ಸಾವನ್ನಪ್ಪಿದ್ದಾರೆ. ಹಲವು ಮನೆಗಳು ಧ್ವಂಸಗೊಂಡಿದ್ದು ವ್ಯಾಪಕ ಹಾನಿ ಸಂಭವಿಸಿರುವುದಾಗಿ ವರದಿಯಾಗಿದೆ.
ಈ ದಾಳಿಗೆ ಇರಾನ್ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಇಸ್ರೇಲ್ ನ ರಕ್ಷಣಾ ಸಚಿವರು ಎಚ್ಚರಿಕೆ ನೀಡಿದ್ದಾರೆ. ಹೈಫಾ ನಗರದಲ್ಲಿ ಸುಮಾರು 30 ಮಂದಿ ಗಾಯಗೊಂಡಿದ್ದು ತುರ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಬಂದರಿನ ಬಳಿಯ ವಿದ್ಯುತ್ ಸ್ಥಾವರ ಬೆಂಕಿಯಿಂದ ಹೊತ್ತಿ ಉರಿಯುತ್ತಿರುವುದಾಗಿ ತುರ್ತು ಸೇವಾ ಸಂಸ್ಥೆಯ ಮೂಲಗಳು ಹೇಳಿವೆ. ಟೆಲ್ಅವೀವ್ ಮತ್ತು ಜೆರುಸಲೇಂ ನಗರದ ಮೇಲೆ ಹಲವು ಕ್ಷಿಪಣಿಗಳು ದಾಳಿ ನಡೆಸುವ ಮತ್ತು ಬಳಿಕ ಭಾರೀ ಸ್ಫೋಟ ಸಂಭವಿಸಿರುವ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಟೆಲ್ಅವೀವ್ ನ ಜನನಿಬಿಡ ನೆರೆಹೊರೆಯಲ್ಲಿನ ಹಲವು ಜನವಸತಿ ಕಟ್ಟಡಗಳು ದಾಳಿಯಿಂದ ಹಾನಿಗೊಂಡಿವೆ. ಸೋಮವಾರ ಬೆಳಗ್ಗೆ ಟೆಲ್ಅವೀವ್ ನ ಜನಪ್ರಿಯ ಮಾರ್ಕೆಟ್ ಶುಕ್ ಹಕರ್ಮೆಲ್ ನ ಬಳಿಗೆ ಕ್ಷಿಪಣಿಯೊಂದು ಅಪ್ಪಳಿಸಿದೆ. ಹೊಸ ವಿಧಾನ ಬಳಸಿ ದಾಳಿ ನಡೆಸಿರುವುದರಿಂದ ಇಸ್ರೇಲ್ ನ ಬಹುಹಂತದ ರಕ್ಷಣಾ ವ್ಯವಸ್ಥೆಯನ್ನು ಬೇಧಿಸಿ ಒಳನುಗ್ಗಲು ಸಾಧ್ಯವಾಗಿದೆ ಎಂದು ಇರಾನ್ ನ ರೆವೊಲ್ಯುಷನರಿ ಗಾರ್ಡ್ಸ್ ಹೇಳಿದೆ. ಶುಕ್ರವಾರದಿಂದ ಇಸ್ರೇಲ್ ನಲ್ಲಿ ಕನಿಷ್ಠ 24 ಮಂದಿ ಮತ್ತು ಇರಾನ್ ನಲ್ಲಿ ಕನಿಷ್ಠ 224 ಮಂದಿ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಇಸ್ರೇಲ್ ನ 8 ಡ್ರೋನ್ಗಳನ್ನು ಹೊಡೆದುರುಳಿಸಲಾಗಿದೆ. ಇರಾನ್ ನ ಪಶ್ಚಿಮ ಪ್ರಾಂತ ಕೆರ್ಮಾಂಶಾದ ಫರಾಬಿ ಆಸ್ಪತ್ರೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಸ್ರೇಲ್ ನ ಕ್ಷಿಪಣಿ ದಾಳಿಯಿಂದ ವ್ಯಾಪಕ ನಾಶ-ನಷ್ಟ ಸಂಭವಿಸಿರುವುದಾಗಿ ಇರಾನ್ ನ ಸರ್ಕಾರಿ ಸ್ವಾಮ್ಯದ ಮಾಧ್ಯಮ ವರದಿ ಮಾಡಿದೆ.
► ಇಸ್ರೇಲ್ ನಲ್ಲಿನ ಅಮೆರಿಕ ರಾಯಭಾರಿ ಕಚೇರಿಯ ಕಟ್ಟಡಕ್ಕೆ ಹಾನಿ
ರವಿವಾರ ತಡರಾತ್ರಿ ಹಾಗೂ ಸೋಮವಾರ ಬೆಳಿಗ್ಗೆ ಇಸ್ರೇಲ್ ಮೇಲೆ ಇರಾನ್ ನಡೆಸಿರುವ ಸರಣಿ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯಿಂದ ಟೆಲ್ಅವೀವ್ ನಲ್ಲಿನ ಅಮೆರಿಕ ರಾಯಭಾರಿ ಕಚೇರಿಯ ಕಟ್ಟಡಕ್ಕೆ ಹಾನಿಯಾಗಿರುವುದಾಗಿ ವರದಿಯಾಗಿದೆ.
ಇರಾನ್ ನ ಕ್ಷಿಪಣಿ ಸಮೀಪದಲ್ಲೇ ಅಪ್ಪಳಿಸಿದ್ದರಿಂದ ಟೆಲ್ ಅವೀವ್ ನಲ್ಲಿನ ರಾಯಭಾರಿ ಕಚೇರಿಗೆ ಅಲ್ಪಪ್ರಮಾಣದ ಹಾನಿ ಸಂಭವಿಸಿದೆ. ಯಾವುದೇ ಅಮೆರಿಕನ್ ಸಿಬ್ಬಂದಿ ಗಾಯಗೊಂಡಿಲ್ಲ. ಕಚೇರಿಯ ಕಿಟಕಿ ಬಾಗಿಲುಗಳು ಹಾನಿಗೊಂಡಿವೆ ಎಂದು ಇಸ್ರೇಲ್ ಗೆ ಅಮೆರಿಕದ ರಾಯಭಾರಿ ಮೈಕ್ ಹುಕಾಬೀ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.







