ಇಸ್ರೇಲ್ನ ವಾಯು ರಕ್ಷಣೆ ದುರ್ಬಲಗೊಳ್ಳುತ್ತಿದೆ, ಕ್ಷಿಪಣಿಗಳು ಕೇವಲ 10-12 ದಿನಕ್ಕೆ ಬಾಳಿಕೆ ಬರುತ್ತವೆ: ವರದಿ

PC : X \ @AdameMedia
ಹೊಸದಿಲ್ಲಿ,: ಇರಾನಿನ ಮಿಲಿಟರಿ ಮೂಲಸೌಕರ್ಯದ ವಿರುದ್ಧ ಪ್ರಮುಖ ಯಶಸ್ಸನ್ನು ಸಾಧಿಸಿರುವುದಾಗಿ ಇಸ್ರೇಲ್ ಹೇಳಿಕೊಳ್ಳುತ್ತಿದ್ದರೂ ಅದರ ಬಳಿಯಿರುವ ದೀರ್ಘವ್ಯಾಪ್ತಿಯ ಪ್ರತಿಬಂಧಕ ಕ್ಷಿಪಣಿಗಳ ಸಂಖ್ಯೆ ತ್ವರಿತವಾಗಿ ಕುಸಿಯುತ್ತಿದ್ದು,ಅದರ ರಕ್ಷಣಾ ವ್ಯವಸ್ಥೆಗಳ ಸುಸ್ಥಿರತೆಯ ಬಗ್ಗೆ ಆತಂಕವನ್ನು ಹೆಚ್ಚಿಸುತ್ತಿದೆ ಎಂದು ಮಿತ್ರರಾಷ್ಟ್ರಗಳ ಗುಪ್ತಚರ ಮಾಹಿತಿಗಳನ್ನು ಬಲ್ಲ ಅಮೆರಿಕದ ಅಧಿಕಾರಿಯೋರ್ವರನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.
ಇಸ್ರೇಲ್ ಮತ್ತು ಇರಾನ್ ನಡುವೆ ನಿರಂತರ ಕ್ಷಿಪಣಿ ಸಮರದ ನಡುವೆ ಈ ವರದಿ ಹೊರಬಿದ್ದಿದೆ. ಇಸ್ರೇಲ್ ಕಳೆದ ಶುಕ್ರವಾರ ತನ್ನ ಆಪರೇಷನ್ ರೈಸಿಂಗ್ ಲಯನ್ ಆರಂಭಿಸಿದಾಗಿನಿಂದ ಇರಾನ್ ಪಡೆಗಳು ಸುಮಾರು 400 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದ್ದು, ಇದು ಇಸ್ರೇಲ್ ಪ್ರದೇಶವನ್ನು ಅಪ್ಪಳಿಸುವ ಸಾಮರ್ಥ್ಯವನ್ನು ಹೊಂದಿರುವ ಅದರ 2,000 ಕ್ಷಿಪಣಿಗಳ ಒಂದು ಭಾಗವಾಗಿದೆ. ಇಸ್ರೇಲ್ನ ರಕ್ಷಣಾ ವ್ಯವಸ್ಥೆಗಳು,ವಿಶೇಷವಾಗಿ ಅತಿ ಎತ್ತರದಲ್ಲಿ ಹಾರುವ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪ್ರತಿಬಂಧಿಸಲು ವಿನ್ಯಾಸಗೊಳಿಸಿರುವ ಆ್ಯರೋ ಸಿಸ್ಟಮ್ ಒಳಬರುತ್ತಿದ್ದ ಹಲವಾರು ಕ್ಷಿಪಣಿಗಳನ್ನು ಪ್ರತಿಬಂಧಿಸುವಲ್ಲಿ ಯಶಸ್ವಿಯಾಗಿದೆ,ಆದರ ಇದಕ್ಕಾಗಿ ಗಮನಾರ್ಹ ಒತ್ತಡವನ್ನೂ ಎದುರಿಸಿದೆ.
ಇರಾನಿನ ಮೂರನೇ ಒಂದು ಭಾಗದಷ್ಟು ಕ್ಷಿಪಣಿ ಉಡಾವಕಗಳನ್ನು ನಾಶಗೊಳಿಸಲಾಗಿದೆ ಮತ್ತು ಇರಾನಿನ ಆಗಸದಲ್ಲಿ ವಾಯು ಪ್ರಾಬಲ್ಯವನ್ನು ಸಾಧಿಸಲಾಗಿದೆ ಎಂದು ಟೆಲ್ ಅವಿವ್ನಲ್ಲಿಯ ಅಧಿಕಾರಿಗಳು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಇರಾನಿನ ಅರ್ಧಕ್ಕೂ ಹೆಚ್ಚಿನ ಕ್ಷಿಪಣಿ ದಾಸ್ತಾನು ಸುರಕ್ಷಿತವಾಗಿ ಉಳಿದಿದೆ ಮತ್ತು ಅದರ ಒಂದು ಭಾಗವನ್ನು ಭೂಗತ ಕೇಂದ್ರಗಳಲ್ಲಿ ಬಚ್ಚಿಟ್ಟಿರುವ ಸಾಧ್ಯತೆಯಿದೆ ಎಂದು ಗುಪ್ತಚರ ಮೂಲಗಳು ಎಚ್ಚರಿಕೆ ನೀಡಿವೆ.
ಐರನ್ ಡೋಮ್, ಡೇವಿಡ್ಸ್ ಸ್ಲಿಂಗ್,ಆ್ಯರೊ ಸಿಸ್ಟಮ್ ಮತ್ತು ಅಮೆರಿಕ ಪೂರೈಸಿದ ಪ್ಯಾಟ್ರಿಯಟ್ಸ್ ಮತ್ತು ಥಾಡ್ ಬ್ಯಾಟರಿಗಳನ್ನೊಳಗೊಂಡಿರುವ ಇಸ್ರೇಲ್ನ ಬಹುಪದರ ಕ್ಷಿಪಣಿ ರಕ್ಷಣೆ ವ್ಯವಸ್ಥೆಯನ್ನು ನಿರ್ವಹಿಸುವ ವೆಚ್ಚವು ಪ್ರಮುಖ ಕಳವಳವಾಗಿದೆ. ರಾತ್ರಿ ವೇಳೆಯ ಕ್ಷಿಪಣಿ ರಕ್ಷಣಾ ಕಾರ್ಯಾರಣೆಗಳಿಗೆ ಒಂದು ಶತಕೋಟಿ ಶಕೆಲ್(285 ಮಿಲಿಯನ್ ಡಾ.)ವರೆಗೆ ವೆಚ್ಚವಾಗುತ್ತಿದೆ ಎಂದು ಇಸ್ರೇಲಿ ವಾಣಿಜ್ಯ ದಿನಪತ್ರಿಕೆ ‘ದಿ ಮಾರ್ಕರ್ ’ ಅಂದಾಜಿಸಿದೆ. ಆ್ಯರೋ ಸಿಸ್ಟಮ್ ಒಂದೇ ತಲಾ ಮೂರು ಮಿ.ಡಾ.ಬೆಲೆಯ ಕ್ಷಿಪಣಿ ಪ್ರತಿಬಂಧಕಗಳನ್ನು ಹಾರಿಸುತ್ತದೆ.
ಇರಾನಿನ ಕ್ಷಿಪಣಿ ದಾಳಿಗಳು ಪ್ರತಿ ದಿನವೂ ಮುಂದುವರಿದಿರುವುದರಿಂದ ಇಸ್ರೇಲಿ ವಾಯು ರಕ್ಷಣಾ ದಾಸ್ತಾನುಗಳು ತೀವ್ರ ಒತ್ತಡದಲ್ಲಿವೆ. ಇರಾನ್ ತನ್ನ ದಾಳಿಯ ಸ್ಥಿರ ವೇಗವನ್ನು ಕಾಯ್ದಕೊಂಡರೆ ಅಮೆರಿಕದಿಂದ ತ್ವರಿತ ಮರುಪೂರೈಕೆ ಅಥವಾ ನೇರ ಹಸ್ತಕ್ಷೇಪವಿಲ್ಲದೆ ಇಸ್ರೇಲ್ ತನ್ನ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಇನ್ನೂ ಕೇವಲ 10 ಅಥವಾ 12 ದಿನಗಳವರೆಗೆ ನಿರ್ವಹಿಸಬಹುದು ಗುಪ್ತಚರ ಮಾಹಿತಿಯನ್ನು ಬಲ್ಲ ಮೂಲವೊಂದು ಸುದ್ದಿಸಂಸ್ಥೆಗೆ ತಿಳಿಸಿದೆ. ಇಸ್ರೇಲ್ನ ವಾಯು ರಕ್ಷಣಾ ವ್ಯವಸ್ಥೆಯು ಈಗಾಗಲೇ ತನ್ನ ಸಾಮರ್ಥ್ಯವನ್ನು ಮೀರಿದೆ. ಶೀಘ್ರವೇ ಅದು ಯಾವ ಕ್ಷಿಪಣಿಗಳನ್ನು ಪ್ರತಿಬಂಧಿಸಬೇಕು ಎನ್ನುವುದ್ನು ಆಯ್ಕೆ ಮಾಡಿಕೊಳ್ಳಬೇಕಾಗಬಹುದು ಎಂದು ಮೂಲವು ಹೇಳಿದೆ.
ಇಸ್ರೇಲ್ನ ವಾಯು ರಕ್ಷಣಾ ವ್ಯವಸ್ಥೆಯ ಮೇಲಿನ ಒತ್ತಡವು ಈಗ ಪ್ರಕಟಗೊಳ್ಳತೊಡಗಿದೆ. ಶುಕ್ರವಾರ ರಾತ್ರಿ ಇರಾನಿನ ಕ್ಷಿಪಣಿಗಳು ಇಸ್ರೇಲ್ ನ ರಕ್ಷಣಾ ವ್ಯವಸ್ಥೆಯನ್ನು ತಪ್ಪಿಸಿ ಟೆಲ್ಅವಿವ್ನಲ್ಲಿಯ ಇಸ್ರೇಲಿ ರಕ್ಷಣಾ ಪಡೆಯ ಮುಖ್ಯ ಕಚೇರಿಗೆ ಸಮೀಪ ಅಪ್ಪಳಿಸಿದ್ದವು. ರವಿವಾರ ಕ್ಷಿಪಣಿಯ ನೇರ ಹೊಡೆತದಿಂದಾಗಿ ಹೈಫಾ ಸಮೀಪದ ಪ್ರಮುಖ ತೈಲ ಸಂಸ್ಕರಾಣಾಗಾರವನ್ನು ಸ್ಥಗಿತಗೊಳಿಸಲಾಗಿದೆ.
ಮಂಗಳವಾರ ಬೆಳಿಗ್ಗೆ ಟೆಲ್ಅವಿವ್ನ ಉತ್ತರದಲ್ಲಿರುವ ಇಸ್ರೇಲ್ ಗುಪ್ತಚರ ಕಚೇರಿಯ ಕಂಪೌಂಡ್ ಬಳಿ ಇರಾನಿನ ಕ್ಷಿಪಣಿ ದಾಳಿಗಳ ಹಲವಾರು ಪರಿಣಾಮಗಳನ್ನು ದೃಢೀಕೃತ ಸಾಮಾಜಿಕ ಮಾಧ್ಯಮ ವೀಡಿಯೊಗಳು ಸೆರೆಹಿಡಿದಿವೆ.
ಯುದ್ಧ ಆರಂಭಗೊಂಡಾಗಿನಿದ ಈವರೆಗೆ 24 ಜನರು ಸಾವನ್ನಪ್ಪಿರುವುದನ್ನು ಮತ್ತು 600ಕ್ಕೂ ಅಧಿಕ ಜನರು ಗಾಯಗೊಂಡಿರುವುದನ್ನು ಇಸ್ರೇಲ್ ಸರಕಾರವು ದೃಢಪಡಿಸಿದೆ.
ಇಸ್ರೇಲಿನ ಆಕ್ರಮಣಕಾರಿ ದಾಳಿಗಳು ಮಿಲಿಟರಿ ನೆಲೆಗಳು, ತೈಲ ಮೂಲಸೌಕರ್ಯ ಮತ್ತು ಪರಮಾಣು ಸಂಬಂಧಿತ ತಾಣಗಳು ಸೇರಿದಂತೆ ಇರಾನಿನ ಸಾಮರ್ಥ್ಯಗಳಿಗೆ ಭಾರೀ ಹೊಡೆತವನ್ನು ನೀಡಿವೆ ಎಂದು ವರದಿಯಾಗಿದ್ದು,ಇದೇ ವೇಳೆ ತೀವ್ರಗೊಳ್ಳುತ್ತಿರುವ ಸಂಘರ್ಷವು ಇಸ್ರೇಲ್ ತನ್ನ ಅತ್ಯಾಧುನಿಕ ಮತ್ತು ದುಬಾರಿ ಬೆಲೆಯ ಕ್ಷಿಪಣಿಗಳನ್ನು ಖಾಲಿ ಮಾಡದೇ ತನ್ನ ಆಕಾಶವನ್ನು ರಕ್ಷಿಸಿಕೊಳ್ಳಬಹುದೇ ಎನ್ನುವುದನ್ನು ಅವಲಂಬಿಸಿದೆ.







