ಇರಾನ್ ಗೆ ಆಘಾತ ನೀಡಲು ಡ್ರೋನ್ ಕಳ್ಳ ಸಾಗಣೆ, AIಯನ್ನು ಇಸ್ರೇಲ್ ಗೂಢಚಾರರು ಬಳಸಿದ್ದು ಹೇಗೆ?
ಕಳೆದ 3 ವರ್ಷಗಳಿಂದ ಜಂಟಿಯಾಗಿ ಕೆಲಸ ಮಾಡಿದ್ದ ಮೊಸಾದ್ ಹಾಗೂ IDF ಸೇನಾಪಡೆ!

PC : arabnews.com
ಜೆರುಸಲೇಂ: ಇತ್ತೀಚಿನ ವರ್ಷಗಳಲ್ಲೇ ಕಳೆದ ವಾರ ತನ್ನ ಗೂಢಚಾರಿಕೆ ಹಾಗೂ ಸೇನಾ ಕಾರ್ಯಾಚರಣೆಯ ಮೂಲಕ, ಉನ್ನತ ಮಟ್ಟದ ಗುರಿ ಹಾಗೂ ನಿಖರತೆಯಲ್ಲಿ ಯಶಸ್ವಿಯಾಗಿದ್ದ ಇಸ್ರೇಲ್, ಇರಾನ್ ಅನ್ನು ಸ್ತಂಭೀಭೂತಗೊಳಿಸಿ, ಕಂಗೆಡಿಸಿತು.
ಗೂಢಚಾರರು ಹಾಗೂ ಕೃತಕ ಬುದ್ಧಿಮತ್ತೆಯ ಮಾರ್ಗದರ್ಶನದೊಂದಿಗೆ ಯುದ್ಧ ವಿಮಾನಗಳು ಹಾಗೂ ಸಶಸ್ತ್ರ ಡ್ರೋನ್ ಗಳನ್ನು ಇರಾನ್ ಗೆ ಕಳ್ಳ ಸಾಗಣೆ ಮಾಡಿದ ಇಸ್ರೇಲ್, ತ್ವರಿತವಾಗಿ ತನ್ನ ವಾಯು ರಕ್ಷಣಾ ವ್ಯವಸ್ಥೆ ಹಾಗೂ ಕ್ಷಿಪಣಿ ವ್ಯವಸ್ಥೆ ಮೂಲಕ, ಇರಾನ್ ಪಾಲಿಗೆ ದುಃಸ್ವಪ್ನ ಸೃಷ್ಟಿಸಿತು.
ಇರಾನ್ ಮೇಲೆ ಹಾರಿ ಹೋಗಲು ಭಾರಿ ಸ್ವಾತಂತ್ರ್ಯ ದೊರೆತಿದ್ದರಿಂದ, ಇರಾನ್ನ ಪ್ರಮುಖ ಅಣು ಸ್ಥಾವರಗಳ ಮೇಲೆ ಬಾಂಬ್ ದಾಳಿ ನಡೆಸಲು ಹಾಗೂ ಉನ್ನತ ಸೇನಾಧಿಕಾರಿಗಳು ಹಾಗೂ ವಿಜ್ಞಾನಿಗಳನ್ನು ಹತ್ಯೆಗೈಯ್ಯುವಲ್ಲಿ ಇಸ್ರೇಲ್ ಯಶಸ್ವಿಯಾಗಿತ್ತು. ಕೆಲ ಗಂಟೆಗಳ ನಂತರ ಇರಾನ್ ಪ್ರತಿ ದಾಳಿ ನಡೆಸುವ ಹೊತ್ತಿಗೆ ಈ ಹಿಂದಿನ ಇಸ್ರೇಲ್ ದಾಳಿಗಳು ಅದರ ತೀವ್ರತೆಯನ್ನು ದುರ್ಬಲಗೊಳಿಸಿದ್ದವು. ಆ ಮೂಲಕ ಪ್ರತೀಕಾರದ ತೀವ್ರತೆ ಭಾರಿ ಪ್ರಮಾಣದಲ್ಲಿ ಕುಂಠಿತಗೊಂಡಿತ್ತು.
ಇರಾನ್ ನೊಳಕ್ಕೆ ಡ್ರೋನ್ಗಳ ಕಳ್ಳಸಾಗಣೆ
"ಈ ಕಾರ್ಯಾಚರಣೆಯ ನೀಲನಕಾಶೆಯನ್ನು ತಯಾರಿಸಲು ಮೊಸಾದ್ ಹಾಗೂ ಸೇನಾಪಡೆಗಳು ಕನಿಷ್ಠ ಕಳೆದ ಮೂರು ವರ್ಷಗಳಿಂದ ಒಟ್ಟಾಗಿ ಕೆಲಸ ಮಾಡಿದ್ದವು" ಎಂದು ಈ ದಾಳಿಯ ಬಗ್ಗೆ ತಿಳಿದಿತ್ತು ಎಂದು ಹೇಳಿಕೊಂಡಿರುವ ಇಸ್ರೇಲ್ನ ಮಾಜಿ ಬೇಹುಗಾರಿಕಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ವಿಷಯದ ಸೂಕ್ಷ್ಮತೆಯ ಹಿನ್ನೆಲೆಯಲ್ಲಿ ಅವರು ಹೆಸರೇಳಲಿಚ್ಛಿಸದೆ ಈ ಸಂಗತಿ ಬಹಿರಂಗಪಡಿಸಿದ್ದಾರೆ.
"ಕಳೆದ ಅಕ್ಟೋಬರ್ ತಿಂಗಳಲ್ಲಿ ಇಸ್ರೇಲ್ ಸರಣಿ ವಾಯು ದಾಳಿ ನಡೆಸಿದ್ದಾಗ ಬೆಳಕಿಗೆ ಬಂದಿದ್ದ ಇರಾನ್ನ ವಾಯು ರಕ್ಷಣಾ ವ್ಯವಸ್ಥೆಯ ದೌರ್ಬಲ್ಯದ ಬಗೆಗಿನ ಜ್ಞಾನವನ್ನು ಆಧರಿಸಿ, ಇಸ್ರೇಲ್ ಈ ದಾಳಿ ಯೋಜನೆಯನ್ನು ರೂಪಿಸಿತ್ತು" ಎಂದು ಅಂತಾರಾಷ್ಟ್ರೀಯ ಬಿಕ್ಕಟ್ಟು ಗುಂಪಿನಲ್ಲಿ ವಿಶ್ಲೇಷಕರಾಗಿರುವ ಇರಾನ್ ನ ನೇಸನ್ ರಫತಿ ಹೇಳಿದ್ದಾರೆ.
ಕಳೆದ ವಾರ ನಡೆಸಿದ ವಾಯು ದಾಳಿಯ ವೇಳೆ ಇರಾನ್ ನ ವಾಯು ರಕ್ಷಣೆ ಹಾಗೂ ಕ್ಷಿಪಣಿ ವ್ಯವಸ್ಥೆಯನ್ನು ಮತ್ತಷ್ಟು ಕಳೆಗುಂದಿಸಲು ಮೊಸಾದ್ ಬೇಹುಗಾರರು ಇರಾನ್ ನೊಳಕ್ಕೆ ನಿಖರ ಆಯುಧಗಳನ್ನು ಕಳ್ಳಸಾಗಣೆ ಮಾಡಿದ್ದರು. ತೀರಾ ಹತ್ತಿರದಿಂದ ದಾಳಿ ನಡೆಸಲು ಆ ಆಯುಧಗಳನ್ನು ಮುಂಚಿತವಾಗಿಯೇ ನಿಯೋಜಿಸಿದ್ದರು ಎಂದು ಹೆಸರೇಳಲಿಚ್ಛಿಸದ ಹಾಲಿ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ಈ ಆಯುಧಗಳು ಸಣ್ಣ, ಶಸ್ತ್ರಸಜ್ಜಿತ ಡ್ರೋನ್ ಗಳನ್ನು ಒಳಗೊಂಡಿದ್ದವು ಹಾಗೂ ಆ ಆಯುಧಗಳನ್ನು ಇಸ್ರೇಲ್ ಬೇಹುಗಾರರು ವಾಹನಗಳ ಮೂಲಕ ಇರಾನ್ ನೊಳಕ್ಕೆ ಕಳ್ಳಸಾಗಣೆ ಮಾಡಿದ್ದರು ಎಂದು ಮಾಜಿ ಗುಪ್ತಚರ ಅಧಿಕಾರಿಯೊಬ್ಬರು ಹೇಳಿದ್ದಾರೆ.
► ಮಾನವರನ್ನು ಗುರಿಯಾಗಿಸಿಕೊಳ್ಳಲು ಕೃತಕ ಬುದ್ಧಿಮತ್ತೆ ಹಾಗೂ ಮನುಷ್ಯ ಬುದ್ಧಿಮತ್ತೆ ಎರಡರ ಬಳಕೆ
ವಿವಿಧ ಮೂಲಗಳಿಂದ ಕಲೆ ಹಾಕಿದ ಮಾಹಿತಿಗಳನ್ನು ವಿಶ್ಲೇಷಿಸಲು ಇಸ್ರೇಲ್ ಕೃತಕ ಬುದ್ಧಿಮತ್ತೆ ಅಥವಾ ಎಐ ತಂತ್ರಜ್ಞಾನವನ್ನು ಬಳಸಿಕೊಂಡಿತ್ತು ಎಂದು ವ್ಯಕ್ತಿಗಳು ಹಾಗೂ ಸ್ಥಳಗಳ ಗುರಿಗಳ ಆಯ್ಕೆಯಲ್ಲಿ ಭಾಗಿಯಾಗಿದ್ದ ಇಸ್ರೇಲ್ ಗುಪ್ತಚರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಸ್ರೇಲಿಗರು ತಮಗೆ ದೊರೆತ ದತ್ತಾಂಶಗಳನ್ನು ತ್ವರಿತವಾಗಿ ಪರಿಶೀಲಿಸಲು ಕೃತಕ ಬುದ್ದಿಮತ್ತೆಯ ನೆರವು ಪಡೆದಿದ್ದರು ಎಂದೂ ಅವರು ಹೇಳಿದ್ದಾರೆ. ಈ ಪ್ರಯತ್ನ ಕಳೆದ ಅಕ್ಟೋಬರ್ ತಿಂಗಳಿನಿಂದ ಪ್ರಾರಂಭಗೊಂಡಿದ್ದು, ನಾನು ದಾಳಿ ಯೋಜನೆಗೆ ಆದೇಶಿಸಿದ್ದೇನೆ ಎಂದು ನೆತನ್ಯಾಹು ಹೇಳುವುದಕ್ಕೂ ಒಂದು ತಿಂಗಳು ಮೊದಲೇ ಪ್ರಾರಂಭಗೊಂಡಿತ್ತು ಎಂದು ಅವರು ಹೇಳಿದ್ದಾರೆ.
ಇಸ್ರೇಲ್ ಸೇನಾಪಡೆಯು ಯುದ್ಧದಲ್ಲಿ ಗುಪ್ತಚರ ಮೂಲಗಳಿಂದ ಪಡೆದ ಮಾಹಿತಿಯನ್ನು ವಿಶ್ಲೇಷಿಸಲು ಹಾಗೂ ಶತ್ರುಗಳ ಚಲನವಲನವನ್ನು ಅರಿಯಲು ಅಮೆರಿಕ ನಿರ್ಮಿತ ಕೃತಕ ಬುದ್ಧಿಮತ್ತೆ ಹಾಗೂ ಭೇದಕ ಸಂವಹನಗಳ ಮಾದರಿಗಳನ್ನು ಬಳಸುತ್ತದೆ ಎಂದು ಈ ವರ್ಷ The Associated Press ಸುದ್ದಿ ಸಂಸ್ಥೆ ಪ್ರಕಟಿಸಿದ್ದ ತನಿಖಾ ವರದಿಯಲ್ಲಿ ಬಯಲುಗೊಳಿಸಲಾಗಿತ್ತು. ಈ ಯುದ್ಧ ಮಾದರಿಗಳನ್ನು ಗಾಝಾದಲ್ಲಿ ಹಮಾಸ್ ವಿರುದ್ಧ ಹಾಗೂ ಲೆಬನಾನ್ ನಲ್ಲಿ ಹಿಝ್ಬುಲ್ಲಾ ವಿರುದ್ಧ ಬಳಸಿತ್ತು ಎನ್ನಲಾಗಿದೆ.
ನಾಯಕತ್ವ, ಸೇನಾಪಡೆ, ನಾಗರಿಕರು ಹಾಗೂ ಮೂಲಸೌಕರ್ಯದಂತಹ ವಿವಿಧ ಗುಂಪುಗಳಲ್ಲಿ ಮೊದಲು ಆಯ್ಕೆಗಳನ್ನಿರಿಸಲಾಗಿತ್ತು ಎಂದು ಸಂಭವನೀಯ ಗುರಿಗಳನ್ನು ಗುರುತಿಸುವ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಗುಪ್ತಚರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಂತಹವರೇನಾದರೂ ಇರಾನ್ ನ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ನಿಯಂತ್ರಿಸುವ ಇರಾನ್ನ ಅರೆ ಸೇನಾಪಡೆಯಾದ ರೆವಲ್ಯೂಷನರಿ ಗಾರ್ಡ್ನೊಂದಿಗೆ ಆಳವಾದ ಸಂಬಂಧ ಹೊಂದಿದ್ದಾರೆಯೇ ಎಂಬುದನ್ನು ಆಧರಿಸಿ ಗುರಿಗಳನ್ನು ನಿರ್ಧರಿಸಲಾಗಿತ್ತು ಎಂದು ಹೇಳಲಾಗಿದೆ.
ಕಳೆದ ಹಲವಾರು ವರ್ಷಗಳಿಂದ ಇರಾನ್ ನ ಪರಮಾಣು ಯೋಜನೆಗಳನ್ನು ಗುರಿಯಾಗಿಸಿಕೊಂಡು, ಸೈಬರ್ ದಾಳಿ ಹಾಗೂ ಇರಾನ್ ಪರಮಾಣು ವಿಜ್ಞಾನಿಗಳ ಹತ್ಯೆ ಸೇರಿದಂತೆ ಅಸಂಖ್ಯಾತ ಗೋಪ್ಯ ಕಾರ್ಯಾಚರಣೆಗಳನ್ನು ನಡೆಸಿದೆ ಎಂದು ಶಂಕಿಸಲಾಗಿದೆ. ಆದರೆ, ಇಸ್ರೇಲ್ ಇಂತಹ ಕಾರ್ಯಾಚರಣೆಗಳ ಹೊಣೆಯನ್ನು ಹೊತ್ತುಕೊಂಡಿರುವುದು ತೀರಾ ಅಪರೂಪ.
ಈ ಕುರಿತು ಪ್ರತಿಕ್ರಿಯಿಸಿದ ಇಸ್ರೇಲ್ ರಕ್ಷಣೆ ಹಾಗೂ ಭದ್ರತಾ ವೇದಿಕೆಯ ಚಿಂತಕರ ಚಾವಡಿಯ ನೇತೃತ್ವ ವಹಿಸಿರುವ ಇಸ್ರೇಲ್ನ ನಿವೃತ್ತ ಬ್ರಿಗೇಡಿಯರ್ ಜನರಲ್ ಅಮೀರ್ ಅವಿವಿ, ಇದು ಸುಮ್ಮಸುಮ್ಮನೆ ಆಗಿದ್ದಲ್ಲ. ಇಸ್ರೇಲ್ ಗುಪ್ತಚರ ದಳ ಇರಾನ್ ನಲ್ಲಿ ಹಲವಾರು ವರ್ಷಗಳ ಕಾಲ ವ್ಯಾಪಕವಾಗಿ ಕೆಲಸ ಮಾಡಿ, ತುಂಬಾ ಪ್ರಬಲವಾದ ಅಸ್ತಿತ್ವವನ್ನು ಸ್ಥಾಪಿಸಿಕೊಂಡ ನಂತರದ ಪರಿಣಾಮವಾಗಿದೆ ಎಂದು ಹೇಳಿದ್ದಾರೆ.
ಸೌಜನ್ಯ: arabnews.com







