ಇರಾನ್ನೊಂದಿಗಿನ ಸಂಘರ್ಷದಿಂದಾಗಿ ಇಸ್ರೇಲ್ನ 5,000ಕ್ಕೂ ಹೆಚ್ಚು ಮಂದಿ ನಿರ್ವಸತಿಗರು: ವರದಿ

PC : aljazeera.com
ಟೆಹ್ರಾನ್/ಟೆಲ್ ಅವೀವ್: ಇರಾನ್ನ ಪ್ರತೀಕಾರದ ಕ್ಷಿಪಣಿ ದಾಳಿಯಿಂದಾಗಿ ಇಸ್ರೇಲ್ನ ಸುಮಾರು 5,000 ಮಂದಿ ನಿರ್ವಸತಿಗರಾಗಿದ್ದಾರೆ ಎಂದು ಇಸ್ರೇಲ್ನ ಸುದ್ದಿ ಸಂಸ್ಥೆ Yedioth Ahronoth ವರದಿ ಮಾಡಿದೆ.
ಇಸ್ರೇಲ್ ರಾಜಧಾನಿ ಟೆಲ್ ಅವೀವ್ನ 907 ಮಂದಿ ಸೇರಿದಂತೆ 5,110 ಮಂದಿಯನ್ನು ನಿರ್ವಸತಿಗರು ಎಂದು ಇಸ್ರೇಲ್ ಆಂತರಿಕ ಸಚಿವಾಲಯ ವರ್ಗೀಕರಿಸಿದೆ ಎಂದು ಈ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ನಡುವೆ, ಸೊರೊಕೊ ಆಸತ್ರೆಗೆ ಭೇಟಿ ನೀಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇಸ್ರೇಲ್ ಎಲ್ಲ ಆಯ್ಕೆಗಳನ್ನು ಮುಕ್ತವಾಗಿರಿಸಿಕೊಂಡಿದೆ ಎಂದು ಘೋಷಿಸಿದ್ದಾರೆ.
ಗುರುವಾರ ಬೆಳಗ್ಗೆ ಇರಾನ್ ನ ಕ್ಷಿಪಣಿ ದಾಳಿಯಲ್ಲಿ ಹಾನಿಗೀಡಾಗಿರುವ ಬೀಎರ್ ಶೆವಾಸ್ನ ಸೊರೊಕಾ ಆಸ್ಪತ್ರೆಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭೇಟಿ ನೀಡಿ, ಪರಿಶೀಲಿಸಿದರು ಎಂದು ಈ ವರದಿಯಲ್ಲಿ ಹೇಳಲಾಗಿದೆ.
ಇರಾನ್ನ ಪರಮೋಚ್ಚ ನಾಯಕ ಖಾಮಿನೈರನ್ನು ಹತ್ಯೆಗೈಯ್ಯುವ ಸಾಧ್ಯತೆಯನ್ನು ಕೈಬಿಟ್ಟಿಲ್ಲ ಎಂದು ಈ ಭೇಟಿಯ ವೇಳೆ ನೆತನ್ಯಾಹು ಹೇಳಿದ್ದಾರೆ ಎಂದು The Times of Israel ವರದಿ ಮಾಡಿದೆ.
ಯಾರೂ ಸುರಕ್ಷಿತರಲ್ಲ ಎಂದು ಹೇಳಿದ ನೆತನ್ಯಾಹು, ಎಲ್ಲ ಆಯ್ಕೆಗಳನ್ನು ಮುಕ್ತವಾಗಿರಿಸಿಕೊಳ್ಳಲಾಗಿದೆ ಎಂದು ಘೋಷಿಸಿದ್ದಾರೆ ಎಂದು ಅದು ವರದಿ ಮಾಡಿದೆ. ಈ ವಿಷಯವನ್ನು ಮಾಧ್ಯಮಗಳೊಂದಿಗೆ ಮಾತನಾಡುವುದು ಸೂಕ್ತವಲ್ಲ ಎಂದೂ ಅವರು ಹೇಳಿದ್ದಾರೆ.
ಇದಕ್ಕೂ ಮುನ್ನ, ಇರಾನ್ ಪರಮೋಚ್ಚ ನಾಯಕ ಖಾಮಿನೈರನ್ನು ಹತ್ಯೆಗೈಯ್ಯುವುದು ಇಸ್ರೇಲ್ ನ ಯುದ್ಧ ಗುರಿಗಳಲ್ಲಿ ಒಂದಾಗಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಟ್ಝ್ ಬಹಿರಂಗವಾಗಿಯೇ ಹೇಳಿದ್ದರು.







