ವಾಟ್ಸ್ ಆ್ಯಪ್ ಇಸ್ರೇಲ್ಗೆ ಸಹಾಯ ಮಾಡುತ್ತಿದೆಯೇ? 2022ರ ತನಿಖಾ ವರದಿಯು ಹೇಳುವುದೇನು?
ಸಾಮಾಜಿಕ ದೈತ್ಯ ವೇದಿಕೆಯ ಉನ್ನತ ಹುದ್ದೆಗಳಲ್ಲಿ ಇಸ್ರೇಲ್ ಏಜೆನ್ಸಿಯ ಮಾಜಿ ಸಿಬ್ಬಂದಿಗಳು!

ಸಾಂದರ್ಭಿಕ ಚಿತ್ರ | PC : freepik.com
ಟೆಹರಾನ್ : ಇಸ್ರೇಲ್- ಇರಾನ್ ನಡುವಿನ ಸಂಘರ್ಷದ ಮಧ್ಯೆ ತಮ್ಮ ಸ್ಮಾರ್ಟ್ ಫೋನ್ಗಳಿಂದ ವಾಟ್ಸ್ ಆ್ಯಪ್ ಡಿಲೀಟ್ ಮಾಡುವಂತೆ ಇರಾನಿನ ಸರಕಾರಿ ದೂರದರ್ಶನವು ಜನರಿಗೆ ಸೂಚಿಸಿತ್ತು. ಇದು ವಾಟ್ಸ್ ಆ್ಯಪ್ ಸೇರಿದಂತೆ ಸಾಮಾಜಿಕ ವೇದಿಕೆ ಮತ್ತು ಇಸ್ರೇಲ್ ಗುಪ್ತಚರ ಸಂಸ್ಥೆ ನಡುವಿನ ಸಂಬಂಧದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು.
ವಾಟ್ಸ್ ಆ್ಯಪ್ ನ ಪೋಷಕ ಕಂಪೆನಿ ಮೆಟಾ ಇಸ್ರೇಲ್ ಪರ ಬೇಹುಗಾರಿಕೆ ಆರೋಪವನ್ನು ಬಲವಾಗಿ ನಿರಾಕರಿಸಿದೆ. ನಾವು ನಿಮ್ಮ ನಿಖರವಾದ ಸ್ಥಳವನ್ನು ಟ್ರ್ಯಾಕ್ ಮಾಡುವುದಿಲ್ಲ. ಯಾರು ಯಾರಿಗೆ ಸಂದೇಶ ಕಳುಹಿಸುತ್ತಿದ್ದಾರೆ ಎಂಬುದರ ಲಾಗ್ಗಳನ್ನು ನಾವು ಇಟ್ಟುಕೊಳ್ಳುವುದಿಲ್ಲ. ಜನರು ಪರಸ್ಪರ ಕಳುಹಿಸುತ್ತಿರುವ ವೈಯಕ್ತಿಕ ಸಂದೇಶಗಳನ್ನು ನಾವು ಟ್ರ್ಯಾಕ್ ಮಾಡುವುದಿಲ್ಲ. ನಾವು ಯಾವುದೇ ಸರಕಾರಕ್ಕೆ ಮಾಹಿತಿಯನ್ನು ಒದಗಿಸುವುದಿಲ್ಲ. ಎಂಡ್-ಟು-ಎಂಡ್ ಎನ್ಕ್ರಿಪ್ಶನ್ ಎಂದರೆ ಸಂದೇಶಗಳು ಕಳುಹಿಸುವವರು ಮತ್ತು ಸ್ವೀಕರಿಸುವವರು ಮಾತ್ರ ಅವುಗಳನ್ನು ನೋಡಬಹುದು ಎಂದು ವಾಟ್ಸ್ ಆ್ಯಪ್ ಹೇಳಿಕೊಂಡಿದೆ.
MintPress ನ್ಯೂಸ್ 2022ರ ತನಿಖೆಯು ಇಸ್ರೇಲ್ ಮಿಲಿಟರಿ ಕಣ್ಗಾವಲು ಘಟಕಗಳು, ವಿಶೇಷವಾಗಿ ಯುನಿಟ್ 8200, ವಿಶ್ವದ ಪ್ರಮುಖ ಟೆಕ್ ಕಂಪೆನಿಗಳೊಂದಿಗೆ ಎಷ್ಟು ಆಳವಾಗಿ ಸಂಬಂಧವನ್ನು ಹೊಂದಿದೆ ಎಂಬುದನ್ನು ಬಹಿರಂಗಪಡಿಸಿದೆ.
ಏನಿದು ʼಯೂನಿಟ್ 8200ʼ?:
ಸರಳವಾಗಿ ಹೇಳುವುದಾದರೆ, ʼಯೂನಿಟ್ 8200ʼ ಇಸ್ರೇಲ್ನ ಸೈಬರ್ ವಾರ್ ಏಜೆನ್ಸಿಯಾಗಿದೆ ಮತ್ತು ಕಣ್ಗಾವಲು ಕಾರ್ಯಾಚರಣೆಗಳ ಕೇಂದ್ರಬಿಂದುವಾಗಿದೆ. ಇದು ಜಾಗತಿಕ ಮಟ್ಟದಲ್ಲಿ ಬೇಹುಗಾರಿಕೆ, ಹ್ಯಾಕಿಂಗ್, ಸೈಬರ್ ಕಾರ್ಯಾಚರಣೆಗಳನ್ನು ನಡೆಸುತ್ತದೆ.
ಗಾಝಾ ಮೇಲಿನ ದಾಳಿಯಲ್ಲಿ ʼಯುನಿಟ್ 8200ʼ ಏಜೆನ್ಸಿ ಮುಂಚೂಣಿಯಲ್ಲಿತ್ತು. ಇಸ್ರೇಲ್ ಗಾಝಾ ಮೇಲೆ ಬಾಂಬ್ ದಾಳಿ ಮಾಡಿದ ಆರಂಭಿಕ ದಿನಗಳಲ್ಲಿ ಸಾವಿರಾರು ಫೆಲೆಸ್ತೀನ್ ನಾಗರಿಕರ ಹತ್ಯೆಗೆ AI-ಚಾಲಿತ "ಕೊಲೆ ಪಟ್ಟಿ" ಸಾಫ್ಟ್ವೇರ್ ಅನ್ನು ಯುನಿಟ್ 8200 ಅಭಿವೃದ್ಧಿಪಡಿಸಿದೆ ಎಂದು ಹೇಳಲಾಗಿತ್ತು. ʼಯುನಿಟ್ 8200ʼ ಜಾಗತಿಕ ಸೈಬರ್ ಕಾರ್ಯಾಚರಣೆಗಳಲ್ಲೂ ಪಾತ್ರ ವಹಿಸಿತ್ತು.
ʼMintPressʼ ತನಿಖಾ ವರದಿ ಹೇಳಿದ್ದೇನು?
ಪತ್ರಕರ್ತ ಅಲನ್ ಮ್ಯಾಕ್ಲಿಯೋಡ್ ನಡೆಸಿದ 2022ರ ಮಿಂಟ್ಪ್ರೆಸ್ ತನಿಖೆಯು, ಇಸ್ರೇಲ್ನ ಸೈಬರ್ ವಾರ್ ಏಜೆನ್ಸಿ ʼಯುನಿಟ್ 8200ʼನ ನೂರಾರು ಮಾಜಿ ಸಿಬ್ಬಂದಿಗಳು ಈಗ ವಿಶ್ವದ ಡಿಜಿಟಲ್ ಮೂಲಸೌಕರ್ಯ ಮತ್ತು ಸಂವಹನವನ್ನು ನಿರ್ವಹಿಸುವ ಕಂಪೆನಿಗಳಾದ ಗೂಗಲ್, ಮೈಕ್ರೋಸಾಫ್ಟ್, ಅಮೆಝಾನ್ ಮತ್ತು ಮೆಟಾದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಬಹಿರಂಗಪಡಿಸಿದೆ.
ಈ ಮಾಜಿ ಅಧಿಕಾರಿಗಳಲ್ಲಿ ಹಲವರು ಈಗ ಡೇಟಾ ಭದ್ರತೆ, ಗೌಪ್ಯತೆ ನಿರ್ವಹಣೆ ವಿಭಾಗಗಳಲ್ಲಿ ಪ್ರಮುಖ ಹುದ್ದೆಗಳಲ್ಲಿದ್ದಾರೆ. ಕೆಲವರು ಮಿಲಿಟರಿಯನ್ನು ತೊರೆದ ತಕ್ಷಣ ಗೂಗಲ್, ಮೈಕ್ರೋಸಾಫ್ಟ್, ಅಮೆಝಾನ್ ಮತ್ತು ಮೆಟಾ ಕಂಪೆನಿಗಳಲ್ಲಿ ಸೇರಿಕೊಂಡಿದ್ದಾರೆ ಎಂದು ತಿಳಿಸಿದೆ.
WhatsApp, Facebook ಮತ್ತು Instagramಗಳನ್ನು ಹೊಂದಿರುವ ಮೆಟಾ, ʼUnit 8200ʼ ಏಜೆನ್ಸಿಯಲ್ಲಿ ಕೆಲಸ ಮಾಡಿದ ಅನುಭವಿಗಳನ್ನು ನೇಮಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಮೆಟಾದ ಮೇಲ್ವಿಚಾರಣಾ ಮಂಡಳಿಯಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಳ್ಳುವವರಲ್ಲಿ ಓರ್ವರು ಮಾಜಿ ಇಸ್ರೇಲ್ ನ್ಯಾಯ ಸಚಿವಾಲಯದ ಅಧಿಕಾರಿ ಮತ್ತು ʼUnit 8200ʼ ಅನುಭವಿ ಎಂದು ತನಿಖೆಯು ಬಯಲುಗೊಳಿಸಿದೆ.
WhatsApp ʼಯುನಿಟ್ 8200ʼ ಏಜೆನ್ಸಿಯ ಅಧಿಕಾರಿಗಳನ್ನು ನೇಮಿಸಿಕೊಂಡಿದೆ ಎಂದು ನೇರವಾಗಿ ಆರೋಪಿಸಲಾಗಿಲ್ಲ. ಆದರೆ ಅದರ ಮಾತೃ ಕಂಪೆನಿಯು ಹೆಚ್ಚಿನ ಸಿಬ್ಬಂದಿಯನ್ನು ಹೊಂದಿದೆ ಎಂದು ವರದಿಯು ಬಹಿರಂಗಪಡಿಸಿದೆ.
ಮೈಕ್ರೋಸಾಫ್ಟ್ ಸಹ 160ಕ್ಕೂ ಹೆಚ್ಚು ʼUnit 8200ʼ ಏಜೆನ್ಸಿಯ ಸದಸ್ಯರನ್ನು ನೇಮಿಸಿಕೊಂಡಿದೆ ಎಂದು ವರದಿಯು ತಿಳಿಸಿದೆ.
ಇದಲ್ಲದೆ ಗೂಗಲ್, ಅಮೆಝಾನ್ ಮತ್ತು ಇಸ್ರೇಲ್ ಸರಕಾರದ ನಡುವೆ 1.2 ಬಿಲಿಯನ್ನ ಪ್ರಾಜೆಕ್ಟ್ ನಿಂಬಸ್ ಒಪ್ಪಂದವಿದೆ. ಇದು ಮಿಲಿಟರಿ ಬಳಕೆಗಾಗಿ AI ಮತ್ತು ಕಣ್ಗಾವಲು ಸಾಧನಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ವರದಿಯು ತಿಳಿಸಿದೆ.
ಈ ಯೋಜನೆಯು ಎರಡೂ ಕಂಪೆನಿಗಳ ಉದ್ಯೋಗಿಗಳ ಪ್ರತಿಭಟನೆಗೆ ಕಾರಣವಾಯಿತು. ನೂರಾರು ಉದ್ಯೋಗಿಗಳು ಉದ್ಯೋಗದಾತರು ಮಾನವ ಹಕ್ಕುಗಳ ಉಲ್ಲಂಘನೆಗೆ ಅನುವು ಮಾಡಿಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ʼUnit 8200ʼ ಏಜೆನ್ಸಿಯ ಮಾಜಿ ಸಿಬ್ಬಂದಿಗಳು ಈ ವೇದಿಕೆಯಲ್ಲಿ ಕಾರ್ಯ ನಿರ್ವಹಿಸುವುದರಿಂದ ಬೃಹತ್ ಪ್ರಮಾಣದಲ್ಲಿ ಗೌಪ್ಯತೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆಗೆ ಅಪಾಯವನ್ನುಂಟುಮಾಡುತ್ತದೆ ಎಂದು ʼಮಿಂಟ್ಪ್ರೆಸ್ʼ ವರದಿ ಎಚ್ಚರಿಸಿದೆ.
ಕೃಪೆ: telegraphindia.com







