ಹಮಾಸ್ ಹಸ್ತಾಂತರಿಸಿದ ಮೃತದೇಹ ಒತ್ತೆಯಾಳುಗಳದ್ದಲ್ಲ: ಇಸ್ರೇಲ್

Photo Credit : aljazeera.com
ಟೆಲ್ ಅವೀವ್: ಹಮಾಸ್ ನಿಂದ ರೆಡ್ ಕ್ರಾಸ್ ಗೆ ಇತ್ತೀಚೆಗೆ ಹಸ್ತಾಂತರಗೊಂಡಿರುವ ಮೂರು ಶವಗಳು ಯಾವುದೇ ಒತ್ತೆಯಾಳುಗಳಿಗೆ ಸಂಬಂಧಿಸಿದ್ದಲ್ಲ ಎಂದು ಶನಿವಾರ ಇಸ್ರೇಲ್ ಸೇನಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಇತ್ತೀಚಿನ ಈ ಬೆಳವಣಿಗೆಯಿಂದ ಹಮಾಸ್-ಇಸ್ರೇಲ್ ನಡುವೆ ಅಮೆರಿಕ ಮಧ್ಯಸ್ಥಿಕೆ ವಹಿಸಿದ್ದ ಕದನ ವಿರಾಮ ಮುರಿದು ಬೀಳುವ ಅಪಾಯ ಎದುರಾಗಿದೆ.
ಗಾಝಾದ 30 ನಾಗರಿಕರ ಶವಗಳನ್ನು ಇಸ್ರೇಲ್ ಹಸ್ತಾಂತರಗೊಳಿಸಿದ ಬೆನ್ನಿಗೇ, ಅಕ್ಟೋಬರ್ 31ರಂದು ಈ ಮೂರು ಶವಗಳನ್ನು ರೆಡ್ ಕ್ರಾಸ್ ಗೆ ಹಮಾಸ್ ಹಸ್ತಾಂತರಿಸಿದೆ. ಹಮಾಸ್ ಎರಡು ಶವಗಳನ್ನು ಹಸ್ತಾಂತರಿಸಿದ ಬಳಿಕ, ಹಮಾಸ್-ಇಸ್ರೇಲ್ ನಡುವೆ ಏರ್ಪಟ್ಟಿದ್ದ ಕದನ ವಿರಾಮವು ಅಂತ್ಯಗೊಳ್ಳುವ ಸೂಚನೆ ಕಂಡು ಬರತೊಡಗಿದೆ.
ಮೂವರು ಅಪರಿಚಿತ ವ್ಯಕ್ತಿಗಳ ಶವಗಳನ್ನು ಶುಕ್ರವಾರ ಇಸ್ರೇಲ್ ಗೆ ಹಸ್ತಾಂತರಿಸಿದ ಬಳಿಕ, ಆ ಶವಗಳನ್ನು ಇಡೀ ರಾತ್ರಿ ಪರೀಕ್ಷೆಗೊಳಪಡಿಸಲಾಗಿದೆ. ಹಮಾಸ್-ಇಸ್ರೇಲ್ ನಡುವೆ ಯುದ್ಧ ಭುಗಿಲೇಳಲು ಕಾರಣವಾಗಿದ್ದ ಅಕ್ಟೋಬರ್ 7, 2023ರಂದು ದಕ್ಷಿಣ ಇಸ್ರೇಲ್ ಮೇಲಿನ ಹಮಾಸ್ ದಾಳಿಯ ವೇಳೆ ಒತ್ತೆಯಾಳುಗಳನ್ನಾಗಿಸಿಕೊಂಡಿದ್ದ ಇಸ್ರೇಲ್ ಪ್ರಜೆಗಳಿಗೆ ಈ ಮೃತ ದೇಹಗಳು ಸಂಬಂಧಿಸಿಲ್ಲ ಎಂದು ಇಸ್ರೇಲ್ ಗುಪ್ತಚರ ವಿಭಾಗ ಮಾಹಿತಿ ನೀಡಿದೆ ಎಂದು ಓರ್ವ ಇಸ್ರೇಲ್ ಸೇನಾಧಿಕಾರಿ ಎಚ್ಚರಿಸಿದ್ದಾರೆ.
ಆ ಮೃತ ದೇಹಗಳು ಯಾರದ್ದು ಹಾಗೂ ಆ ಮೃತ ದೇಹಗಳನ್ನು ಯಾಕೆ ಇಸ್ರೇಲ್ ಗೆ ಮರಳಿಸಲಾಗಿದೆ ಎಂಬುದು ಇನ್ನೂ ಅಸ್ಪಷ್ಟವಾಗಿದೆ ಎಂದು ವರದಿಯಾಗಿದೆ.







