44 ದಿನಗಳಲ್ಲಿ ಸುಮಾರು 500 ಸಲ ಗಾಝಾ ಕದನ ವಿರಾಮವನ್ನು ಉಲ್ಲಂಘಿಸಿ ನೂರಾರು ಜನರನ್ನು ಕೊಂದ ಇಸ್ರೇಲ್ !

Photo Credit ; AP \ PTI
ಗಾಝಾ,ನ.23: ಗಾಝಾ ಸರಕಾರದ ಮಾಧ್ಯಮ ಕಚೇರಿಯ ಪ್ರಕಾರ, ಅಕ್ಟೋಬರ್ 10ರಂದು ಅಮೆರಿಕದ ಮಧ್ಯಸ್ಥಿಕೆಯಲ್ಲಿ ಗಾಝಾ ಕದನ ವಿರಾಮ ಜಾರಿಗೊಂಡ ಬಳಿಕ 44 ದಿನಗಳಲ್ಲಿ ಕನಿಷ್ಠ 497 ಸಲ ಅದನ್ನು ಉಲ್ಲಂಘಿಸಿರುವ ಇಸ್ರೇಲ್ ನೂರಾರು ಫೆಲೆಸ್ತೀನಿಗಳನ್ನು ಕೊಂದಿದೆ.
ದಾಳಿಗಳಲ್ಲಿ ಸುಮಾರು 342 ನಾಗರಿಕರು ಸಾವನ್ನಪ್ಪಿದ್ದು, ಬಲಿಯಾದವರಲ್ಲಿ ಹೆಚ್ಚಿನವರು ಮಕ್ಕಳು, ಮಹಿಳೆಯರು ಮತ್ತು ವೃದ್ಧರಾಗಿದ್ದಾರೆ.
‘ಇಸ್ರೇಲಿ ಅಧಿಕಾರಿಗಳಿಂದ ಕದನ ವಿರಾಮ ಒಪ್ಪಂದದ ನಿರಂತರ ಗಂಭೀರ ಮತ್ತು ವ್ಯವಸ್ಥಿತ ಉಲ್ಲಂಘನೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ’ ಎಂದು ಶನಿವಾರ ಹೇಳಿಕೆಯಲ್ಲಿ ತಿಳಿಸಿರುವ ಮಾಧ್ಯಮ ಕಚೇರಿಯು,ಇವು ಅಂತರರಾಷ್ಟ್ರೀಯ ಮಾನವೀಯ ಕಾನೂನು ಮತ್ತು ಒಪ್ಪಂದಕ್ಕೆ ಲಗತ್ತಾದ ಮಾನವೀಯ ಶಿಷ್ಟಾಚಾರದ ಸ್ಪಷ್ಟ ಉಲ್ಲಂಘನೆಗಳಾಗಿವೆ. ಈ ಉಲ್ಲಂಘನೆಗಳ ಪೈಕಿ 27 ಇಂದು( ಶನಿವಾರ) ಸಂಭವಿಸಿದ್ದು, 24 ಜನರು ಹುತಾತ್ಮರಾಗಿದ್ದಾರೆ ಮತ್ತು 87 ಜನರು ಗಾಯಗೊಂಡಿದ್ದಾರೆ ಎಂದು ತಿಳಿಸಿದೆ.
ತನ್ನ ಉಲ್ಲಂಘನೆಗಳಿಂದ ಉಂಟಾಗುವ ಮಾನವೀಯ ಮತ್ತು ಭದ್ರತಾ ಪರಿಣಾಮಗಳಿಗೆ ಇಸ್ರೇಲ್ ಸಂಪೂರ್ಣವಾಗಿ ಹೊಣೆಯಾಗಿದೆ ಎಂದೂ ಅದು ಹೇಳಿದೆ.
ಧ್ವಂಸಗೊಂಡಿರುವ ಗಾಝಾಕ್ಕೆ ತೀರ ಅಗತ್ಯವಿರುವ ನೆರವು ಹಾಗೂ ವೈದ್ಯಕೀಯ ಸಾಮಗ್ರಿಗಳ ಸಂಪೂರ್ಣ ಮತ್ತು ಮುಕ್ತ ಪೂರೈಕೆಯನ್ನು ಕದನ ವಿರಾಮ ಒಪ್ಪಂದದಲ್ಲಿ ಕಡ್ಡಾಯಗೊಳಿಸಿದ್ದರೂ ಇಸ್ರೇಲ್ ಅದನ್ನು ನಿರ್ಬಂಧಿಸುತ್ತಲೇ ಇದೆ.
ಇಸ್ರೇಲ್ ಸೇನೆಯು ಶನಿವಾರ ಗಾಝಾದಾದ್ಯಂತ ಸರಣಿ ವಾಯುದಾಳಿಗಳನ್ನು ನಡೆಸಿದ್ದು,ಮಕ್ಕಳು ಸೇರಿದಂತೆ ಕನಿಷ್ಠ 24 ಫೆಲೆಸ್ತೀನಿಗಳು ಕೊಲ್ಲಲ್ಪಟ್ಟಿದ್ದಾರೆ.
ಗಾಝಾದ ‘ಹಳದಿ ರೇಖೆ’ಯಿಂದ ಒಳಗೆ ಇಸ್ರೇಲ್ ಆಕ್ರಮಿತ ಪ್ರದೇಶದಲ್ಲಿ ಹಮಾಸ್ ಹೋರಾಟಗಾರನೋರ್ವ ಇಸ್ರೇಲಿ ಸೈನಿಕರ ಮೇಲೆ ದಾಳಿ ಮಾಡಿದ ಬಳಿಕ ಈ ದಾಳಿಗಳನ್ನು ನಡೆಸಲಾಗಿದ್ದು,ಐವರು ಹಿರಿಯ ಹಮಾಸ್ ಹೋರಾಟಗಾರರನ್ನು ಕೊಲ್ಲಲಾಗಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಹು ಅವರ ಕಚೇರಿಯು ತಿಳಿಸಿದೆ.
ಇಸ್ರೇಲಿ ಸೇನೆಯು ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿ ತನ್ನ ಪಡೆಗಳನ್ನು ತೀರ ಒಳಪ್ರದೇಶಗಳಿಗೆ ಸ್ಥಳಾಂತರಿಸಿರುವುದರಿಂದ ಉತ್ತರ ಗಾಝಾದಲ್ಲಿ ಡಝನ್ಗಟ್ಟಲೆ ಫೆಲೆಸ್ತೀನಿ ಕುಟುಂಬಗಳು ಮುತ್ತಿಗೆಯಡಿ ಇವೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಇಸ್ರೇಲ್ ಮತ್ತು ಹಮಾಸ್ ನಡುವಿನ ಒಪ್ಪಂದದಲ್ಲಿ ನಿಗದಿಗೊಳಿಸಲಾಗಿರುವ ಹಳದಿ ರೇಖೆಯು ಗುರುತಿಸದ ಗಡಿಯನ್ನು ಸೂಚಿಸುತ್ತಿದ್ದು,ಕಳೆದ ತಿಂಗಳು ಕದನ ವಿರಾಮ ಒಪ್ಪಂದ ಜಾರಿಗೆ ಬಂದಾಗ ಇಸ್ರೇಲ್ ಸೇನೆಯು ಅಲ್ಲಿ ಮರುಸ್ಥಾಪನೆಗೊಂಡಿತ್ತು. ಇದು ಗಡಿ ರೇಖೆಯನ್ನು ಸಮೀಪಿಸುವ ಫೆಲೆಸ್ತೀನಿಯರನ್ನು ಗುಂಡಿಕ್ಕಿ ಕೊಲ್ಲುತ್ತಿರುವ ಇಸ್ರೇಲ್ಗೆ ಅರ್ಧಕ್ಕೂ ಹೆಚ್ಚಿನ ಕರಾವಳಿ ಪ್ರದೇಶದ ಮೇಲೆ ತನ್ನ ನಿಯಂತ್ರಣವನ್ನು ಉಳಿಸಿಕೊಳ್ಳಲು ಅವಕಾಶ ಒದಗಿಸಿದೆ.
ಇಸ್ರೇಲ್ ‘ಕಲ್ಪಿತ ನೆಪಗಳಡಿ’ ಕದನ ವಿರಾಮವನ್ನು ಉಲ್ಲಂಘಿಸುತ್ತಿದೆ ಎಂದು ಶನಿವಾರ ಆರೋಪಿಸಿರುವ ಹಮಾಸ್,ಒಪ್ಪಂದದಲ್ಲಿ ಮಧ್ಯಸ್ಥಿಕೆ ವಹಿಸಿದ್ದ ಅಮೆರಿಕ, ಈಜಿಪ್ಟ್ ಮತ್ತು ಖತರ್ ತಕ್ಷಣ ಮಧ್ಯ ಪ್ರವೇಶಿಸುವಂತೆ ಕರೆ ನೀಡಿದೆ.







