ತನ್ನ ನೆರೆಹೊರೆಯ ರಾಷ್ಟ್ರಗಳಿಗೆ ಶತ್ರುವಾಗಿರುವ ಇಸ್ರೇಲ್ ನರಮೇಧದಲ್ಲಿ ತೊಡಗಿದೆ : ವಿಶ್ವಸಂಸ್ಥೆಯಲ್ಲಿ ಖತರ್ ಖಂಡನೆ

Photo credit: aljazeera
ವಿಶ್ವಸಂಸ್ಥೆ, ಅ.21: ಇಸ್ರೇಲ್ ಶತ್ರುಗಳಿಂದ ಸುತ್ತುವರಿದ ಪ್ರಜಾಪ್ರಭುತ್ವ ರಾಷ್ಟ್ರವಲ್ಲ. ಆದರೆ ತನ್ನನ್ನು ಸುತ್ತುವರಿದ ನೆರೆಹೊರೆಯವರಿಗೆ ಶತ್ರುವಾಗಿದೆ ಎಂದು ಖತರ್ನ ಅಮೀರ್ ಮಂಗಳವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಖಂಡಿಸಿದ್ದಾರೆ.
ಸಭೆಯನ್ನುದ್ದೇಶಿಸಿ ಮಾತನಾಡಿದ ಖತರ್ ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ ` ಇಸ್ರೇಲ್ ಗಾಝಾದಲ್ಲಿ ನರಮೇಧದಲ್ಲಿ ತೊಡಗಿದೆ ಮತ್ತು ಅದರ ನಾಯಕರು ಫೆಲೆಸ್ತೀನ್ ರಾಷ್ಟ್ರದ ಸ್ಥಾಪನೆಯನ್ನು ತಡೆಯುತ್ತಿರುವುದಕ್ಕೆ ಹೆಮ್ಮೆ ಪಡುತ್ತಿದ್ದಾರೆ. ಅಂತಹ ರಾಷ್ಟ್ರ ಎಂದಿಗೂ ಸ್ಥಾಪನೆಯಾಗದು ಎಂದು ಘೋಷಿಸುತ್ತಿದ್ದಾರೆ. ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಅಥವಾ ಅರಬ್ ಶಾಂತಿ ಉಪಕ್ರಮಗಳಿಗೆ ಬದ್ಧವಾಗಿರುವ ರಾಷ್ಟ್ರಗಳಿಂದ ಇಸ್ರೇಲ್ ಸುತ್ತುವರಿದಿದೆ. ಆದರೆ ಇಸ್ರೇಲ್ ಒಪ್ಪಂದಗಳನ್ನು ಮಾಡಿಕೊಳ್ಳುವುದಿಲ್ಲ. ಅದು ತನ್ನ ಸುತ್ತಮುತ್ತಲಿನ ಅರಬ್ ನೆರೆಹೊರೆಯವರ ಮೇಲೆ ತನ್ನ ಇಚ್ಛೆಯನ್ನು ಹೇರಲು ಬಯಸುತ್ತಿದೆ. ತನ್ನ ಇಚ್ಛೆಯನ್ನು ವಿರೋಧಿಸುವ ಎಲ್ಲರಿಗೂ ಯೆಹೂದಿ ವಿರೋಧಿಗಳು ಅಥವಾ ಭಯೋತ್ಪಾದಕರೆಂಬ ಹಣೆಪಟ್ಟಿ ಕಟ್ಟುತ್ತದೆ. ಇಸ್ರೇಲ್ನ ಮಿತ್ರರು ಕೂಡಾ ಈ ಸತ್ಯವನ್ನು ಅರಿತು ಅದನ್ನು ತಿರಸ್ಕರಿಸುತ್ತಿದ್ದಾರೆ' ಎಂದು ಅಲ್-ಥಾನಿ ಖಂಡಿಸಿದ್ದಾರೆ.





