ಆಕ್ರಮಿತ ಪಶ್ಚಿಮದಂಡೆಯಲ್ಲಿ ಹೊಸ ವಸಾಹತು ಸ್ಥಾಪನೆ: ಇಸ್ರೇಲ್ ಘೋಷಣೆ
22 ವಸಾಹತು ಸ್ಥಾಪನೆಗೆ ಇಸ್ರೇಲ್ ಸರಕಾರ ಅನುಮೋದನೆ

PC : aljazeera.com
ರಮಲ್ಲಾ: ಆಕ್ರಮಿತ ಪಶ್ಚಿಮ ದಂಡೆಯಲ್ಲಿ 22 ಹೊಸ ಯಹೂದಿ ವಸಾಹತುಗಳನ್ನು ಇಸ್ರೇಲ್ ಸರಕಾರ ಅನುಮೋದಿಸಿದೆ ಎಂದು ವಿತ್ತಸಚಿವ ಬೆಝಾಲೆಲ್ ಸ್ಮೊಟ್ರಿಚ್ ಗುರುವಾರ ಘೋಷಿಸಿದ್ದಾರೆ.
ಹೊಸ ವಸಾಹತುಗಳು ಪಶ್ಚಿಮದಂಡೆಯ ಉತ್ತರದಲ್ಲಿ ಇರುತ್ತದೆ ಎಂದವರು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಸ್ತಿತ್ವದಲ್ಲಿರುವ `ಹೊರಠಾಣೆಗಳನ್ನು' ಕಾನೂನುಬದ್ಧಗೊಳಿಸಲಾಗುತ್ತದೆ ಮತ್ತು ಹೊಸ ವಸಾಹತುಗಳನ್ನೂ ನಿರ್ಮಿಸಲಾಗುವುದು ಎಂದು ರಕ್ಷಣಾ ಇಲಾಖೆಯನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಪಾಶ್ಚಿಮಾತ್ಯರ ಬೆಂಬಲ ಪಡೆದಿರುವ ಫೆಲೆಸ್ತೀನಿಯನ್ ಅಥಾರಿಟಿ(ಪಿಎ) ಮತ್ತು ಹಮಾಸ್ ಇದನ್ನು ಖಂಡಿಸಿವೆ. `ಇದು ಅಪಾಯಕಾರಿ ಉಲ್ಬಣವಾಗಿದ್ದು ಇಸ್ರೇಲ್ ಈ ಪ್ರದೇಶವನ್ನು ಹಿಂಸೆ ಮತ್ತು ಅಸ್ಥಿರತೆಯ ಆವರ್ತಕ್ಕೆ ಎಳೆಯುವುದನ್ನು ಮುಂದುವರಿಸಿದೆ. ಈ ತೀವ್ರವಾದಿ ಇಸ್ರೇಲ್ ಸರಕಾರವು ಸ್ವತಂತ್ರ್ಯ ಫೆಲೆಸ್ತೀನ್ ರಾಷ್ಟ್ರ ಸ್ಥಾಪನೆಯನ್ನು ತಡೆಯಲು ಎಲ್ಲಾ ರೀತಿಯಿಂದಲೂ ಪ್ರಯತ್ನಿಸುತ್ತಿದೆ' ಎಂದು ಫೆಲೆಸ್ತೀನ್ ಅಧ್ಯಕ್ಷ ಮಹ್ಮೂದ್ ಅಬ್ಬಾಸ್ ಅವರ ವಕ್ತಾರರು ಖಂಡಿಸಿದ್ದು ಅಮೆರಿಕದ ಮಧ್ಯಪ್ರವೇಶಕ್ಕೆ ಆಗ್ರಹಿಸಿದ್ದಾರೆ.
ಪಶ್ಚಿಮದಂಡೆ ಮತ್ತು ಪೂರ್ವ ಜೆರುಸಲೇಂನಲ್ಲಿ 2.7 ದಶಲಕ್ಷ ಫೆಲೆಸ್ತೀನೀಯರ ಜೊತೆಗೆ ಸುಮಾರು 7 ಲಕ್ಷ ಇಸ್ರೇಲಿ ವಸಾಹತುಗಾರರು ವಾಸಿಸುತ್ತಿದ್ದಾರೆ. ಈ ಪ್ರದೇಶಗಳನ್ನು 1967ರ ಯುದ್ಧದಲ್ಲಿ ಜೋರ್ಡಾನ್ನಿಂದ ಇಸ್ರೇಲ್ ವಶಪಡಿಸಿಕೊಂಡಿದೆ. ಬಳಿಕ ಪೂರ್ವ ಜೆರುಸಲೇಂ ಅನ್ನು ಇಸ್ರೇಲ್ ತನ್ನ ಪ್ರದೇಶಕ್ಕೆ ಸೇರಿಸಿಕೊಂಡಿದೆ. ಆದರೆ ಪಶ್ಚಿಮದಂಡೆಯ ಮೇಲೆ ಸಾರ್ವಭೌಮತ್ವವನ್ನು ಅಧಿಕೃತವಾಗಿ ವಿಸ್ತರಿಸಿಲ್ಲ. ವಸಾಹತು ವಿಸ್ತರಣೆಯು ಆಕ್ರಮಿತ ಪೂರ್ವ ಜೆರುಸಲೇಂ ಸೇರಿದಂತೆ ಪಶ್ಚಿಮದಂಡೆ ಮತ್ತು ಗಾಝಾ ಪಟ್ಟಿಯಲ್ಲಿ ಸ್ವತಂತ್ರ್ಯ ರಾಷ್ಟ್ರ ಸ್ಥಾಪನೆಯ ಆಕಾಂಕ್ಷೆಗಳಿಗೆ ಅಡಚಣೆ ಎಂದು ಫೆಲೆಸ್ತೀನೀಯರು ಹೇಳುತ್ತಿದ್ದಾರೆ. ವಸಾಹತುಗಳು ಕಾನೂನು ಬಾಹಿರವೆಂದು ಬಹುತೇಕ ಅಂತರಾಷ್ಟ್ರೀಯ ಸಮುದಾಯ ಪರಿಗಣಿಸಿದೆ.
► ಇಸ್ರೇಲ್ ನ ಮಾನವ ಹಕ್ಕುಗಳ ಸಂಸ್ಥೆ ಖಂಡನೆ
ಬಲಪಂಥೀಯ ಸರಕಾರವು ಫೆಲೆಸ್ತೀನ್ನ ಭೂಮಿಯನ್ನು ಕದಿಯುವ ಮೂಲಕ ಮತ್ತು ಪಶ್ಚಿಮದಂಡೆಯಲ್ಲಿ ಜನಾಂಗೀಯ ಶುದ್ಧೀಕರಣದ ಮೂಲಕ ಯೆಹೂದಿ ಪ್ರಾಬಲ್ಯವನ್ನು ಮುನ್ನಡೆಸುತ್ತಿದೆ ಎಂದು ಇಸ್ರೇಲ್ ನ ಪ್ರಮುಖ ಮಾನವ ಹಕ್ಕುಗಳ ಸಂಸ್ಥೆ ಬಿ'ಟೆಸೆಲೆಮ್ ಆರೋಪಿಸಿದೆ. ಜೊತೆಗೆ, ಅಂತರಾಷ್ಟ್ರೀಯ ಸಮುದಾಯವು ಇಸ್ರೇಲ್ ನ ಅಪರಾಧಗಳಿಗೆ ಅನುವು ಮಾಡಿಕೊಟ್ಟಿವೆ ಎಂದು ಟೀಕಿಸಿದೆ.
ಈ ಮಧ್ಯೆ, ಪಶ್ಚಿಮದಂಡೆಯಲ್ಲಿ ವಸಾಹತುಗಳನ್ನು ವಿಸ್ತರಿಸುವುದನ್ನು ಮುಂದುವರಿಸಿದರೆ ಇಸ್ರೇಲ್ ವಿರುದ್ಧ ಉದ್ದೇಶಿತ ನಿರ್ಬಂಧಗಳನ್ನು ವಿಧಿಸುವುದಾಗಿ ಬ್ರಿಟನ್, ಫ್ರಾನ್ಸ್ ಮತ್ತು ಕೆನಡಾ ಎಚ್ಚರಿಕೆ ನೀಡಿವೆ.







