ಗಾಝಾ ನಗರದ ಮೇಲೆ ಇಸ್ರೇಲ್ ನಿಂದ ಬಾಂಬ್ ದಾಳಿ: ಕನಿಷ್ಠ 11 ಮಂದಿ ಮೃತ್ಯು

ಸಾಂದರ್ಭಿಕ ಚಿತ್ರ (File Photo: PTI)
ಗಾಝಾ, ಆ.12: ಗಾಝಾ ನಗರದ ಪೂರ್ವ ಪ್ರದೇಶಗಳ ಮೇಲೆ ಸೋಮವಾರ ರಾತ್ರಿಯಿಂದ ಇಸ್ರೇಲ್ನ ಯುದ್ಧವಿಮಾನಗಳು ಹಾಗೂ ಟ್ಯಾಂಕ್ಗಳು ಬಾಂಬ್ ದಾಳಿಯನ್ನು ತೀವ್ರಗೊಳಿಸಿದ್ದು ಕನಿಷ್ಠ 11 ಮಂದಿ ಸಾವನ್ನಪ್ಪಿರುವುದಾಗಿ ಆರೋಗ್ಯ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಗಾಝಾದಲ್ಲಿ ಆಕ್ರಮಣವನ್ನು ತೀವ್ರಗೊಳಿಸುವುದಾಗಿ ಮತ್ತು ಗಾಝಾ ನಗರವನ್ನು ವಶಕ್ಕೆ ಪಡೆಯುವುದಾಗಿ ಕಳೆದ ವಾರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಘೋಷಿಸಿದ ಬೆನ್ನಲ್ಲೇ ಇಸ್ರೇಲ್ ಪಡೆಗಳು ದಾಳಿ ತೀವ್ರಗೊಳಿಸಿವೆ. ಸೋಮವಾರ ತಡರಾತ್ರಿ ಗಾಝಾ ನಗರದ ಪೂರ್ವ ಜಿಲ್ಲಾ ವ್ಯಾಪ್ತಿಯ ಝೆಯ್ಟಾನ್ ನಗರದಲ್ಲಿ ಮನೆಯೊಂದರ ಮೇಲೆ ನಡೆದ ಬಾಂಬ್ ದಾಳಿಯಲ್ಲಿ 7 ಮಂದಿ, ಸಿಟ ಸೆಂಟರ್ ನ ಅಪಾರ್ಟ್ಮೆಂಟ್ ಕಟ್ಟಡಗಳ ಮೇಲಿನ ದಾಳಿಯಲ್ಲಿ 4 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಗಾಝಾ ಪಟ್ಟಿಯ ದಕ್ಷಿಣದಲ್ಲಿರುವ ಖಾನ್ ಯೂನಿಸ್ ನಗರ, ಕರಾವಳಿಯ ಮವಾಸಿ ನಗರದ ಮೇಲೆ ಇಸ್ರೇಲ್ ನಡೆಸಿದ ಪ್ರತ್ಯೇಕ ದಾಳಿಯಲ್ಲಿ ದಂಪತಿ, ಅವರ ಮಗು ಸೇರಿದಂತೆ ಕನಿಷ್ಠ 9 ಮಂದಿ ಸಾವನ್ನಪ್ಪಿರುವುದಾಗಿ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ. ಈ ಮಧ್ಯೆ, ಗಾಝಾದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಆಹಾರದ ಕೊರತೆ ಮತ್ತು ಅಪೌಷ್ಟಿಕತೆಯಿಂದಾಗಿ ಇಬ್ಬರು ಮಕ್ಕಳ ಸಹಿತ ಐದು ಮಂದಿ ಸಾವನ್ನಪ್ಪಿದ್ದಾರೆ ಎಂದು ಗಾಝಾದ ಆರೋಗ್ಯ ಇಲಾಖೆ ಮಂಗಳವಾರ ಹೇಳಿದೆ.





