ವೈಮಾನಿಕ ದಾಳಿಯಲ್ಲಿ ಇರಾನಿನ ನೂತನ ಕಮಾಂಡರ್ ಹತ್ಯೆ: ಇಸ್ರೇಲ್ ಸೇನೆ

ಉನ್ನತ ಕಮಾಂಡರ್ ಅಲಿ ಶದ್ಮಾನಿ (Photo: X)
ಟೆಲ್ ಅವೀವ್: ಇರಾನ್ ನಿಂದ ನೂತನವಾಗಿ ನೇಮಕಗೊಂಡ ಉನ್ನತ ಕಮಾಂಡರ್ ಅಲಿ ಶದ್ಮಾನಿಯವರನ್ನು ಐಆರ್ಜಿಸಿಯ ಖತಮ್-ಅಲ್ ಅನ್ಬಿಯಾ ಕೇಂದ್ರ ಪ್ರಧಾನ ಕಚೇರಿಯ ಮೇಲೆ ರಾತ್ರಿಯಿಡೀ ನಡೆಸಿದ ವೈಮಾನಿಕ ದಾಳಿಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಇಸ್ರೇಲಿ ರಕ್ಷಣಾ ಪಡೆ ಐಡಿಎಫ್ ಮಂಗಳವಾರ ಹೇಳಿಕೊಂಡಿದೆ.
ಇಸ್ರೇಲ್ ಪಡೆಗಳಿಂದ ಐಆರ್ಜಿಸಿಯ ಕಮಾಂಡ್ ಆಗಿದ್ದ ಲೆಫ್ಟಿನೆಂಟ್ ಜನರಲ್ ಘೋಲಮಾಲಿ ರಶೀದ್ ಅವರು ಹತರಾದ ಬಳಿಕ ಅಲಿ ಶದ್ಮಾನಿಯವರನ್ನು ನೂತನ ಕಮಾಂಡರ್ ಆಗಿ ಇರಾನಿನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಾಮಿನೈ ನೇಮಿಸಿದ್ದರು.
ಈ ಕುರಿತು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿನ ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ಅವರು, "ಲೆಫ್ಟಿನೆಂಟ್ ಜನರಲ್ ಘೋಲಮಾಲಿ ರಶೀದ್ ಅವರು ದುಷ್ಟ ಜಿಯೋನಿಸ್ಟ್ ಆಡಳಿತದ ಕೈಯಲ್ಲಿ ಹುತಾತ್ಮರಾದ ಕಾರಣ ಮತ್ತು ಮೇಜರ್ ಜನರಲ್ ಅಲಿ ಶದ್ಮಾನಿ ಅವರ ಪ್ರಶಂಸನೀಯ ಸೇವೆಗಳು ಮತ್ತು ಅಮೂಲ್ಯ ಅನುಭವದ ದೃಷ್ಟಿಯಿಂದ, ನಾನು ಮೇಜರ್ ಜನರಲ್ ಹುದ್ದೆಯನ್ನು ನೀಡುತ್ತೇನೆ. ಅವರನ್ನು ಖತಮ್ ಅಲ್-ಅನ್ಬಿಯಾ ಕೇಂದ್ರ ಪ್ರಧಾನ ಕಚೇರಿಯ ಕಮಾಂಡರ್ ಆಗಿ ನೇಮಿಸುತ್ತೇನೆ" ಎಂದು ಬರೆದಿದ್ದರು.







