ಪೂರ್ವ ಜೆರುಸಲೇಂನಲ್ಲಿ ವಿಶ್ವಸಂಸ್ಥೆಯ 6 ಶಾಲೆ ಮುಚ್ಚಿದ ಇಸ್ರೇಲ್

ಸಾಂದರ್ಭಿಕ ಚಿತ್ರ | PC : freepik.com
ಜೆರುಸಲೇಂ: ಪೂರ್ವ ಜೆರುಸಲೇಂನಲ್ಲಿ 6 ವಿಶ್ವಸಂಸ್ಥೆ ಶಾಲೆಗಳನ್ನು ಗುರುವಾರ ಇಸ್ರೇಲ್ ಮುಚ್ಚಿದ್ದು ಇದರಿಂದಾಗಿ ಸುಮಾರು 800 ಮಕ್ಕಳ ಶಿಕ್ಷಣಕ್ಕೆ ಪ್ರಶ್ನಾರ್ಥಕ ಚಿಹ್ನೆ ಎದುರಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಪೂರ್ವ ಜೆರುಸಲೇಂನಲ್ಲಿನ 6 ಶಾಲೆಗಳನ್ನು 30 ದಿನದೊಳಗೆ ಮುಚ್ಚುವಂತೆ ಕಳೆದ ತಿಂಗಳು ಇಸ್ರೇಲ್ ಪೊಲೀಸರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಆದೇಶಿಸಿದ್ದರು. ಈ ಗಡುವು ಬುಧವಾರಕ್ಕೆ(ಮೇ 7) ಅಂತ್ಯಗೊಂಡಿರುವುದರಿಂದ ಗುರುವಾರ ಶಾಲೆಗಳನ್ನು ಮುಚ್ಚಲಾಗಿದ್ದು ಮಕ್ಕಳು ಮತ್ತು ಶಿಕ್ಷಕರಿಗೆ ಜೆರುಸಲೇಂನ ಇತರ ಶಾಲೆಗಳಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಇಸ್ರೇಲ್ ಅಧಿಕಾರಿಗಳು ಹೇಳಿದ್ದಾರೆ.
ಫೆಲೆಸ್ತೀನ್ ನಿರಾಶ್ರಿತರಿಗೆ ಸಂಬಂಧಿಸಿದ ವಿಶ್ವಸಂಸ್ಥೆ ಏಜೆನ್ಸಿ(ಯುಎನ್ಆರ್ಡಬ್ಲ್ಯೂಎ) 6 ಶಾಲೆಗಳನ್ನು ನಡೆಸುತ್ತಿದೆ. ಇಸ್ರೇಲ್ ಆಕ್ರಮಿತ ಪಶ್ಚಿಮದಂಡೆಯಲ್ಲೂ ಯುಎನ್ಆರ್ಡಬ್ಲ್ಯೂಎ ಶಾಲೆಗಳಿವೆ. ಯುಎನ್ಆರ್ಡಬ್ಲ್ಯೂಎ ಶಾಲೆಗಳು ಯೆಹೂದ್ಯ ವಿರೋಧಿ ಮತ್ತು ಇಸ್ರೇಲ್ ವಿರೋಧಿ ಭಾವನೆಯನ್ನು ಕಲಿಸುತ್ತವೆ ಎಂದು ಪ್ರತಿಪಾದಿಸಿರುವ ಇಸ್ರೇಲ್ ತನ್ನ ನೆಲದಲ್ಲಿ ವಿಶ್ವಸಂಸ್ಥೆಯ ಶಾಲೆಗಳ ಕಾರ್ಯಾಚರಣೆಯನ್ನು ಈ ವರ್ಷದ ಆರಂಭದಲ್ಲಿ ನಿಷೇಧಿಸಿತ್ತು. ಇದನ್ನು ಯುಎನ್ಆರ್ಡಬ್ಲ್ಯೂಎ ನಿರಾಕರಿಸಿದೆ. ಯುಎನ್ಆರ್ಡಬ್ಲ್ಯೂಎ ಪೂರ್ವ ಜೆರುಸಲೇಂನಾದ್ಯಂತ ಫೆಲೆಸ್ತೀನಿಯನ್ ನಿರಾಶ್ರಿತರಿಗೆ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯನ್ನು ಒದಗಿಸುವ ಪ್ರಮುಖ ವ್ಯವಸ್ಥೆಯಾಗಿದೆ.







