ಇಸ್ರೇಲ್ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ | ನೆತನ್ಯಾಹು ಬಣಕ್ಕೆ 53, ವಿರೋಧ ಪಕ್ಷಗಳಿಗೆ 48 ಸ್ಥಾನ; ಅರಬ್ ಪಕ್ಷಗಳ ಬೆಂಬಲಕ್ಕಾಗಿ ಕಸರತ್ತು

ಬೆಂಜಮಿನ್ ನೆತನ್ಯಾಹು | ಗಾಡಿ ಐಸೆನ್ಕೋಟ್ Photo: x.com/LilyRose10u
ಜೆರುಸಲೇಂ, ಅ.30: ಇಸ್ರೇಲ್ ಸಂಸತ್ ಚುನಾವಣೆಯಲ್ಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಆಡಳಿತಾರೂಢ ಮೈತ್ರಿಕೂಟ ಮತ್ತು ವಿರೋಧ ಪಕ್ಷಗಳು, ಅರಬ್ ಪಕ್ಷಗಳು ಬಹುಮತ ಪಡೆಯುವಲ್ಲಿ ವಿಫಲವಾಗಿವೆ. 120 ಸದಸ್ಯ ಬಲದ ಸಂಸತ್ ನಲ್ಲಿ ಸರಕಾರ ರಚಿಸಲು ಅಗತ್ಯವಿರುವ 61 ಸ್ಥಾನಗಳನ್ನು ಯಾವುದೇ ಪಕ್ಷಗಳು ಗಳಿಸದ ಕಾರಣ ಅತಂತ್ರ ಫಲಿತಾಂಶ ಪ್ರಕಟವಾಗಿದೆ ಎಂದು Aljazeera ವರದಿ ಮಾಡಿದೆ.
ಮತ ಎಣಿಕೆ ಪೂರ್ಣಗೊಂಡಿದ್ದು, ಶೇ. 99ಕ್ಕೂ ಅಧಿಕ ಮತಗಳ ಎಣಿಕೆಯ ಬಳಿಕ ನೆತನ್ಯಾಹು ನೇತೃತ್ವದ ಬಣ 53 ಸ್ಥಾನಗಳನ್ನು ಪಡೆದಿದೆ. ವಿರೋಧ ಪಕ್ಷದ ನಾಯಕ ಹಾಗೂ ಸೇನೆಯ ಮಾಜಿ ಮುಖ್ಯಸ್ಥ ಗಡಿ ಐಸೆನ್ಕೋಟ್ ನೇತೃತ್ವದ ಬಣ 48 ಸ್ಥಾನಗಳನ್ನು ಗೆದ್ದಿದೆ. ಅರಬ್ ಪಕ್ಷಗಳ ಒಕ್ಕೂಟಕ್ಕೆ 19 ಸ್ಥಾನಗಳು ಲಭಿಸಿವೆ ಎಂದು ಇಸ್ರೇಲ್ ನ 'ಹಾರೆಟ್ಜ್' ಪತ್ರಿಕೆ ವರದಿ ಮಾಡಿದೆ.
ಸರಕಾರ ರಚನೆಗೆ 61 ಸದಸ್ಯರ ಬೆಂಬಲ ಅಗತ್ಯವಿದೆ. ಹೀಗಾಗಿ ಆಡಳಿತಾರೂಢ ಮತ್ತು ವಿರೋಧ ಪಕ್ಷಗಳೆರಡೂ ಅರಬ್ ಪಕ್ಷಗಳ ಬೆಂಬಲ ಪಡೆಯಬೇಕಾದ ಅನಿವಾರ್ಯತೆ ಎದುರಾಗಿದೆ. ಕೇಂದ್ರ ಚುನಾವಣಾ ಸಮಿತಿಯು ಬುಧವಾರ(ನ. 4)ದೊಳಗೆ ಅಂತಿಮ ಫಲಿತಾಂಶ ಪ್ರಕಟಿಸಿ ದೃಢೀಕರಿಸಲಿದೆ. ಅಲ್ಲಿಯವರೆಗೆ ಫಲಿತಾಂಶದಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ.
2023ರ ಅಕ್ಟೋಬರ್ 7ರಂದು ಹಮಾಸ್ ನಡೆಸಿದ ದಾಳಿಯ ಬಳಿಕ ಮತ್ತು ಗಾಝಾದಲ್ಲಿ ಇಸ್ರೇಲ್ ಆರಂಭಿಸಿದ ಯುದ್ಧದ ನಂತರ ನಡೆದ ಮೊದಲ ಸಾರ್ವತ್ರಿಕ ಚುನಾವಣೆ ಇದಾಗಿದೆ. ನೆತನ್ಯಾಹು ಅವರ ಆಡಳಿತದ ಕುರಿತು ಜನರ ಅಭಿಪ್ರಾಯ ತಿಳಿಯುವ ಚುನಾವಣೆಯಾಗಿ ಇದನ್ನು ಪರಿಗಣಿಸಲಾಗಿತ್ತು.
ವಿರೋಧ ಪಕ್ಷಗಳ ನಡುವೆ ಮಾತುಕತೆ :
ಚುನಾವಣೆಯಲ್ಲಿ ಬಹುಮತ ಸಿಗದ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ಪರ್ಯಾಯ ಸರಕಾರ ರಚಿಸಲು ಪ್ರಯತ್ನ ಆರಂಭಿಸಿವೆ.
'ಯಶಾರ್' ಪಕ್ಷದ ಮುಖ್ಯಸ್ಥ ಗಡಿ ಐಸೆನ್ಕೋಟ್ ಅವರು 'ಟುಗೆದರ್' ಪಕ್ಷದ ನಾಯಕ ಹಾಗೂ ಮಾಜಿ ಪ್ರಧಾನಿ ನಫ್ತಾಲಿ ಬೆನೆಟ್ ಅವರನ್ನು ಗುರುವಾರ ಭೇಟಿಯಾಗಿದ್ದಾರೆ. ಸಾಧ್ಯವಾದಷ್ಟು ಬೇಗ ಹೊಸ ಸರಕಾರ ರಚಿಸುವ ಕುರಿತು ಇಬ್ಬರೂ ಚರ್ಚಿಸಿದ್ದಾರೆ ಎಂದು 'ವೈನೆಟ್ ನ್ಯೂಸ್' ವರದಿ ಮಾಡಿದೆ.
ಇದರ ಬೆನ್ನಲ್ಲೇ ಐಸೆನ್ ಕೋಟ್ ಅವರು 'ಡೆಮೋಕ್ರಾಟ್ಸ್' ಪಕ್ಷದ ಅಧ್ಯಕ್ಷ ಯಾಯಿರ್ ಗೋಲನ್ ಅವರನ್ನೂ ಭೇಟಿಯಾಗಿದ್ದಾರೆ. ಫೆಲೆಸ್ತೀನ್ ಮೂಲದ ಇಸ್ರೇಲಿ ನಾಗರಿಕರನ್ನು ಪ್ರತಿನಿಧಿಸುವ ಅರಬ್ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದನ್ನು ಬೆಂಬಲಿಸಿರುವ ವಿರೋಧ ಪಕ್ಷಗಳ ನಾಯಕರಲ್ಲಿ ಗೋಲನ್ ಪ್ರಮುಖರು. ವಿರೋಧ ಪಕ್ಷಗಳ ಮೈತ್ರಿಕೂಟದ ಇತರ ರಾಜಕೀಯ ಗುಂಪುಗಳು ಅರಬ್ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದನ್ನು ವಿರೋಧಿಸಿವೆ.
ಗೋಲನ್ ಅವರು 'ಯುನೈಟೆಡ್ ಅರಬ್ ಲಿಸ್ಟ್' (ರಾಮ್) ಪಕ್ಷದ ನಾಯಕ ಮನ್ಸೂರ್ ಅಬ್ಬಾಸ್ ಅವರೊಂದಿಗೂ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ. ಅರಬ್ ಪಕ್ಷಗಳು ಒಟ್ಟು 19 ಸ್ಥಾನಗಳನ್ನು ಗೆದ್ದಿದ್ದು, ಈ ಪೈಕಿ ಮನ್ಸೂರ್ ಅಬ್ಬಾಸ್ ನೇತೃತ್ವದ ರಾಮ್ ಪಕ್ಷಕ್ಕೆ ಏಳು ಸ್ಥಾನಗಳು ಲಭಿಸಿವೆ.
ಅಬ್ಬಾಸ್ ಅವರನ್ನು ಭೇಟಿಯಾದ ಬಳಿಕ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪ್ರತಿಕ್ರಿಯಿಸಿರುವ ಗೋಲನ್, 'ಇದು ಕಾರ್ಯಪ್ರವೃತ್ತರಾಗಬೇಕಾದ ಸಮಯ. ಬದಲಾವಣೆ ತರುವ ಮತ್ತು ಇಸ್ರೇಲ್ ಅನ್ನು ರಕ್ಷಿಸುವ ಅವಕಾಶವನ್ನು ಕಳೆದುಕೊಳ್ಳದಿರುವುದು ನಮ್ಮ ಜವಾಬ್ದಾರಿ' ಎಂದು ಹೇಳಿದ್ದಾರೆ.
ಆದರೆ, ಅರಬ್ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಐಸೆನ್ಕೋಟ್ ಈ ಹಿಂದೆ ಭರವಸೆ ನೀಡಿದ್ದಾರೆ. ಹೀಗಾಗಿ ವಿರೋಧ ಪಕ್ಷಗಳ ಬಣಕ್ಕೆ ಸರಕಾರ ರಚಿಸುವುದು ಸವಾಲಾಗಿದೆ.
ಅರಬ್ ಪಕ್ಷಗಳ ಬೆಂಬಲವಿಲ್ಲದೆ ಐಸೆನ್ಕೋಟ್ ನೇತೃತ್ವದ ವಿರೋಧ ಪಕ್ಷಗಳಿಗೆ ಬಹುಮತ ಸಿಗುವುದಿಲ್ಲ. ಆದರೆ, ಆ ಪಕ್ಷಗಳೊಂದಿಗೆ ಕೈಜೋಡಿಸುವ ಬಗ್ಗೆ ವಿರೋಧ ಪಕ್ಷಗಳಲ್ಲೇ ಭಿನ್ನಾಭಿಪ್ರಾಯವಿದೆ. ಹೀಗಾಗಿ ಸರಕಾರ ರಚನೆಯ ಮಾತುಕತೆ ಸುಲಭವಾಗಿಲ್ಲ.






